

ಮಲ್ಲು ಕಳಸಾಪುರ
ತಾಲೂಕಿನ ನಾಲ್ವರು ಸಮಾನ ಮನಸ್ಕ ರೈತರು ಒಟ್ಟಾಗಿ ಔಷಧೀಯ ಸಸ್ಯಗಳ ಕೃಷಿಯಲ್ಲಿ ತೊಡಗಿ ಯಶಸ್ಸಿನ ಹೆಜ್ಜೆ ಹಾಕಿದ್ದಾರೆ. ಸಾಲದ್ದಕ್ಕೆ ಸಾಕಷ್ಟು ಲಾಭವನ್ನೂ ಗಳಿಸಿದ್ದಾರೆ.
ಸೋಗಿವಾಳ ಗ್ರಾಮದ ವೆಂಕನಗೌಡ ಪಾಟೀಲ, ಆದ್ರಳ್ಳಿಯ ವಿಠ್ಠಲ ಲಮಾಣಿ, ಖೀಮಪ್ಪ ಲಮಾಣಿ ಹಾಗೂ ಕುಂದ್ರಳ್ಳಿ ಗ್ರಾಮದ ಕಿರಣ ಮೇಟಿ ಹೊಸ ಸಾಹಸಕ್ಕೆ ಮುಂದಾದವರು. ಪ್ರತಿಯೊಬ್ಬರೂ ತಲಾ 5 ಎಕರೆಯಂತೆ ಒಟ್ಟು 20 ಎಕರೆಯಲ್ಲಿ ಸಾಮೂಹಿಕ ಕೃಷಿ ನಡೆಸುತ್ತಿದ್ದಾರೆ. ತೋಟಗಾರಿಕೆ ಇಲಾಖೆ, ಕೃಷಿ ವಿವಿ ತಜ್ಞರ ಮಾರ್ಗದರ್ಶನ ಪಡೆದು ಪ್ರತಿಯೊಬ್ಬರೂ 2 ಲಕ್ಷ ರೂ.ಗಳಂತೆ ಒಟ್ಟು 8 ಲಕ್ಷ ರೂ.ಗಳ ಬಂಡವಾಳ ಹಾಕಿದ್ದಾರೆ. ಶತಾವರಿ, ಕೃಷ್ಣ ತುಳಸಿ, ನೆಲನೆಲ್ಲಿ, ನಸುಗುನ್ನಿ ಬೆಳೆದಿದ್ದಾರೆ. ಇವುಗಳ ನಡುವೆ ನುಗ್ಗೆ ಗಿಡ ನೆಟ್ಟಿದ್ದಾರೆ. ಔಷಧೋಪಚಾರ, ಸಾವಯವ ಗೊಬ್ಬರ, ಕೂಲಿಯಾಳು, ಸಾಗಾಣಿಕೆ ವೆಚ್ಚ ಹೀಗೆ ಎಲ್ಲ ಖರ್ಚುವೆಚ್ಚಗಳನ್ನು ಸಾಮೂಹಿಕವಾಗಿ ಭರಿಸುತ್ತಿದ್ದಾರೆ. ಲಾಭವನ್ನೂ ಸಮಾನವಾಗಿ ಹಂಚಿಕೊಳ್ಳುತ್ತಿದ್ದಾರೆ.
ಶತಾವರಿ (ಅಶ್ವಗಂಧ): ಮಧುಮೇಹ, ಚರ್ಮರೋಗ, ಹೃದಯ ರೋಗ, ಕಿಡ್ನಿ ಸಮಸ್ಯೆಗಳಿಗೆ ಶತಾವರಿ ರಾಮಬಾಣವಾಗಿ ಉಪಯೋಗಿಸಲಾಗುತ್ತಿದೆ. ನೇಪಾಳ ತಳಿಯ ಶತಾವರಿ ಸಸಿಗಳನ್ನು ಉತ್ತರ ಪ್ರದೇಶದಿಂದ ತಂದು ಸಾಲಿನಿಂದ ಸಾಲಿಗೆ 3 ಅಡಿ ಮತ್ತು ಸಸಿಯಿಂದ ಸಸಿಗೆ 2 ಅಡಿ ಅಂತರದಲ್ಲಿ ಎಕರೆ 10 ಸಾವಿರದಂತೆ ಒಟ್ಟು 2 ಲಕ್ಷ ಸಸಿ ನಾಟಿ ಮಾಡಿದ್ದಾರೆ. ಸದ್ಯ 8 ತಿಂಗಳ ಬೆಳೆ ಸಮೃದ್ಧವಾಗಿ ಬೆಳೆದಿದ್ದು, ಪ್ರತಿ ಗಿಡ 4 ರಿಂದ 5 ಕೆಜಿ ತೂಕವಿರುತ್ತದೆ. 18 ರಿಂದ 20 ತಿಂಗಳಿಗೆ ಫಸಲು ಕೈ ಸೇರಿ ಕೋಟಿಯಷ್ಟು ಆದಾಯ ನಿರೀಕ್ಷೆಯಲ್ಲಿದ್ದಾರೆ.
