

ಮೈಸೂರು: ಓಲೈಕೆ ರಾಜಕಾರಣಕ್ಕಾಗಿ ಸಾವರ್ಕರ್ ಕುರಿತು ಅಪಪ್ರಚಾರ ಮಾಡಲಾಗುತ್ತಿದೆ ಎಂದು ಸಾಹಿತಿ ಪ್ರೊ.ಎಸ್.ಎಲ್.ಭೈರಪ್ಪ ಹೇಳಿದರು.
ಸಾವರ್ಕರ್ ಪ್ರತಿಷ್ಠಾನದ ವತಿಯಿಂದ ಮುಕ್ತ ಗಂಗೋತ್ರಿಯ ಘಟಿಕೋತ್ಸವ ಭವನದಲ್ಲಿ ಸಂಜೆ ಆಯೋಜಿಸಿದ್ದ ಸಾವರ್ಕರ್ 140ನೇ ಜಯಂತಿ, ಲೇಖಕ ವಿಕ್ರಮ್ ಸಂಪತ್ ಅವರಿಗೆ ವೀರ ಸಾವರ್ಕರ್ ಸಮ್ಮಾನ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾವರ್ಕರ್ ವಿರುದ್ಧ ಮಾಡುತ್ತಿರುವ ಅಪಪ್ರಚಾರವೆಲ್ಲವೂ ಸುಳ್ಳು. ದೇಶದ ನಿಜವಾದ ಹೀರೋಗಳ ಚರಿತ್ರೆಯನ್ನು ಮಸುಕು ಮಾಡುವುದು ರಾಜಕಾರಣವಾಗಿದೆ. ಆದರೆ, ಸಾವರ್ಕರ್, ಸುಭಾಷ್ ಚಂದ್ರಬೋಸ್‌ನಂತಹ ಹೋರಾಟಗಾರರ ಕುರಿತು ಹೆಚ್ಚು ಪ್ರಚಾರ ಮಾಡಬೇಕಿದೆ ಎಂದರು.
ಸಾವರ್ಕರ್ ವ್ಯಕ್ತಿತ್ವವನ್ನು ಕುಗ್ಗಿಸುವ ಕೆಲಸ ಹಿಂದೆ ನಡೆದಿತ್ತು. ಅದರ ಭಾಗವಾಗಿ ಅವರು ಕ್ಷಮಾಪಣಾ ಪತ್ರ ಬರೆದಿದ್ದರು ಎಂದು ಟೀಕಿಸಲಾಗುತ್ತದೆ. ಆದರೆ, ಅದು ಕ್ಷಮಾಪಣಾ ಪತ್ರವಲ್ಲ. ಬ್ರಿಟಿಷರು ಕೊಟ್ಟ ಅವಕಾಶವನ್ನು ಬಳಸಿಕೊಂಡು ನಾನು ರಾಜಕೀಯಕ್ಕೆ ಹೋಗುವುದಿಲ್ಲ ಎಂದು ಬರೆದುಕೊಟ್ಟು ಜೈಲಿನಿಂದ ಬಿಡುಗಡೆಯಾಗಿದ್ದರು. ಇಲ್ಲವಾಗಿದ್ದರೆ 52 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಿತ್ತು. ನಾನು ಜೈಲಿನಲ್ಲೇ ಸತ್ತರೆ ಸಾರ್ಥಕವಾಗಲ್ಲ ಎಂಬುದು ಅವರಿಗೆ ಗೊತ್ತಿತ್ತು ಎಂದರು.
