ಓರ್ವ ಬಾಲಕಾರ್ಮಿಕ ಹಾಗೂ 08 ಕಿಶೋರ ಕಾರ್ಮಿಕರ ರಕ್ಷಣೆ

ಓರ್ವ ಬಾಲಕಾರ್ಮಿಕ ಹಾಗೂ 08 ಕಿಶೋರ ಕಾರ್ಮಿಕರ ರಕ್ಷಣೆ
Published on

ಹಾಸನ: ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಹಾಗೂ ಕಾರ್ಮಿಕ ಆಯುಕ್ತರ ನಿರ್ದೇಶನದಂತೆ ಸ್ವಾತಂತ್ರ್ಯ ದಿನಾಚರಣೆ-2024ರ ಪ್ರಯುಕ್ತ ಆ. 1 ರಿಂದ 31 ರವರೆಗೆ ಜಿಲ್ಲೆಯ ಎಲ್ಲಾ ತಾಲೂಕಿನಾದ್ಯಂತ ಅಂಗಡಿ, ಮುಂಗಟ್ಟು, ಗ್ಯಾರೇಜ್, ಬಾರ್ ರೆಸ್ಟೋರೆಂಟ್‌ಗಳಲ್ಲಿ ಬಾಲ ಹಾಗೂ ಕಿಶೋರ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ರಕ್ಷಣಾ ಕಾರ್ಯಾಚರಣೆಯಲ್ಲ್ಲಿ ಒಬ್ಬ ಬಾಲಕಾರ್ಮಿಕ ಹಾಗೂ 08 ಕಿಶೋರ ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ. ಪಾಲನೆ-ಪೋಷಣೆ ರಕ್ಷಣೆಯ ಹಿತದೃಷ್ಟಿಯಿಂದ ಸದರಿ ಮಕ್ಕಳನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ವಶಕ್ಕೆ ಒಪ್ಪಿಸಲಾಗಿದೆ. ಎಂದು ಕಾರ್ಮಿಕ ಅಧಿಕಾರಿ ಹಾಗೂ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ ಸದಸ್ಯ ಕಾರ್ಯದರ್ಶಿ ತಿಳಿಸಿದ್ದಾರೆ.
ಮಕ್ಕಳನ್ನು ಕಾನೂನು ಬಾಹಿರವಾಗಿ ಕೆಲಸಕ್ಕೆ ನೇಮಿಸಿಕೊಂಡಿದ್ದ ಮಾಲೀಕರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು. 14 ವರ್ಷದೊಳಗಿನ ಮಕ್ಕಳನ್ನು ಯಾವುದೇ ಉದ್ದಿಮೆಯಲ್ಲಿ ಹಾಗೂ 14 ರಿಂದ 18 ವರ್ಷದೊಳಗಿನ ಕಿಶೋರರನ್ನು ಅಪಾಯಕಾರಿ ಕೆಲಸದಲ್ಲಿ ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ. ಇಂತಹ ಮಕ್ಕಳು ಕೆಲಸದಲ್ಲಿ ತೊಡಗಿರುವುದು ಕಂಡು ಬಂದಲ್ಲಿ ಕಾರ್ಮಿಕ ಸಹಾಯವಾಣಿ 155214 ಹಾಗೂ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ, ದೂರವಾಣಿ ಸಂಖ್ಯೆ-08172-235447 ಹಾಗೂ ಮಕ್ಕಳ ಸಹಾಯವಾಣಿ 1098ಕ್ಕೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ.
ಬಾಲ ಕಾರ್ಮಿಕ ಪದ್ಧತಿಯ ಕುರಿತು ಕರಪತ್ರ ಹಾಗೂ ಬಿತ್ತಿಪತ್ರ ಅಂಟಿಸುವುದರ ಮೂಲಕ ಸಾರ್ವಜನಿಕರಲ್ಲಿ ಹಾಗೂ ಅಂಗಡಿ, ವಿವಿಧ ಸಂಸ್ಥೆಗಳ ಮಾಲೀಕರಲ್ಲಿ ಅರಿವು ಮೂಡಿಸಲಾಯಿತು. ಕಾರ್ಯಾಚರಣೆಯಲ್ಲಿ ಆಯಾ ತಾಲೂಕು ತಹಸೀಲ್ದಾರ, ಕಾರ್ಮಿಕ ಅಧಿಕಾರಿಗಳು, ಹಿರಿಯ ಕಾರ್ಮಿಕ ನಿರೀಕ್ಷಕರು,ಕಾರ್ಮಿಕ ನಿರೀಕ್ಷಕರು, ಬಾಲಕಾರ್ಮಿಕ ಮತ್ತು ಕಿಶೋರಾವಸ್ಥೆ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ ಕಾಯ್ದೆ)2016ರಡಿ ನೇಮಕವಾದ ನಿರೀಕ್ಷಕರು ಕಾರ್ಯನಿರ್ವಣಾಧಿಕಾರಿ ತಾಲೂಕು ಪಂಚಾಯತ್, ನಗರಸಭೆ ಮುಖ್ಯಾಧಿಕಾರಿ, ಸಮಾಜ ಕಲ್ಯಾಣಾಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ಸಿಬ್ಬಂದಿ, ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಹಾಗೂ ಇವರೊಂದಿಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸಿಬ್ಬಂದಿ, ಎಸ್.ಜೆ.ಪಿ.ಯು ಘಟಕದ ಸಿಬ್ಬಂದಿಗಳು, ಮಕ್ಕಳ ಸಹಾಯವಾಣಿ ಸಿಬ್ಬಂದಿ ಮತ್ತು ಬಾಲಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕರು ಪ್ರಕಟಣೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net