ಓಬವ್ವನ ಮಾತೃಭೂಮಿಯ ಭಕ್ತಿ ಅನನ್ಯ

ವೀರ ಒನಕೆ ಓಬವ್ವ ಜಯಂತಿ
ಪಟ್ಟಣದ ಆಟೋ ನಿಲ್ದಾಣದಲ್ಲಿ ಛಲವಾದಿ ಮಹಾಸಭಾ ತಾಲೂಕು ಘಟಕದಿಂದ ಆಯೋಜಿಸಿದ್ದ ವೀರವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮಲ್ಲಿ ಛಲವಾದಿ ಸಮುದಾಯದ ಕೆ.ಆರ್.ತಿಮ್ಮಯ್ಯ, ಕೆ.ಕೆ.ರುದ್ರಯ್ಯ, ರುದ್ರಮ್ಮ, ಪ್ರೀತಮ್ ಅವರನ್ನು ಸನ್ಮಾನಿಸಲಾಯಿತು.
Published on

ಆಲೂರು: ಓಬವ್ವನ ಶೌರ್ಯ, ಮಾತೃಭೂಮಿಯ ಮೇಲಿನ ಭಕ್ತಿ ಅನನ್ಯವಾದದ್ದು ಎಂದು ತಹಸೀಲ್ದಾರ್ ಸಿ.ಪಿ.ನಂದಕುಮಾರ್ ಅಭಿಪ್ರಾಯಪಟ್ಟರು.

ಪಟ್ಟಣದ ಆಟೋ ನಿಲ್ದಾಣದಲ್ಲಿ ಛಲವಾದಿ ಮಹಾಸಭಾ ತಾಲೂಕು ಘಟಕದಿಂದ ಆಯೋಜಿಸಿದ್ದ ವೀರವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

18ನೇ ಶತಮಾನದ ಚಿತ್ರದುರ್ಗದ ಕೋಟೆಯ ಪಾಳೆಗಾರನಾಗಿದ್ದ ಮದಕರಿ ನಾಯಕನ ಕೋಟೆಯ ಕಾವಲುಗಾರ ಕಹಳೆ ಮುದ್ದಹನುಮಪ್ಪನ ಅನುಪಸ್ಥಿತಿಯಲ್ಲಿ ಕೋಟೆಯ ನುಸುಳು ಮಾರ್ಗದ ಕಾವಲಿನಲ್ಲಿ ಒನಕೆಯೊಂದಿಗೆ ಓಬವ್ವ ತಾನೇ ನಿಂತು, ಹೈದರಾಲಿಯ ಸೇನಾನಿಗಳನ್ನು ಸದೆಬಡಿದರು. ಇತಿಹಾಸದ ಪುಟಗಳಲ್ಲಿ ಅಚ್ಚಾಗಿರುವ ಒನಕೆ ಓಬವ್ವರ ಹೆಸರು ಚಿತ್ರದುರ್ಗದ ಇತಿಹಾಸದಲ್ಲಿ ಮರೆಯಲಾಗದು ಎಂದು ತಿಳಿಸಿದರು.

ಪ್ರಧಾನ ಭಾಷಣ ಮಾಡಿದ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ ಮಲ್ಲೇಶ್ ಮಾತನಾಡಿ, ಪೌರಾಣಿಕ, ಐತಿಹಾಸಿಕ ಹಿನ್ನೆಲೆಯುಳ್ಳ ಚಿತ್ರದುರ್ಗದ ವೀರ ವನಿತೆ ಒನಕೆ ಓಬವ್ವ ಅವರು ಸಮಯೋಚಿತ ಯುಕ್ತಿ, ಧೈರ್ಯ ಮತ್ತು ಸ್ಥೈರ್ಯದ ಮೂಲಕ ಇತಿಹಾಸದ ಪುಟದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಅವರ ಜನ್ಮದಿನವನ್ನು ‘ಒನಕೆ ಓಬವ್ವ ಜಯಂತಿ’ ಎಂದು ಆಚರಿಸಲು ಸರ್ಕಾರ ನಿರ್ಧರಿಸಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಮತ್ತು ಸಂತಸದ ಸಂಗತಿ ಎಂದರು.

ಇದೇ ಸಂದರ್ಭದಲ್ಲಿ ಛಲವಾದಿ ಸಮುದಾಯದವರು ಹಾಗೂ ತಾಲೂಕಿನ ಪ್ರಥಮ ಎಂಎ ಪದವಿ ಪಡೆದ ಕಾಟಿಹಳ್ಳಿಯ ಕೆ.ಆರ್. ತಿಮ್ಮಯ್ಯ, ಪ್ರಥಮ ಬಿ.ಎಡ್. ಪದವಿ ಪಡೆದ ಕರಡಿ ಬೆಟ್ಟದ ಕೆ.ಕೆ. ರುದ್ರಯ್ಯ, 105 ವಯಸ್ಸಿನ ಮಾದನಹಳ್ಳಿ ಗ್ರಾಮದ ನಿವಾಸಿ ರುದ್ರಮ್ಮ, ತೊರಳ್ಳಿಯ ರಾಷ್ಟ್ರೀಮಟ್ಟದ ಕ್ರೀಡಾಪಟು ಪ್ರೀತಮ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿಯ ಅಧ್ಯಕ್ಷೆ ತಾಹೇರ ಬೇಗಂ, ಸದಸ್ಯ ತೌಫಿಕ್ ಅಹಮ್ಮದ್, ಛಲವಾದಿ ಮಹಾಸಭಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜ್ಜೇನಳ್ಳಿ ಲೋಕೇಶ್, ತಾಲೂಕು ಘಟಕದ ಅಧ್ಯಕ್ಷ ಎ.ಟಿ.ಮಲ್ಲೇಶ್, ಉಪಾಧ್ಯಕ್ಷ ಲೋಹಿತ್, ತಾಲೂಕು ಜೆಡಿಎಸ್ ಅಧ್ಯಕ್ಷ ಮಂಜೇಗೌಡ, ಬಿಜೆಪಿ ಅಧ್ಯಕ್ಷೆ ಉಮಾ ರವಿ ಪ್ರಕಾಶ್, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಂತಿ ಕೃಷ್ಣ, ತಾಲೂಕು ಅಧ್ಯಕ್ಷ ಎಸ್.ಎಸ್.ಶಿವಮೂರ್ತಿ, ಪಾಳ್ಯ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪಿ.ಎಲ್.ಲಿಂಗರಾಜು, ದಲಿತ ಸಂಚಾಲಕ ಬಸವರಾಜು, ಮುಖಂಡರಾದ ದೇವರಾಜು, ಅಜ್ಜೇನಳ್ಳಿ ರಂಗಯ್ಯ, ಹಿಂದುಳಿದ ವರ್ಗಗಳ ಜಿಲ್ಲಾ ಗೌರವ ಕಾರ್ಯದರ್ಶಿ ಶಂಕರಚಾರ್ ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net