ಸ್ವಾತಂತ್ರೃ ಸಂಗ್ರಾಮದ ಸಂದರ್ಭದಲ್ಲಿ ಬುದ್ಧನಿಂದ ಬಂದಿದ್ದ ಅಹಿಂಸಾ ಮಾರ್ಗದ ಮೂಲಕ ಹೋರಾಟವನ್ನು ಗಾಂಧೀಜಿ ಹಿಡಿದಿದ್ದರು. ಇಂತಹ ಸಂದರ್ಭದಲ್ಲಿ ರಾಜಕೀಯಕ್ಕೆ ಹೋದರೂ ಪ್ರಯೋಜನವಿಲ್ಲ ಎಂಬ ಕಾರಣಕ್ಕೆ ಸಾವರ್ಕರ್ ಈ ತೀರ್ಮಾನಕ್ಕೆ ಬಂದಿದ್ದರು. ಗಾಂಧಿ ವಿರುದ್ಧ ಮತ್ತೊಂದು ರಾಜಕೀಯವನ್ನು ಜನರು ಒಪ್ಪುತ್ತಿರಲಿಲ್ಲ. ಆ ರೀತಿಯ ಪುಕ್ಕಲುತನ ದೇಶದ ಜನರಲ್ಲಿ ಬೇರೂರಿತ್ತು. ಹೀಗಾಗಿ, ರಾಜಕೀಯದಿಂದ ದೂರವಿದ್ದ ಅವರು, ಸೈನ್ಯಕ್ಕೆ ಸೇರುವಂತೆ ಯುವ ಜನರನ್ನು ಉತ್ತೇಜಿಸುವ ಮೂಲಕ ಹೊಸ ಮಾರ್ಗವನ್ನು ಕಂಡುಕೊಂಡಿದ್ದರು ಎಂದು ಹೇಳಿದರು.
ಸಾವರ್ಕರ್ ಅವರನ್ನು ಪುಕ್ಕಲ ಎಂದು ಲೇವಡಿ ಮಾಡುವ ಅವರು, ತಾವು ಯಾರನ್ನು ಪೂಜೆ ಮಾಡುತ್ತಾರೆ ಎಂಬುದನ್ನು ಜನರು ತಿಳಿದುಕೊಳ್ಳಬೇಕು ಎಂದು ಕುಟುಕಿದರು.
ಸಾವರ್ಕರ್ ಕುರಿತು ವಿಕ್ರಮ್ ಸಂಪತ್ ಬರೆದಿರುವ ಕೃತಿಯನ್ನು ಕನ್ನಡಕ್ಕೆ ಅನುವಾದ ಮಾಡಬೇಕು. ಆ ಪುಸ್ತಕ ಮಾರಾಟದಿಂದ ಬರುವ ಹಣದಿಂದಲೇ ಪ್ರತಿವರ್ಷ ಪ್ರಶಸ್ತಿಯನ್ನು ನೀಡಬಹುದು ಎಂದು ಸಲಹೆ ನೀಡಿದರು.
ಹಿಟ್ಲರ್ ಸರ್ಕಾರ:
ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಒಂದು ವಾರದ ಹಿಂದೆ ಅಧಿಕಾರಕ್ಕೆ ಬಂದ ಸರ್ಕಾರ ಈ ಕಾರ್ಯಕ್ರಮವನ್ನು ತಡೆಯಲು ಪ್ರಯತ್ನಿಸಿತ್ತು. ಇದು ದಾಷ್ಟೃ. ಮತ್ತೊಂದು ಪಕ್ಷದ ಮಾತು ಕೇಳಿಸಿಕೊಳ್ಳಲಾಗದ ಇದುವೇ ನಿಜಕ್ಕೂ ಹಿಟ್ಲರ್ ಸರ್ಕಾರ ಎಂದು ಕಿಡಿಕಾರಿದರು.
ಈ ಕಾರ್ಯಕ್ರಮವನ್ನು ನಡೆಸಲು ಬಿಡಬಾರದು ಎಂಬ ಕಾರಣಕ್ಕೆ ಅನುಮತಿ ಪಡೆದಿದ್ದರೂ ತೊಂದರೆಕೊಟ್ಟರು. ಅವಕಾಶವನ್ನು ನಿರಾಕರಣೆ ಮಾಡಲಾಗಿತ್ತು. ಆದರೆ, ರಾಜ್ಯಪಾಲರ ಮಧ್ಯಪ್ರವೇಶದಿಂದ ಇದು ಸುಸೂತ್ರವಾಗಿ ನಡೆದಿದೆ. ಒಂದು ವೇಳೆ, ಇದು ರದ್ದಾಗಿದ್ದರೆ ಸರ್ಕಾರದ ವಿರುದ್ಧ ಹೋರಾಟಕ್ಕೆ ದೊಡ್ಡ ಅಸ್ತ್ರ ದೊರೆಯುತ್ತಿತ್ತು ಎಂದರು.