ಕೃಷ್ಣ ತುಳಸಿ: ಜೀರ್ಣಕ್ರಿಯೆ, ಶೀತ, ಕೆಮ್ಮು ಸೇರಿ ಅನೇಕ ರೋಗಗಳಿಗೆ ಕೃಷ್ಣ ತುಳಸಿಯನ್ನು ಔಷಧ ಮತ್ತು ಮನೆ ಮದ್ದಾಗಿ ಬಳಸುತ್ತಾರೆ. ಶತಾವರಿ ಬೆಳೆ ಮಧ್ಯೆ ಒಂದು ಎಕರೆಗೆ 10 ಸಾವಿರ ಸಸಿಯಂತೆ 20 ಎಕರೆಯಲ್ಲಿ 40 ಸಾವಿರ ಕೃಷ್ಣ ತುಳಸಿ ಬೆಳೆಸಿದ್ದಾರೆ. ಈಗಾಗಲೇ ತುಳಸಿ ಬೆಳೆ ಕಟಾವು ಮಾಡಿ ಪ್ರತಿ ಕ್ವಿಂಟಾಲ್ಗೆ 8 ರಿಂದ 10 ಸಾವಿರ ರೂ.ಗಳಂತೆ ಬೆಂಗಳೂರಿನ ವ್ಯಾಪಾರಸ್ಥರೊಬ್ಬರಿಗೆ ಮಾರಾಟ ಮಾಡಿ 4.80 ಲಕ್ಷ ರೂ. ಲಾಭ ಗಳಿಸಿದ್ದಾರೆ. ಒಂದೂವರೆಯಿಂದ ಎರಡು ತಿಂಗಳಿಗೊಮ್ಮೆ ತುಳಸಿ ಕಟಾವು ಮಾಡಲಾಗುತ್ತದೆ.
ಇಬ್ಬರು ಪದವೀಧರರು: ನಾಲ್ವರು ರೈತರ ಪೈಕಿ ಇಬ್ಬರು ಪದವೀಧರರು, ಒಬ್ಬರು ಚಿರೆ ಕಲ್ಲಿನ ಕಲಾಕಾರರಾದರೆ, ಮತ್ತೊಬ್ಬರು ಗ್ರಾಪಂ ಸದಸ್ಯರು. ಔಷಧೀಯ ಸಸ್ಯ ಬೆಳೆಯವುದು, ಅದರ ಉಪಯೋಗಗಳ ಬಗ್ಗೆ ಹೆಚ್ಚಿನ ಮಾಹಿತಿ ಹೊಂದಿದ್ದಾರೆ. ಇಂಡಿಯನ್ ಮಾರ್ಟ್ ಎನ್ನುವ ವೆಬ್ಸೈಟ್ನಲ್ಲಿ ತಮ್ಮದೇ ಐಡಿ ಕ್ರಿಯೇಟ್ ಮಾಡಿ ಅದರಲ್ಲಿ ತಾವು ಬೆಳೆದ ಬೆಳೆಗಳ ಮಾರಾಟ/ದರದ ಮಾಹಿತಿ ಹಾಕಿದ್ದಾರೆ. ಇದರಿಂದ ಹಲವು ಹರ್ಬಲ್/ಆಯುರ್ವೆದ ಕಂಪನಿಗಳು ಇವರನ್ನು ಸಂರ್ಪಸಿದ್ದಾರೆ.
ಔಷಧೀಯ ಸಸ್ಯಗಳಿಗೆ ಬೇಡಿಕೆ ಇದ್ದು, ರೈತರು ಉತ್ಪನ್ನವನ್ನು ಬ್ರ್ಯಾಂಡ್ ಮಾಡಿ ಮಾರಬಹುದಾಗಿದೆ. ನೀರಾವರಿ ಸೌಲಭ್ಯವಿರುವ ರೈತರು ನಿರ್ವಹಣೆಗೆ ಸಾಧ್ಯವಿರುವಷ್ಟು ಔಷಧೀಯ ಬೆಳೆ ಬೆಳೆಯಲು ಮುಂದಾಗಬೇಕು. | ವೆಂಕನಗೌಡ ಪಾಟೀಲ ರೈತ
ರೈತರು ಸಾಮೂಹಿಕವಾಗಿ ಔಷಧ ಸಸ್ಯಗಳನ್ನು ಬೆಳೆಯುತ್ತಿರುವುದು ಉತ್ತಮ ಸಂಗತಿ. ಇನ್ನಷ್ಟು ರೈತರನ್ನು ತೊಡಗಿಸಿಕೊಂಡು ಈ ಬೆಳೆಗಳ ಸಂಸ್ಕರಣೆ, ಪ್ಯಾಕಿಂಗ್ ವ್ಯವಸ್ಥೆ ಮೂಲಕ ಉತ್ತಮ ಆದಾಯ ಗಳಿಸಬಹುದು. ಮತ್ತಷ್ಟು ಜನರಿಗೆ ಕೆಲಸ ಕೊಡಬಹುದು. | ಸುರೇಶ ಕುಂಬಾರ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