ಔಷಧ ಸಮಯೋಚಿತ ನಿರ್ವಹಣೆ ಅಗತ್ಯ

23Ravig2
ಬೆಳಗಾವಿಯ ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಆ್ಯಂಡ್ ರಿಸರ್ಚ್‌ನ ಮಹಿಳಾ ಮತ್ತು ಮಕ್ಕಳ ಆರೋಗ್ಯ ಘಟಕದಲ್ಲಿ ಶುಕ್ರವಾರ ‘ಆರ್ಟಿಎಸ್ ಕಾರ್ಬೆಟೋಸಿನ್ ಫೆರಿಂಗ್’ ಔಷಧವನ್ನು ಜಾಗತಿಕವಾಗಿ ಬಿಡುಗಡೆಗೊಳಿಸಲಾಯಿತು. ಕೆಎಲ್‌ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ಡಾ.ಹೇಮಾ ದಿವಾಕರ, ಡಾ.ಎಸ್.ಶಾಂತಕುಮಾರಿ, ಡಾ.ವಿವೇಕ ಸಾವೋಜಿ, ಬಸವರಾಜ ಇತರರಿದ್ದರು.
Published on

ಬೆಳಗಾವಿ: ಹೆರಿಗೆ ನಂತರ ಬಾಣಂತಿಯರಲ್ಲಿ ಉಂಟಾಗುವ ಅತಿಯಾದ ರಕ್ತಸ್ರಾವ ತಡೆಗಟ್ಟುವ ಔಷಧಗಳ ಸುಲಭ ಲಭ್ಯತೆ, ಸಂಗ್ರಹಣೆ ಮತ್ತು ಸಮಯೋಚಿತ ನಿರ್ವಹಣೆ ವ್ಯವಸ್ಥೆ ಅಗತ್ಯ ಎಂದು ಎಫ್‌ಐಜಿಒ ಇದರ ಗರ್ಭಾವಸ್ಥೆ ಮತ್ತು ಸಾಂಕ್ರಾಮಿಕವಲ್ಲದ ಕಾಯಿಲೆ (ಎನ್‌ಸಿಡಿ)ಗಳು ಸಮಿತಿ ಉಪಾಧ್ಯಕ್ಷೆ ಡಾ.ಹೇಮಾ ದಿವಾಕರ ಹೇಳಿದ್ದಾರೆ.

ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಆ್ಯಂಡ್ ರಿಸರ್ಚ್ ಹಾಗೂ ಜವಾಹರಲಾಲ ನೆಹರು ವೈದ್ಯಕೀಯ ಕಾಲೇಜ್ ವತಿಯಿಂದ ಮಹಿಳಾ ಮತ್ತು ಮಕ್ಕಳ ಆರೋಗ್ಯ ಘಟಕದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಆರ್ಟಿಎಸ್ ಕಾರ್ಬೆಟೋಸಿನ್ ಫೆರಿಂಗ್’ ಔಷಧ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಬೆಂಗಳೂರು ಮೂಲದ ಆರ್ಟಿಸ್ಟ್ ಫಾರ್ ಹರ್ (ಏಷ್ಯನ್ ರಿಸರ್ಚ್ ಆ್ಯಂಡ್ ಟ್ರೈನಿಂಗ್ ಇನ್‌ಸ್ಟಿಟ್ಯೂಟ್ ಫಾರ್ ಸ್ಕಿಲ್ ಟ್ರಾನ್ಸ್ಫರ್)ನ ಸಿಇಒ ಡಾ.ಹೇಮಾ ಮಾತನಾಡಿ, ಶೇ.50 ಗರ್ಭಿಣಿಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಅವರಿಗೆ ಈ ಔಷಧ ನೆರವಾಗಲಿದೆ. ಪ್ರಸ್ತುತ ದೇಶದಲ್ಲಿ ಲಭ್ಯವಿರುವ ಇಂತಹ ಔಷಧಗಳಿಗೆ ಶೈತ್ಯೀಕರಣ ಸೇರಿದಂತೆ ವಿಶೇಷ ಶೇಖರಣಾ ವ್ಯವಸ್ಥೆ ಬೇಕಾಗುತ್ತವೆ. ಆದರೆ, ಕಾರ್ಬೆಟೋಸಿನ್ ಔಷಧಕ್ಕೆ ಶೈತ್ಯೀಕರಣದ ಅಗತ್ಯವಿಲ್ಲ. ಎಲ್ಲ ರೀತಿಯ ಹವಾಮಾನದಲ್ಲೂ ಈ ಔಷಧ ಸಂಗ್ರಹಿಸಬಹುದು ಎಂದರು. ವಿದ್ಯುತ್ ಸರಬರಾಜು ಸ್ಥಿರವಾಗಿರದ, ಅಭಿವೃದ್ಧಿ ಹೊಂದುತ್ತಿರುವ ಮತ್ತು ಅಭಿವೃದ್ಧಿಯಾಗದ ದೇಶಗಳಲ್ಲಿ ಬಳಕೆಗೆ ನೂತನ ಔಷಧ ಸೂಕ್ತವಾಗಿದೆ. ಭಾರತದಲ್ಲಿ ಕಾರ್ಬೆಟೋಸಿನ್ ಬಳಕೆಯಾಗುತ್ತಿರುವುದು ಇದೇ ಮೊದಲು. ಮಗುವಿಗೆ ಜೀವ ಕೊಡುವಾಗ ತಾಯಿ ಸಾವಿಗೀಡಾಗುವ ಸ್ಥಿತಿ ಬರಲೇಬಾರದು ಎಂಬ ಉದ್ದೇಶದಿಂದ ಈ ಔಷಧ ಸಿದ್ಧಪಡಿಸಲಾಗಿದೆ. ಕೆಎಲ್ಇ ಸಂಸ್ಥೆ ಆಶ್ರಯದಲ್ಲಿ ಇಂತಹ ಕಾರ್ಯಕ್ರಮ ನಡೆಯುತ್ತಿರುವುದು ಖುಷಿ ತಂದಿದೆ ಎಂದರು.

ಎಫ್‌ಒಜಿಎಸ್‌ಐ ಅಧ್ಯಕ್ಷೆ ಡಾ. ಎಸ್.ಶಾಂತಕುಮಾರಿ ಮಾತನಾಡಿ, ಆಸ್ಪತ್ರೆಗಳಿಗೆ ಶಿಕ್ಷಣ ನೀಡಲು ಮತ್ತು ಆರೋಗ್ಯ ಕಾರ್ಯಕರ್ತರಿಗೆ ವಿವಿಧ ನಿಯಮಾವಳಿಗಳ ಬಗ್ಗೆ ವಿಶೇಷ ಅಭಿಯಾನದ ಮೂಲಕ ತರಬೇತಿ ನೀಡುವ ಪ್ರಯತ್ನ ತೀವ್ರಗೊಳಿಸಲಾಗಿದೆ. ಯಾವೊಬ್ಬ ತಾಯಿಯೂ ಕೂಡ ಹೆರಿಗೆ ವೇಳೆ ಸಾವಿಗೀಡಾಗಬಾರದು ಎನ್ನುವುದೇ ನಮ್ಮ ಧ್ಯೇಯವಾಗಿದೆ ಎಂದರು. ಕೆಎಲ್ಇ ಸೊಸೈಟಿ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂತಹ ಮಹೋನ್ನತ ಕಾರ್ಯಕ್ರಮಕ್ಕೆ ಕೆಎಲ್‌ಇ ಸಂಸ್ಥೆ ವೇದಿಕೆಯಾಗುತ್ತಿರುವುದು ಸಂತಸದ ವಿಚಾರ ಎಂದರು. ಈ ಸಂದರ್ಭದಲ್ಲಿ ಕಾರ್ಬೆಟೋಸಿನ್‌ನ 1,000 ಆಂಪೌಲ್‌ಗಳನ್ನು ಆಸ್ಪತ್ರೆಗೆ ಉಚಿತವಾಗಿ ನೀಡಲಾಯಿತು. ವಿವಿ ಉಪಕುಲಪತಿ ಡಾ.ವಿವೇಕ ಸಾವೋಜಿ, ಕಸೋಗಾ ಅಧ್ಯಕ್ಷ ಬಸವರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net