

ಹೊಸದುರ್ಗ: ಅನಾರೋಗ್ಯದ ಕಾರಣ ಔಷಧ ತರಲು ನೆರವು ಕೋರಿದ, ಹುಷಾರಿಲ್ಲದ ಮಗಳನ್ನು ನೋಡಲು ಹಂಬಲಿಸಿದ ತಾಯಿಗೆ, ತಂದೆ ತಾಯಿ ನೋಡಬೇಕೆಂದ ಮೂವರಿಗೆ ಶಾಸಕರು ತಮ್ಮದೇ ಕಾರು ಕಳುಹಿಸಿ ಸಹಾಯ ಮಾಡಿದರು.
ವಿಜಯವಾಣಿ ಕಚೇರಿಯಲ್ಲಿ ಶನಿವಾರ ನಡೆದ ಪೋನ್ ಇನ್ ಕಾರ್ಯಕ್ರಮದಲ್ಲಿ ಶಾಸಕ ಗೂಳಿಹಟ್ಟಿ ಶೇಖರ್ ಅವರಿಗೆ ಕರೆ ಮಾಡಿದ್ದ ಸಾಣೇಹಳ್ಳಿಯ ಪ್ರಸನ್ನಕುಮಾರ್ ಔಷಧದ ಕಾರಣಕ್ಕೆ ತುಮಕೂರಿಗೆ ಹೋಗಿಬರುವ ಅನಿವಾರ್ಯತೆ ವಿವರಿಸಿದ್ದರು.
ಕಾರ್ಯನಿಮಿತ್ತ ಬೆಂಗಳೂರಿಗೆ ತೆರಳಿ ಲಾಕ್‌ಡೌನ್ ಕಾರಣ ಬೆಂಗಳೂರಲ್ಲಿ ಅರೇಹಳ್ಳಿಯ ಕಲ್ಪನಾ ಹಾಗೂ ಅನಿವಾಳದ ಶಿವಕುಮಾರ ಕುಟುಂಬದ ಸದಸ್ಯರು ಸಿಕ್ಕಿಕೊಂಡಿದ್ದರು.
ಮೂರು ಕುಟುಂಬದ ಮನವಿ ಆಲಿಸಿದ ಶಾಸಕರು ಡಿ.ಸಿ ಕಚೇರಿಗೆ ತೆರಳಿ ಅನುಮತಿ ಪಡೆದು ಆಪ್ತಸಹಾಯಕ ಮಂಜುನಾಥ್, ಮನು ಅವರನ್ನು ಸ್ವಂತ ಕಾರಿನಲ್ಲಿ ಕಳುಹಿಸಿ ಮೂವರಿಗೂ ನೆರವಾದರು. ಶಾಸಕರ ಸಹಕಾರಕ್ಕೆ ಕುಟುಂಬದ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.