

ಮೈಸೂರು: ಸ್ಪರ್ಧಾತ್ಮಕ ಮನೋಭಾವ ಇರುವ ಔದ್ಯೋಗಿಕ ಕ್ಷೇತ್ರಕ್ಕೂ ಈಗ ಕೌಶಲಗಳಿರುವ ಯುವ ಸಮುದಾಯದ ಅವಶ್ಯಕತೆ ಇದೆ ಎಂದು ಭಾರತೀಯ ಕೈಗಾರಿಕೆಗಳ ಒಕ್ಕೂಟ (ಸಿಐಐ) ಮೈಸೂರು ಶಾಖೆ ಅಧ್ಯಕ್ಷ ಸ್ಯಾಮ್ ಚೆರಿನ್ ಹೇಳಿದರು.
ನಗರದ ಊಟಿ ರಸ್ತೆಯಲ್ಲಿರುವ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಸಿಐಐ, ಇಂಡಸ್ಟ್ರಿ ಇನ್‌ಸ್ಟಿಟ್ಯೂಟ್ ಇಂಟ್ರ್ಯಾಕ್ಷನ್ ಆ್ಯಂಡ್ ಹೈಯರ್ ಎಜುಕೇಷನ್ ಪ್ಯಾನಲ್ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಕೈಗಾರಿಕೆಗಳು ಮತ್ತು ಉದ್ಯಮಶೀಲತೆಯಲ್ಲಿ ಉದ್ಯೋಗಕ್ಕಾಗಿ ವಿದ್ಯಾರ್ಥಿಗಳನ್ನು ರೂಪಿಸುವ ಕೌಶಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದಿನ ಔದ್ಯೋಗಿಕ ಕ್ಷೇತ್ರದಲ್ಲಿಯೂ ಸ್ಪರ್ಧಾತ್ಮಕ ಮನೋಭಾವವಿದೆ. ಈ ಕಾರಣಕ್ಕೆ ಔದ್ಯೋಗಿಕ ಕ್ಷೇತ್ರಕ್ಕೆ ಕೌಶಲಗಳಿಂದ ಕೂಡಿರುವ ಯುವ ಸಮುದಾಯದ ಅವಶ್ಯಕತೆ ಇದೆ. ಅಲ್ಲದೆ, ಪ್ರತಿದಿನವೂ ಬದಲಾಗುತ್ತಿರುವ ಕೌಶಲವನ್ನು ಪ್ರತಿದಿನವೂ ಬೆಳೆಸಿಕೊಳ್ಳುವ ಅನಿವಾರ್ಯತೆಯೂ ಇದೆ ಎಂದು ಹೇಳಿದರು.
ನುರಿತ ಮತ್ತು ಬುದ್ಧಿವಂತ ವಿದ್ಯಾರ್ಥಿಗಳು ಭಾರತದ ಭವಿಷ್ಯದ ಶಕ್ತಿಯಾಗಿದ್ದಾರೆ. ವಿಶ್ವ ಮಟ್ಟದಲ್ಲಿ ಭಾರತವನ್ನು ಕಟ್ಟುವ ಮತ್ತು ಉನ್ನತ ಸ್ಥಾನಕ್ಕೆ ತೆಗೆದುಕೊಂಡು ಹೋಗುವ ಗುರುತರವಾದ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ. ಇದಕ್ಕೆ ಕೌಶಲಯುತ ಜ್ಞಾನ ಅವಶ್ಯಕ ಎಂದರು.
ವಿದ್ಯಾರ್ಥಿಗಳು ವಿಶಿಷ್ಟ ಕೌಶಲಗಳನ್ನು ಮೈಗೂಡಿಸಿಕೊಳ್ಳಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಮೂಲಭೂತವಾದ ಕೆಲವು ಕೌಶಲಗಳು ಅಗತ್ಯವಾಗಿವೆ. ತಂತ್ರಜ್ಞಾನ, ಸಂವಹನ, ಸೃಜನಶೀಲ, ಅನ್ವೇಷಣಾತ್ಮಕ ಮನೋಭಾವ, ತಾರ್ಕಿಕ ಚಿಂತನೆ, ಸಹಯೋಗ ಮನಸ್ಥಿತಿ, ನಿರ್ವಹಣೆ ಮುಂತಾದ ಕೌಶಲಗಳು ಔದ್ಯೋಗಿಕ ಕ್ಷೇತ್ರದಲ್ಲಿ ಯಶಸ್ವಿಯಾಗುವುದಕ್ಕೆ ತೀರ ಅವಶ್ಯಕವಾಗಿವೆ ಎಂದು ಹೇಳಿದರು.
ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ.ಸಾಂಬಶಿವಯ್ಯ ಮಾತನಾಡಿ, ಪ್ರಸ್ತುತ ಕೈಗಾರಿಕೆ ಮತ್ತು ಉದ್ಯಮ ಕ್ಷೇತ್ರಗಳಲ್ಲಿ ಉದ್ಯೋಗ ಅವಕಾಶಗಳನ್ನು ಪಡೆಯಲು ವಿಶೇಷವಾದ ಕೌಶಲಗಳು ಅಗತ್ಯ. ಹಾಗಾಗಿ ವಿದ್ಯಾರ್ಥಿ ದಿಶೆಯಲ್ಲಿಯೇ ಕೌಶಲಯುತವಾದ ಶಿಕ್ಷಣವನ್ನು ಮೈಗೂಡಿಸಿಕೊಳ್ಳುವುದು ಅನಿವಾರ್ಯವಾಗಿದೆ ಎಂದರು.
ಕೌಶಲ ವೃದ್ಧಿಗಾಗಿ ಕೇಂದ್ರ ಸರ್ಕಾರದ ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲ ಸಚಿವಾಲಯದಿಂದ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ಇದನ್ನು ಸದುಪಯೋಗಪಡಿಸಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ. ದೇಶ ಸರಾಸರಿ 29 ವರ್ಷ ವಯೋಮಾನದ ಯುವ ಸಮುದಾಯವನ್ನು ಹೊಂದಿದ್ದು, ಅದು ಯುಎಸ್‌ಎ, ಯೂರೋಪ್ ಮತ್ತು ಜಪಾನ್ ದೇಶಗಳ ಜನರ ಸರಾಸರಿ ವಯೋಮಾನಕ್ಕಿಂತ ಕಡಿಮೆ ಇದೆ. ಇದನ್ನು ಕೈಗಾರಿಕೆ ಮತ್ತು ಉದ್ಯಮ ಕ್ಷೇತ್ರಗಳಲ್ಲಿ ಸದ್ಬಳಕೆ ಮಾಡಿಕೊಂಡರೆ ದೇಶದ ಅಭಿವೃದ್ಧಿಗೆ ಸಹಾಯಕವಾಗುತ್ತದೆ ಎಂದು ಹೇಳಿದರು.
ಎರಡು ವಿವಿಧ ಗೋಷ್ಠಿಗಳಲ್ಲಿ ಮೈಸೂರಿನ ಇನ್ಫೋಸಿಸ್‌ನ ರಾಘವೇಂದ್ರ ಕಡಕೊಳ, ಬೊರಕ ಎಕ್ಸ್‌ಟ್ರೂಷನ್ ಲಿಮಿಟಿಡ್‌ನ ರಜತ್ ಅಗರವಾಲ್ ಅವರು ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳ ಕುರಿತು ಕೌಶಲ ತರಬೇತಿ ನೀಡಿದರು.
ಕಾರ್ಯಕ್ರಮದಲ್ಲಿ 450 ಕ್ಕೂ ಹೆಚ್ಚು ವಿದ್ಯಾರ್ಥಿಗಳು 45 ಅಧ್ಯಾಪಕರು ಮತ್ತು 10 ಸಂಶೋಧಕರು ಭಾಗವಹಿಸಿದ್ದರು. ಪ್ರಾಂಶುಪಾಲ ಡಾ.ಎಸ್.ಪ್ರತಿಭಾ, ಐಕ್ಯೂಎಸಿ ಸಂಯೋಜಕರಾದ ಮತ್ತು ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿ ಡಾ. ಎನ್. ರಾಜೇಂದ್ರ ಪ್ರಸಾದ್ ಇತರರು ಇದ್ದರು.