ಮೈಸೂರು: ಭಾರತದ ಫಾರ್ಮಸಿ ದೇಶಕ್ಕೆ ಮಾತ್ರವಲ್ಲದೆ ವಿಶ್ವದ ಆಸ್ತಿಯಾಗಿದ್ದು, ಸ್ವಾತಂತ್ರ್ಯ ಶತಮಾನೋತ್ಸವದ ವೇಳೆಗೆ ಔಷಧ ವಿಜ್ಞಾನ ಉದ್ಯಮ ಕ್ಷೇತ್ರದಲ್ಲಿ 400 ಬಿಲಿಯನ್ ಡಾಲರ್ ವಹಿವಾಟು ದಾಖಲಾಗುವ ಸಾಧ್ಯತೆ ಇದೆ ಎಂದು ಭಾರತೀಯ ಔಷಧ ವಿಜ್ಞಾನ ಒಕ್ಕೂಟ (ಐಪಿಎ)ದ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಜೈನ್ ಅಭಿಪ್ರಾಯಪಟ್ಟರು.
ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ, ಜೆಎಸ್‌ಎಸ್ ಔಷಧ ವಿಜ್ಞಾನ ಮಹಾವಿದ್ಯಾಲಯದಿಂದ ಶುಕ್ರವಾರದಿಂದ ನಗರದಲ್ಲಿ ಮೂರು ದಿನ ಆಯೋಜಿಸಿರುವ ‘ಅಪ್ಟಿಕಾನ್’ ಔಷಧ ವಿಜ್ಞಾನ ಶಿಕ್ಷಣ ಸಬಲೀಕರಣ ಕುರಿತ 25ನೇ ಔಷಧ ವಿಜ್ಞಾನ ಶಿಕ್ಷಕರ ಸಮಾವೇಶದಲ್ಲಿ ಮುಖ್ಯ ಭಾಷಣ ಮಾಡಿದರು.
ಪ್ರಧಾನಿ ನರೇಂದ್ರಮೋದಿ ಅವರು ಭಾರತದ ಫಾರ್ಮಸಿ ದೇಶಕ್ಕೆ ಮಾತ್ರವಲ್ಲದೆ ವಿಶ್ವದ ಆಸ್ತಿಯಾಗಿದೆ ಎಂದು ಬಣ್ಣಿಸಿದ್ದಾರೆ. ದೇಶದ ಸ್ವಾತಂತ್ರ್ಯ ಶತಮಾನೋತ್ಸವ ಆಚರಣೆಯ 2047ರ ವೇಳೆಗೆ ಔಷಧ ವಿಜ್ಞಾನ ಉದ್ಯಮದ ವಹಿವಾಟು 400 ಬಿಲಿಯನ್ ಡಾಲರ್ ಅಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಔಷಧ ವಿಜ್ಞಾನಕ್ಕೆ ಸಂಬಂಧಿಸಿದ ಎಲ್ಲ ಆಯಾಮಗಳಲ್ಲಿಯೂ ನೂತನ ತಂತ್ರಜ್ಞಾನ ಬಳಕೆ ಮಾಡಿಕೊಂಡು ಕಾರ್ಯ ಪ್ರವೃತ್ತರಾಗಬೇಕಿದೆ ಎಂದು ಶಿಕ್ಷಕರಿಗೆ ಸಲಹೆ ನೀಡಿದರು.
ಪ್ರಸ್ತುತ ದೇಶದ ಔಷಧ ವಿಜ್ಞಾನ ಉದ್ಯಮದ ವಹಿವಾಟು 15 ಬಿಲಿಯನ್ ಡಾಲರ್ ಇದ್ದು, 2030ರ ಹೊತ್ತಿಗೆ 130 ಬಿಲಿಯನ್‌ಗೆ ತಲುಪಲಿದೆ. ಆದ್ದರಿಂದ ಔಷಧ ವಿಜ್ಞಾನದ ಶಿಕ್ಷಕರು ಹಾಗೂ ಔಷಧ ತಯಾರಿಕೆ ಉದ್ಯಮಗಳು ಸೇತುಬಂಧುವಾಗಿ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.
