

ಚಿತ್ರದುರ್ಗ: ಸಕಲ ಸಂಪತ್ತಿನ ಅಧಿದೇವತೆ, ಪದ್ಮಸುಂದರಿ, ಕಮಲ ಮೊಗದ ನಾರಾಯಣಿ ವರಮಹಾಲಕ್ಷ್ಮೀ ದೇವಿಯ ಹಬ್ಬವನ್ನು ