ಔರಾದ್ ನಲ್ಲಿ ಇಂಡಿಸ್ಟ್ರೀಯಲ್ ಏರಿಯಾ

DC MEETING
Published on

ಬೀದರ್: ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರು ನಿರ್ದೇಶಿಸಿದಂತೆ ಔರಾದ್ ತಾಲೂಕಿನಲ್ಲಿ ಹೊಸ ಕೈಗಾರಿಕಾ ಪ್ರದೇಶ ಮತ್ತು ವಸಾಹತು (ಇಂಡಿಸ್ಟ್ರೀಯಲ್ ಏರಿಯಾ) ಸ್ಥಾಪನೆ ಮಾಡುವ ಪ್ರಕ್ರಿಯೆ ತೀವ್ರವಾಗಿ ನಡೆಸಬೇಕು ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಡಿಸಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜರುಗಿದ ಜಿಲ್ಲಾ ಕೈಗಾರಿಕಾ ಕೇಂದ್ರದ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆಯಲ್ಲಿ ಮಾತನಾಡಿ, ಜಮೀನು ಗುರುತಿಸಿ ಸರ್ವೆ ಮಾಡುವ ಕಾರ್ಯವನ್ನು ಮುಂದಿನ ಸಭೆಯೊಳಗಾಗಿ ಪೂರ್ಣಗೊಳಿಸಬೇಕು ಎಂದು ಕೈಗಾರಿಕೆ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕಿ ಸುರೇಖಾ ಮುನವಳ್ಳಿ ಮಾತನಾಡಿ, ಜಿಲ್ಲಾ ಮಟ್ಟದಲ್ಲಿ ಕೈಗಾರಿಕಾ ಸ್ಥಾಪನೆಗೆ 5 ಘಟಕ ಮುಂದೆ ಬಂದಿದ್ದು, 2554.75 ಲಕ್ಷ ರೂ. ಬಂಡವಾಳ ಮತು 103 ಜನರಿಗೆ ಉದ್ಯೋಗ ನೀಡುವ ಅವಕಾಶವಿದೆ ಎಂದು ತಿಳಿಸಿದರು. ಈ ಘಟಕಗಳಿಗೆ ಬ್ಯಾಂಕ್ ನಿಂದ ಸಾಲ, 109 ಕಾಯ್ದೆ ಅಡಿ ಕೃಷಿಯೇತರ ಚಟುವಟಿಕೆಗಳಿಗೆ ಭೂಪರಿವರ್ತನೆ ಮತ್ತು ಇತರೆ ಇಲಾಖೆಗಳ ಪರವಾನಗಿಗಳಿಗೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಸಭೆಯಲ್ಲಿ ಕೆಐಎಡಿಬಿ ಕೈಗಾರಿಕಾ ಪ್ರದೇಶದಲ್ಲಿ ಖಾಲಿ ಇರುವ ನಿವೇಶನಗಳ ಬಗ್ಗೆ ಚರ್ಚಿಸಲಾಯಿತು. ಕೈಗಾರಿಕಾ ಪ್ರದೇಶಗಳಲ್ಲಿ ನಿವೇಶನಗಳ ಲಭ್ಯತೆ ಬಗ್ಗೆ ವರದಿ ಸಲ್ಲಿಸಬೇಕು. ಹೊಸ ಉದ್ದಿಮೆಗಳಿಗೆ ಹಂಚಿಕೆ ಮಾಡಲು ಕ್ರಮ ವಹಿಸಲು ಜಿಲ್ಲಾಧಿಕಾರಿಗಳು ಕೆಐಎಡಿಬಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು. ವಿಶೇಷ ಘಟಕದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ 15 ಮಳಿಗೆಗಳ ಹಂಚಿಕೆಗೆ ಸಭೆಯಲ್ಲಿ ಸಮ್ಮತಿ ನೀಡಲಾಯಿತು.

ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಬಿ.ಜಿ.ಶೆಟಕಾರ, ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಶಿವರಾಜ ಹಲಶೆಟ್ಟಿ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಬಿ.ಎಂ.ಕಮತಗಿ, ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧಿಕಾರಿ ಸತ್ಯವ್ರತ, ಕೈಗಾರಿಕಾಭಿವೃದ್ಧಿ ಪ್ರದೇಶ ಮಂಡಳಿಯ ಅಧಿಕಾರಿ ಪ್ರಕಾಶ, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕ ನಾಗಪ್ಪ ರೆಡ್ಡಿ, ಕೈಗಾರಿಕೋದ್ಯಮಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net