

ಚಾಮರಾಜನಗರ: ಚಾ.ನಗರ-ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ(ಚುಡಾ) ನಿವೇಶದಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡಲು ಸೋಮವಾರ ಮಣ್ಣು ತಜ್ಞರಿಂದ ಮಣ್ಣಿನ ಪರೀಕ್ಷೆ ಮಾಡಲಾಯಿತು.
ನಗರದ ಸಂತೇಮರಹಳ್ಳಿ ರಸ್ತೆಯಲ್ಲಿ ಚುಡಾ ನಿವೇಶನವನ್ನು ಹಂಚಿಕೆ ಮಾಡಲಾಗುತ್ತಿದ್ದು, ಈ ಸಂಬಂಧ ನಿವೇಶನದಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡಬೇಕಿತ್ತು. ಬೆಂಗಳೂರಿನಿಂದ ನಗರಕ್ಕೆ ಭೇಟಿನೀಡಿದ್ದ ಮಣ್ಣು ಪರೀಕ್ಷೆ ತಜ್ಞರು ಮಣ್ಣಿನ ಗುಣಮಟ್ಟ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ (ಮುನ್ನಾ) ಮಾತನಾಡಿ, ಚುಡಾದಿಂದ ನಿವೇಶನ ಹಂಚಿಕೆ ಪ್ರಕ್ರಿಯೆ 2017 ರಿಂದಲೂ ನನೆಗುದಿಗೆ ಬಿದ್ದಿತ್ತು. ತಾವು ಅಧ್ಯಕ್ಷರಾದ ಬಳಿಕ ನಿವೇಶನ ಗುರುತಿಸುವ ಮೂಲಕ ನಿವೇಶನ ಹಂಚಿಕೆಗೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿತ್ತು. ಸರ್ಕಾರ ನಿವೇಶನ ಹಂಚಿಕೆಗೆ ಅನುಮೋದನೆ ನೀಡಿದ್ದು, ನಿವೇಶನದಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣ ಮಾಡಲು ತಜ್ಞರ ತಂಡ ಪರಿಶೀಲಿಸಿರುವ ಮಣ್ಣಿನ ಮಾದರಿಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಅನುಮೋದನೆ ದೊರೆತ ಕೂಡಲೇ ನಿವೇಶನಗಳಿಗೆ ಮೂಲಸೌಕರ್ಯ ಕಲ್ಪಿಸಲು ಟೆಂಡರ್ ಕರೆಯಲಾಗುವುದು ಎಂದರು.
ಈ ವೇಳೆ ಚುಡಾ ಆಯುಕ್ತೆ ಸೀಮಾ, ಸಹಾಯಕ ರಿತೀಶ್, ನಗರಸಭೆ ಎಇಇ ಪ್ರಕಾಶ್, ಯೋಜನಾ ನಿರ್ದೇಶಕ ಶ್ರೀನಿವಾಸ್, ವೆಂಕಟೇಶ್ ಹಾಗೂ ಇತರರು ಹಾಜರಿದ್ದರು.
ನಗರದಲ್ಲಿ ಚುಡಾ ವತಿಯಿಂದ ನಿವೇಶನ ಹಂಚಿಕೆಗೆ ಸರ್ಕಾರ ಅನುಮೋದನೆ ನೀಡಿದ್ದು, ನಿವೇಶನ ಹಂಚಿಕೆಗೆ ಹಂತಹಂತವಾಗಿ ಕ್ರಮಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ತಜ್ಞರು ಮಣ್ಣು ಪರೀಕ್ಷೆ ನಡೆಸಿದ್ದಾರೆ.
-ಮಹಮ್ಮದ್ ಅಸ್ಗರ್(ಮುನ್ನಾ), ಅಧ್ಯಕ್ಷ, ಚುಡಾ, ಚಾಮರಾಜನಗರ