ಔರಾದ್ಕರ್ ವರದಿ ಅನುಷ್ಠಾನಕ್ಕೆ ಪ್ರಯತ್ನ

21CBP9
Published on

ಚಿಕ್ಕಬಳ್ಳಾಪುರ: ಪೊಲೀಸ್ ಇಲಾಖೆಯಲ್ಲಿ ಔರಾದ್ಕರ್ ವರದಿಯನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡಂತೆ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಪೊಲೀಸರಿಗೆ ಅಗತ್ಯ ವೇತನ ಹಾಗೂ ಇತರ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ. ರಾಜ್ಯದಲ್ಲಿ ಶೇ.49 ಪೊಲೀಸ್ ಸಿಬ್ಬಂದಿಗೆ ಈಗಾಗಲೇ ಎರಡು ಬೆಡ್ ರೂಮ್‌ಗಳ 11 ಸಾವಿರ ಮನೆಗಳನ್ನು ನಿರ್ಮಿಸಿಕೊಡಲಾಗಿದೆ. ಗೃಹಭಾಗ್ಯ ಯೋಜನೆಯಡಿ ಈ ಸಾಲಿನಲ್ಲಿ 2 ಸಾವಿರ ಕೋಟಿ ರೂ. ವೆಚ್ಚದಲ್ಲಿ 10 ಸಾವಿರ ವಸತಿ ಗೃಹಗಳನ್ನು ನಿರ್ಮಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಇದಕ್ಕೆ ಮೊದಲ ಹಂತವಾಗಿ ಮೂರು ದಿನಗಳ ಹಿಂದೆ 300 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದರು.

ರಾಜ್ಯದಲ್ಲಿ ಮೊದಲ ಬಾರಿಗೆ ಜಿಲ್ಲೆಯಲ್ಲಿ ಲಾಕ್ಡ್ ಹೌಸ್ ಮಾನಿಟರಿಂಗ್ ಸಿಸ್ಟಂ, ಸಮುದಾಯ ಪೊಲೀಸ್ ವ್ಯವಸ್ಥೆ, ಬೀಟ್ ಚುರುಕು, ಸಿಬ್ಬಂದಿಗೆ ತನಿಖಾ ತರಬೇತಿ ಸೇರಿ ಹಲವು ಸುಧಾರಣೆ ಕಾರ್ಯಕ್ರಮಗಳನ್ನು ಜಾರಿಗೆ ತಂದಿರುವುದು ಖುಷಿಯ ವಿಚಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಸೋಂಕು ಪ್ರಕರಣಗಳು ಹೆಚ್ಚಾದರೂ ಬಡ ಮತ್ತು ಮಧ್ಯಮ ವರ್ಗದ ಜನರ ಆರ್ಥಿಕ ಸಂಕಷ್ಟದ ಲೆಕ್ಕಾಚಾರದಲ್ಲಿ ತಂತ್ರಜ್ಞರ ಸಲಹೆಯಂತೆ ವೀಕೆಂಡ್ ಕರ್ಫ್ಯೂ ತೆಗೆಯಲಾಗಿದೆ. ಜನರು ಹೊಣೆಗಾರಿಕೆ ಮರೆತು, ಮಾರ್ಗಸೂಚಿಗಳನ್ನು ಉಲ್ಲಂಘಿಸಬಾರದು ಎಂದರು. ಐಜಿ ಚಂದ್ರಶೇಖರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಇದ್ದರು. ಸಿಬ್ಬಂದಿಗೆ ಪ್ರಶಸ್ತಿ ವಿತರಣೆ: ಉತ್ತಮ ಕಾರ್ಯ ನಿರ್ವಹಣೆಯ ಡಿಸಿಆರ್‌ಬಿ ಇನ್‌ಸ್ಪೆಕ್ಟರ್ ಕೆ.ವಿ.ಶ್ರೀಧರ್, ಬೆರಳು ಮುದ್ರೆ ಘಟಕ ಪಿಎಸ್‌ಐ ಎಂ.ಎನ್.ಸುರೇಶ್, ಪೇದೆಗಳಾದ ಬಿ.ಕೆ.ಮಧುಚಂದ್ರ, ಮಹೇಶ್ ಕುಮಾರ್, ಡಿಎಆರ್‌ನ ಎಆರ್‌ಎಸ್‌ಐ ಬಿ.ಕೆ.ಪ್ರಸಾದ್, ಮುಖ್ಯಪೇದೆ ಅಲ್ತಾಫ್ ಪಾಷಾ, ಗ್ರಾಮಾಂತರ ಠಾಣೆ ಮುಖ್ಯಪೇದೆ ದೇವರಾಜು, ಪೇದೆ ಎನ್.ಲೋಕೇಶ್, ಚಿಂತಾಮಣಿ ನಗರ ಠಾಣೆ ಮುಖ್ಯಪೇದೆ ಎನ್.ಸುನೀತಾ, ಬಾಗೇಪಲ್ಲಿ ಠಾಣೆ ಪೇದೆ ಅರುಣ್ ಅವರಿಗೆ ಸಚಿವರು ಪ್ರಶಸ್ತಿ ವಿತರಿಸಿದರು.

ಹಿಂದೆ ವರ್ಷಕ್ಕೆ 10 ರಿಂದ 25 ಹೊಸ ಠಾಣೆ ನಿರ್ಮಾಣ ಮಾಡಲಾಗುತ್ತಿತ್ತು. ಆದರೆ, ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ 200 ಕೋಟಿ ರೂ. ವೆಚ್ಚದಲ್ಲಿ 100 ಹೊಸ ಠಾಣೆಯ ಕಟ್ಟಡ ನಿರ್ಮಿಸಲಾಗುತ್ತಿದೆ. ಆರಗ ಜ್ಞಾನೇಂದ್ರ, ಗೃಹ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net