ಔಷಧಗಳ ಸಂಶೋಧನೆ ಮುಖ್ಯ

08 Jaggu 5
Published on

ವಿಜಯವಾಣಿ ಸುದ್ದಿಜಾಲ ಬೆಳಗಾವಿ

ಆರೋಗ್ಯ ವ್ಯವಸ್ಥೆಯಲ್ಲಿ ಸಾಂಪ್ರದಾಯಿಕ ಮತ್ತು ಆಧುನಿಕ ಜ್ಞಾನ ಬೆಸೆದು ಹೊಸ ಆವಿಷ್ಕಾರಗಳನ್ನು ಮಾಡುವ ಅಗತ್ಯವಿದೆ ಎಂದು ನವದೆಹಲಿ ಎಚ್.ಜೈವಿಕ ತಂತ್ರಜ್ಞಾನ ವಿಭಾಗದ ವಿಜ್ಞಾನಿ ಸಂಜಯ್ ಮಿಶ್ರಾ ಹೇಳಿದರು.

ಕೆಎಲ್‌ಇ ಫಾರ್ಮಾಸಿ (ಔಷಧ) ಮಹಾವಿದ್ಯಾಲಯವು ಕೆಎಲ್ಇ ಶತಮಾನೋತ್ಸವ ಕೇಂದ್ರದಲ್ಲಿ ಆಯೋಜಿಸಿರುವ ‘ಔಷಧ ತಂತ್ರಜ್ಞಾನ ಮತ್ತು ಫೈಟೊಫಾರ್ಮಾಸ್ಯುಟಿಕಲ್ಸ್‌ನಲ್ಲಿನ ನಾವೀನ್ಯತೆಗಳ’ ಕುರಿತು 12ನೇ ಅಂತಾರಾಷ್ಟ್ರೀಯ ಸಮ್ಮೇಳನ ಸಮಾರೋಪ ಸಮಾರಂಭದ ಅತಿಥಿಯಾಗಿ ಅವರು ಮಾತನಾಡಿದರು. ಸಾಂಪ್ರದಾಯಿಕ ಔಷಧಗಳ ಬಗ್ಗೆ ಸಂಶೋಧನೆ ಅಗತ್ಯವಿದೆ ಎಂದರು.

ಎಸ್‌ಎಫ್‌ಇ ಸಂಸ್ಥೆಯ ಸಂಸ್ಥಾಪಕ ಪ್ರೊ. ಫುಲೋಕ ಮುಖರ್ಜಿ ಮಾತನಾಡಿ, ಭವಿಷ್ಯದ ಪೀಳಿಗೆಗಾಗಿ ಸಾಂಪ್ರದಾಯಿಕ ಆರೋಗ್ಯ ಜ್ಞಾನದ ಪ್ರಸಾರದ ಅಗತ್ಯವಿದೆ ಎಂದರು.

ಸಮ್ಮೇಳನದ ಸಂಘಟನಾಧ್ಯಕ್ಷ, ಪ್ರಾಚಾರ್ಯ ಡಾ. ಸುನಿಲ್ ಜಲಾಲ್‌ಪುರೆ, ಆರೋಗ್ಯ ವ್ಯವಸ್ಥೆಯ ಅಗತ್ಯತೆಗಳನ್ನು ಪೂರೈಸಲು ಸಾಂಪ್ರದಾಯಿಕ ಔಷಧ ಜ್ಞಾನ ಪ್ರಮುಖವಾಗಿದೆ. ಸಮ್ಮೇಳನ ನಡೆಸಲು ಅವಕಾಶ ನೀಡಿದ ಎಸ್‌ಎಫ್‌ಇಗೆ ಅಭಿನಂದಿಸಿದರು. ಎಸ್‌ಎಫ್‌ಇ ಸಂಸ್ಥೆಯ ಉಪಾಧ್ಯಕ್ಷ ಡಾ. ಸಿ.ಕೆ. ಕಟಿಯಾರ, ಐಸಿಎಂಆರ್ ನಿರ್ದೇಶಕ ಡಾ. ಸುಬರ್ಣಾ ರಾಯ್, ಕಾಹೆರ್ ರಜಿಸ್ಟ್ರಾರ್ ಡಾ.ಎಂ.ಎಸ್. ಗಣಾಚಾರಿ, ಉಪ ಪ್ರಾಚಾರ್ಯ ಡಾ. ಎಂ.ಬಿ. ಪಾಟೀಲ, ಡಾ. ಪ್ರಮೋದ ಹುರ್ಕಡಲೆ ಇದ್ದರು.

ಮೂರು ದಿನಗಳ ಸಮ್ಮೇಳನದಲ್ಲಿ ಗಿಡಮೂಲಿಕೆ ಔಷಧ ಅಭಿವೃದ್ಧಿ, ಔಷಧಶಾಸ್ತ್ರ, ಸಮಗ್ರ ಔಷಧ, ನಿಯಂತ್ರಕ ಅಂಶಗಳು ಮತ್ತು ಔಷಧ ತಂತ್ರಜ್ಞಾನದಲ್ಲಿನ ಪ್ರಗತಿ ವಿಷಯಗಳನ್ನು ಒಳಗೊಂಡ ಸಮಗ್ರ ಚರ್ಚೆಗಳಾದವು. ತಾಂತ್ರಿಕ ಅಧಿವೇಶನಗಳು ನಡೆದವು. ಸಮ್ಮೇಳನದಲ್ಲಿ ಯುವ ಎಥನೋಫಾರ್ಮಕಾಲಜಿಸ್ಟ್ ಪ್ರಶಸ್ತಿ, ಅತ್ಯುತ್ತಮ ಮೌಖಿಕ ಪ್ರಸ್ತುತಿ ಪ್ರಶಸ್ತಿ ಮತ್ತು ಅತ್ಯುತ್ತಮ ಪೋಸ್ಟರ್ ಪ್ರಸ್ತುತಿ ಪ್ರಶಸ್ತಿಗಳನ್ನು ನೀಡಲಾಯಿತು. ಭಾರತ ಸೇರಿ 21 ದೇಶಗಳಿಂದ ಸುಮಾರು 700 ಪ್ರತಿನಿಧಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net