ಓರ್ವನ ಬಂಧನ, ಮೂವರು ಪರಾರಿ

30-Kalaghatagi 1
Published on

ಕಲಘಟಗಿ: ತಾಲೂಕಿನ ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಪ್ರವೇಶಿಸಿ ಮರಗಳ್ಳತನ ಮಾಡುತ್ತಿದ್ದ ತಂಡದ ಓರ್ವನನ್ನು ಮಾಲು ಸಹಿತ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ ಘಟನೆ ಭಾನುವಾರ ನಡೆದಿದೆ.

ತಾಲೂಕಿನ ತುಮರಿಕೊಪ್ಪ ಶಾಖಾ ವ್ಯಾಪ್ತಿಯ ಕೂಡಲಗಿ ಮೀಸಲು ಅರಣ್ಯ ಪ್ರದೇಶದಲ್ಲಿ ಸಾಗವಾನಿ ಮರ ಕಡಿದು ಕಟ್ಟಿಗೆಗಳನ್ನು ಹೊತ್ತು ಅಕ್ರಮವಾಗಿ ಸಾಗಿಸುತ್ತಿದ್ದ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ತಾಲೂಕಿನ ಬೇಗೂರ ಗ್ರಾಮದ ತಂಡ ಮರಗಳ್ಳತನದಲ್ಲಿ ಭಾಗಿಯಾಗಿದ್ದು, ಗ್ರಾಮದ ಹನುಮಂತ ಮಲ್ಲಪ್ಪ ಓಡೋಡಿ (19) ಎಂಬುವನನ್ನು ಬಂಧಿಸಲಾಗಿದೆ. ಇನ್ನುಳಿದ ಮೂವರು ಪರಾರಿಯಾಗಿದ್ದಾರೆ.

ವಲಯ ಅರಣ್ಯಾಧಿಕಾರಿ ಶ್ರೀಕಾಂತ ಪಾಟೀಲ ಮಾರ್ಗದರ್ಶನದಲ್ಲಿ ಉಪವಲಯ ಅರಣ್ಯಾಧಿಕಾರಿ ಆರ್.ಜೆ. ಕಡೆಮನಿ, ಅರಣ್ಯ ರಕ್ಷಕರಾದ ಅಮೋಘಸಿದ್ಧ ಪ್ಯಾಟಿ, ಯಲ್ಲಪ್ಪ ವಡವಟ್ಟಿ, ಸುರೇಶ ಹರೋಲಿ, ಮೌನೇಶ ಲಿಂಗಶೆಟ್ಟಿ, ಅರಣ್ಯ ವೀಕ್ಷಕರಾದ ಬಾಳು, ನಾರಾಯಣ, ಗುರುನಾಥ, ತಬರೇಜ, ಕರೆಪ್ಪ, ಸಚಿನ್ ಹಾಗೂ ಚಾಲಕ ಮಲ್ಲಿಕಜಾನ್ ಕಾರ್ಯಾಚರಣೆ ನಡೆಸಿದರು. ಸಾಗವಾನಿ ದಿಮ್ಮಿಗಳನ್ನು ಜಪ್ತಿ ಮಾಡಲಾಗಿದ್ದು, ಕಲಘಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಹನುಮಂತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net