

ಬೀದರ್: ರಥಯಾತ್ರೆ ಜಿಲ್ಲಾ ಸಂಚಾಲಕರೂ ಆದ ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ಪ್ರತಿನಿಧಿಸುವ ಔರಾದ್ ಕ್ಷೇತ್ರದಲ್ಲಿ ವಿಜಯ ಸಂಕಲ್ಪ ಯಾತ್ರೆ ಅಬ್ಬರ ಜೋರಾಗಿತ್ತು. ಔರಾದ್ ಕ್ಷೇತ್ರದಿಂದಲೇ ಯಾತ್ರೆ ಸಂಚಾರ ಶುರುವಾಯಿತು. ವಡಗಾಂವ, ಸಂತಪುರ ನಂತರ ಔರಾದ್ ಪಟ್ಟಣದಲ್ಲಿ ಬೃಹತ್ ರೋಡ್ ಶೋ ನಡೆಯಿತು.
ವಡಗಾಂವ ಗ್ರಾಮದ ಕನಕದಾಸ ವೃತ್ತದ ಬಳಿ ಚವ್ಹಾಣ್ ನೇತೃತ್ವದಲ್ಲಿ ಕಾರ್ಯಕರ್ತರು ಯಾತ್ರೆಗೆ ಭವ್ಯವಾಗಿ ಸ್ವಾಗತಿಸಿದರು. ಮಾಜಿ ಸಿಎಂ ಜಗದೀಶ ಶೆಟ್ಟರ್, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ಭಗವಂತ ಖೂಬಾ, ಎಂಎಲ್ಸಿ ರಘುನಾಥರಾವ್ ಮಲ್ಕಾಪುರೆ ಸೇರಿ ಗಣ್ಯರಿಗೆ ಕಂಬಳಿ, ಶಾಲು ಹೊದಿಸಿ ಸನ್ಮಾನಿಸಿ ಬರಮಾಡಿಕೊಂಡರು. ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.
ಇಲ್ಲಿನ ಶ್ರೀ ಅಮರೇಶ್ವರ ದೇವಸ್ಥಾನದಲ್ಲಿ ಪೂಜೆ ಮತ್ತು ಗೋಪೂಜೆ ನೆರವೇರಿಸಲಾಯಿತು. ಪಟ್ಟಣದ ಬಸವೇಶ್ವರ ವೃತ್ತ, ಬಸ್ ನಿಲ್ದಾಣ ಮಾರ್ಗವಾಗಿ ಕನ್ನಡಾಂಬೆ (ಎಪಿಎಂಸಿ) ವೃತ್ತದವರೆಗೆ ಯಾತ್ರೆ ಸಂಚರಿಸಿ ಬೀದರ್ನತ್ತ ಪ್ರಯಾಣಿಸಿತು. ರೋಡ್ ಶೋ ವೇಳೆ ಅಮರೇಶ್ವರ ದೇವಸ್ಥಾನದಿಂದ ಎಪಿಎಂಸಿ ವೃತ್ತದವರೆಗೆ ಜನಸಾಗರ ಕಂಡುಬಂತು. ಕಾರ್ಯಕರ್ತರು ಪಕ್ಷದ ಧ್ವಜ ಹಿಡಿದು ಭಾರತ ಮಾತಾ ಕೀ ಜೈ, ವಂದೇ ಮಾತರಂ, ಬಿಜೆಪಿಗೆ ಜಯವಾಗಲಿ, ಪ್ರಭು ಚವ್ಹಾಣ್ ಗೆ ಜಯವಾಗಲಿ ಜಯಘೋಷಗಳು ಮೊಳಗಿಸಿದರು. ತಮಟೆ ವಾದನ, ಡೊಳ್ಳು ಕುಣಿತ ಹಾಗೂ ಧ್ವನಿವರ್ಧಕಗಳ ಹಾಡಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.
ಬಿಜೆಪಿ ಧ್ವಜಗಳು ಮತ್ತು ಕೇಸರಿ ಬಣ್ಣದಿಂದ ಅಲಂಕೃತಗೊಂಡ ರಸ್ತೆಗಳಲ್ಲಿ ಬಣ್ಣ ಬಣ್ಣದ ಉಡುಗೆ ಧರಿಸಿ ತಲೆಯ ಮೇಲೆ ಕಳಸ ಹೊತ್ತ ಮಹಿಳೆಯರು, ಕೋಲಾಟ, ಬಂಜಾರಾ ಮಹಿಳೆಯರ ನೃತ್ಯ ಯಾತ್ರೆಯ ಮೆರುಗು ಹೆಚ್ಚಿಸಿತು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ಧರಾಜು, ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್, ಮರಾಠ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಾರುತಿರಾವ ಮುಳೆ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್, ಮಂಡಲ ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ, ಪ್ರಧಾನ ಕಾರ್ಯದರ್ಶಿ ಹಣಮಂತ ಸುರನಾರ, ಖಂಡೋಬಾ ಕಂಗಟೆ, ಈಶ್ವರಸಿಂಗ್ ಠಾಕೂರ್, ಶಿವರಾಜ ಗಂದಗೆ, ಗುರುನಾಥ ಜ್ಯಾಂತಿಕರ್, ವೀರಣ್ಣಾ ಕಾರಬಾರಿ, ವಸಂತ ಬಿರಾದಾರ್, ಸುರೇಶ ಭೋಸ್ಲೆ, ರಾಮ ನರೋಟೆ, ಶಿವರಾಜ ಅಲ್ಮಾಜೆ, ಪ್ರತೀಕ್ ಚವ್ಹಾಣ್, ಶರಣಪ್ಪ ಪಂಚಾಕ್ಷರಿ, ಸಚಿನ್ ರಾಠೋಡ್, ಶಕುಂತಲಾ ಮುತ್ತಂಗೆ, ಪ್ರಕಾಶ ಮೇತ್ರೆ, ವಿಜಯಕುಮಾರ ಪಾಟೀಲ್ ಗಾದಗಿ, ಪ್ರಕಾಶ ಅಲ್ಮಾಜೆ, ಸತೀಶ ಪಾಟೀಲ್, ರಮೇಶ ಬಿರಾದಾರ್, ಕಿರಣ ಪಾಟೀಲ್, ಶಿವಾಜಿರಾವ ಕಾಳೆ, ಧೋಂಡಿಬಾ ನರೋಟೆ, ರಂಗರಾವ್ ಜಾಧವ್, ಶಿವಾಜಿ ಪಾಟೀಲ್ ಮುಂಗನಾಳ ಇತರರಿದ್ದರು.