ಯೂರೋಪ್ ದೇಶಗಳಲ್ಲಿ ಬಳಸುವ ಪ್ರತಿ ನಾಲ್ಕು ಮಾತ್ರೆಗಳಲ್ಲಿ ಒಂದು ಮಾತ್ರೆ ಭಾರತ ದೇಶದಲ್ಲಿ ಸಂಶೋಧನೆ ಮಾಡಿರುವುದು ಆಗಿದೆ. ಅಮೇರಿಕಾದಲ್ಲೂ ಭಾರತದ ಮಾತ್ರೆಗಳಿಗೆ ಬಹಳ ಬೇಡಿಕೆ ಇದೆ. ಆದ್ದರಿಂದ ಈ ಗುರಿಯನ್ನು ತಲುಪುವ ನಿಟ್ಟಿನಲ್ಲಿ ದೂರದೃಷ್ಟಿತ್ವವನ್ನು ಅಳವಡಿಸಿಕೊಂಡು ಮುನ್ನಡೆಯಬೇಕಾಗಿದೆ. ಔಷಧ ವಿಜ್ಞಾನದಲ್ಲಿ ಪ್ರಗತಿಯನ್ನು ಸಾಧಿಸಬೇಕಾದರೆ ಇಂದಿನ ಅಗತ್ಯಕ್ಕೆ ತಕ್ಕಂತೆ ಪಠ್ಯಕ್ರಮದಲ್ಲಿ ಬದಲಾವಣೆ ಮಾಡಿ, ಹೊಸರೂಪ ಅಳವಡಿಸಬೇಕಾಗಿದೆ ಎಂದು ತಿಳಿಸಿದರು.
ಪಠ್ಯಕ್ರಮದಲ್ಲಿ ಕೇವಲ ಔಷಧಕ್ಕೆ ಸಂಬಂಧಿಸಿದ ಪಾಠಗಳಲ್ಲದೇ ಉದ್ಯಮ ಕುರಿತು ಪರಿಚಯ ಮಾಡುವ ಪಾಠಗಳ ಅವಶ್ಯಕತೆ ಇದೆ. ಡಿಜಿಟಲ್ ತಂತ್ರಜ್ಞಾನದ ಈ ಯುಗದಲ್ಲಿ ವಿವಿಧ ಆ್ಯಪ್‌ಗಳ ಬಳಕೆ ಮಾಡುವ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಮಾಹಿತಿ ತಂತ್ರಜ್ಞಾನದಲ್ಲಿ ದೇಶ ಮುಂಚೂಣಿಯಲ್ಲಿ ಇರುವುದು ಔಷಧ ವಿಜ್ಞಾನ ಕ್ಷೇತ್ರದಲ್ಲಿ ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಒಂದು ರೀತಿಯಲ್ಲಿ ವರದಾನವಾಗಿದೆ. ಎಂದು ವಿಶ್ಲೇಷಿಸಿದರು.
ಔಷಧ ವಿಜ್ಞಾನದ ಸಂಶೋಧನೆ ಹಾಗೂ ತಯಾರಿಕೆಗೆ ಸಣ್ಣ್ಣ ಉದ್ಯಮಗಳ ಕೊಡುಗೆಯು ಮಹತ್ವಪೂರ್ಣವಾಗಿರುವುದರಿಂದ ಆ ಕ್ಷೇತ್ರಕ್ಕೂ ಉತ್ತೇಜನ ಅಗತ್ಯವಿದೆ. ಇಂದು ಫಾರ್ಮಸಿ, ಐಟಿ ಉದ್ಯಮ ವಿಶ್ವದ ಮುಖ್ಯ ಉದ್ದಿಮೆಗಳಾಗಿದ್ದು, ಇವೆರಡೂ ಒಂದಾದರೆ ಭಾರತ ಮೇಕ್ ಇನ್ ಇಂಡಿಯಾ ಬದಲು ಡಿಸ್ಕವರಿ ಇಂಡಿಯಾ ಆಗಲಿದೆ ಎಂದರು
ಎಪಿಟಿಐ (ಕೇಂದ್ರಿಯ)ಅಧ್ಯಕ್ಷರಾದ ಡಾ. ಮಿಲಿಂದ್ ಜೆ.ಉಮೆಕರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಭಾರತೀಯ ಫಾರ‌್ಮಸಿ ಕೌನ್ಸಿಲ್ ಅಧ್ಯಕ್ಷ ಡಾ.ಮೋಂಟು ಎಂ.ಪಟೇಲ್, ಎಪಿಟಿಐ (ಕೇಂದ್ರಿಯ) ಕಾರ್ಯದರ್ಶಿ ಡಾ.ರಾಮನ್‌ದಂಗ್, ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರು ಮಠ, ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್.ಪಿ.ಮಂಜುನಾಥ್, ಜೆಎಸ್‌ಎಸ್‌ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ನಿಕಟಪೂರ್ವ ಕುಲಪತಿ ಡಾ. ಬಿ.ಸುರೇಶ್, ಉಪ ಕುಲಪತಿ ಡಾ.ಸುರಿಂದರ್ ಸಿಂಗ್, ಜೆಎಸ್‌ಎಸ್ ಔಷಧ ವಿಜ್ಞಾನ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಟಿ.ಎಂ.ಪ್ರಮೋದ್ ಕುಮಾರ್ ಇತರರು ಇದ್ದರು.