ಪ್ರಧಾನಿ ನರೇಂದ್ರ ಮೋದಿ ಕುರಿತು ಏನೆಲ್ಲ ಮಾತನಾಡುತ್ತಾರೆ. ಆದಾಗ್ಯೂ ಜೈಲಿಗೆ ಯಾರನ್ನೂ ಕಳುಹಿಸಲಿಲ್ಲ. ಹೊಸ ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಪೋಸ್ಟ್ ಅನ್ನು ಮತ್ತೊಬ್ಬರಿಗೆ ಹಂಚಿಕೊಂಡ ಕಾರಣಕ್ಕೆ ಸರ್ಕಾರಿ ನೌಕರನೊಬ್ಬನನ್ನು ಅಮಾನತು ಮಾಡಲಾಗಿದೆ. ಇದು ವಿರುದ್ಧ ಹೇಳಿಕೆ ನೀಡುವವರಿಗೆ ಎಚ್ಚರಿಕೆಯನ್ನು ರವಾನಿಸಿದೆ. ಅಭಿವ್ಯಕ್ತಿ ಸ್ವಾತಂತ್ರೃ ಕುರಿತು ಮಾತನಾಡುವವರು ಈಗ ಎಲ್ಲಿ ಹೋಗಿದ್ದಾರೆ? ಎಂದು ಪ್ರಶ್ನಿಸಿದರು.
ಸಾವರ್ಕರ್ ಸದಾ ಕಾಲಕ್ಕೂ ಪ್ರಸ್ತುತ. ಅಂದಿನ ಬ್ರಿಟಿಷರು, ಈಗಿನ ಸಿದ್ದರಾಮಯ್ಯ ಅವರಂತಹ ಮನಸ್ಥಿತಿಯ ವಿರುದ್ಧ ಹೋರಾಟದ ಕಿಚ್ಚಿಗೆ ಸಾವರ್ಕರ್ ಶಕ್ತಿ ಕೊಡುತ್ತಾರೆ. ಹೀಗಾಗಿ, ಅವರು ಜೀವಂತ. ಸಾವರ್ಕರ್ ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಕೊಟ್ಟರು ಎಂದು ಹೇಳುವ ಅಯೋಗ್ಯರಿಗೆ ಉತ್ತರ ನೀಡುವ ಅಗತ್ಯವಿಲ್ಲ. ಹಾಗೆ ಮಾಡಿದರೆ ಕಂಠಶೋಷಣೆ ಆಗುತ್ತದೆ. ಅದು ಕ್ಷಮಾಪಣೆಯಲ್ಲ, ಅದುವೇ ಅಧಿಕಾರ. ತಪ್ಪು ಮಾಡಿಲ್ಲ ಎಂದು ಬರೆದುಕೊಟ್ಟಿದ್ದರು. ಇದನ್ನೇ ದೇಶದ್ರೋಹಿ ಎಂದು ಟೀಕಿಸುವವರು ತಮ್ಮ ಮುಖವನ್ನು ಒಮ್ಮೆ ಕನ್ನಡಿಯಲ್ಲಿ ನೋಡಿಕೊಳ್ಳಬೇಕು ಎಂದು ತಿರುಗೇಟು ಕೊಟ್ಟರು.
ಖಿಲಾಫತ್ ಹೋರಾಟಕ್ಕೆ ಬೆಂಬಲ ನೀಡಿ ಹಿಂದು-ಮುಸ್ಲಿಮರನ್ನು ವಿಭಜಿಸಿದ ಗಾಂಧಿ ಕುರಿತು ಇವರು ಏಕೆ ಮಾತನಾಡಲ್ಲ? ಇದಕ್ಕೆ ಉತ್ತರವನ್ನೂ ಕೊಡಲ್ಲ ಎಂದು ಕುಟುಕಿದ ಅವರು, ಈಗಿನ ನವಭಾರತವನ್ನು ಸಹಿಸಿಕೊಳ್ಳಲು ಕೆಲವರಿಗೆ ಆಗುತ್ತಿಲ್ಲ. ಹಳೇ ಭಾರತವೇ ಇರಬೇಕು. ದೇಶ ಕೆಳಹಂತದಲ್ಲೇ ಇರಬೇಕೆಂದು ಇವರೆಲ್ಲ ಬಯಸುತ್ತಾರೆ ಎಂದು ಟೀಕಿಸಿದರು.
ಪ್ರತಿಷ್ಠಾನದ ಅಧ್ಯಕ್ಷೆ ಡಾ.ಎಸ್.ಯಶಸ್ವಿನಿ ಇದ್ದರು.