

ಔರಾದ್: ಮಕ್ಕಳಿರುವ ಕಡೆ ಶಿಕ್ಷಕರಿಲ್ಲ, ಶಿಕ್ಷಕರಿರುವ ಕಡೆ ಮಕ್ಕಳಿಲ್ಲ, ಶಿಕ್ಷಕರು ಸಮಯಕ್ಕೆ ಶಾಲೆಗೆ ಹೋಗುವುದಿಲ್ಲ, ಇವುಗಳನ್ನು ಸರಿಪಡಿಸಿ ದಾಖಲಾತಿ ಹೆಚ್ಚಳಕ್ಕೆ ಪ್ರಯತ್ನಿಸಬೇಕು. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಕ್ಷೇತ್ರದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ಇರುವಂತೆ ಮಾಡಬೇಕೆಂದು ಶಾಸಕ ಪ್ರಭು ಚವ್ಹಾಣ್ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಿನ ಘಮಸುಬಾಯಿ ಬೋಂತಿ ತಾಂಡದಲ್ಲಿನ ಶಾಸಕರ ಗೃಹ ಕಚೇರಿ ಆವರಣದಲ್ಲಿ ಶನಿವಾರ ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ನಾನು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಿ ನಿರಂತರವಾಗಿ ಶ್ರಮಿಸುತ್ತಿದ್ದೇನೆ. ಆದರೆ ಅಧಿಕಾರಿಗಳು ಮತ್ತು ಶಿಕ್ಷಕರಿಂದ ಸೂಕ್ತ ಸ್ಪಂದನೆ ಸಿಗುತ್ತಿಲ್ಲ. ಕಳೆದ ಎರಡು ವರ್ಷ ಎಸ್ಸೆಸ್ಸೆಲ್ಸಿ ಫಲಿತಾಂಶ ತೀವ್ರ ಕುಸಿದಿರುವುದು ಬೇಸರ ಮೂಡಿಸಿದೆ. ಈ ವರ್ಷದ ಫಲಿತಾಂಶ ಸುಧಾರಣೆಗೆ ಏನು ಮಾಡಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.
ಕೆಲವು ಶಾಲೆಗಳಲ್ಲಿ ಶಿಕ್ಷಕರು ಸಮಯಕ್ಕೆ ಶಾಲೆಗೆ ಬರುವುದಿಲ್ಲವೆಂಬ ದೂರುಗಳಿವೆ. ತಾಂಡಾ ಶಾಲೆಗಳ ಪರಿಸ್ಥಿತಿ ತೀವ್ರ ಹದಗೆಟ್ಟಿದೆ. ಕೆಲವು ಶಿಕ್ಷಕರು ಶಾಲೆಗೆ ಹೋಗದೇ ಸಂಬಳ ಪಡೆಯುತ್ತಿದ್ದಾರೆ ಎನ್ನುವ ದೂರುಗಳಿವೆ. ಹೀಗಾದರೆ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಳ ಹೇಗೆ ಸಾಧ್ಯ? ಶಿಕ್ಷಕರು ಸಮಯ ಪಾಲನೆ ಮಾಡಬೇಕು. ಸರಿಯಾಗಿ ಪಾಠ ಮಾಡಬೇಕು. ಪಾಲಕರ ಮನವೊಲಿಸುವ ಕೆಲಸ ಮಾಡಬೇಕು. ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಇನ್ನು ಮುಂದೆ ಸುಮ್ಮನಿರುವುದಿಲ್ಲ. ಮಕ್ಕಳ ದಾಖಲಾತಿಯಿಲ್ಲದ ಶಿಕ್ಷಕರನ್ನು ದೂರದ ಜಿಲ್ಲೆಗಳಿಗೆ ವರ್ಗಾಯಿಸಲು ಶಿಫಾರಸ್ಸು ಮಾಡುತ್ತೇನೆ. ಹಾಗಾಗಿ ಎಲ್ಲರೂ ಎಚ್ಚರಿಕೆಯಿಂದ ಕೆಲಸ ಮಾಡಬೇಕೆಂದು ತಾಕೀತು ಮಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜಿ ರಂಗೇಶ, ಕ್ಷೇತ್ರ ಸಮನ್ವಯಾಧಿಕಾರಿ ಪ್ರಕಾಶ ರಾಠೋಡ್, ಶಿಕ್ಷಕರ ಸಂಘದ ಅಧ್ಯಕ್ಷ ಪಂಢರಿ ಆಡೆ, ಧೂಳಪ್ಪ, ವಿದ್ಯಾಸಾಗರ, ವಿಶ್ವನಾಥ ಬಿರಾದಾರ, ಬಸವರಾಜ ಪಾಟೀಲ್, ಸಿಆರ್‌ಪಿ, ಬಿಆರ್‌ಪಿ, ಇಸಿಒ, ಶಿಕ್ಷಕರ ಸಂಘದ ಪದಾಧಿಕಾರಿಗಳು ಇತರರಿದ್ದರು.
ಬಿಆರ್‌ಪಿ, ಸಿಆರ್‌ಪಿ, ಇಸಿಒ ಅವರು ಶಿಕ್ಷಕರ ಮೇಲೆ ನಿಗಾ ವಹಿಸಬೇಕು. ಸರಿಯಾಗಿ ಕೆಲಸ ಮಾಡದವರಿಗೆ ಚುರುಕು ಮುಟ್ಟಿಸಬೇಕು. ತಾವು ತಮ್ಮ ಜವಾಬ್ದಾರಿಗಳನ್ನು ಸರಿಯಾಗಿ ನಿಭಾಯಿಸಿ ಶಿಕ್ಷಕರನ್ನು ಸರಿದಾರಿಗೆ ತರಬೇಕು.
| ಪ್ರಭು ಚವ್ಹಾಣ್, ಶಾಸಕ ಔರಾದ್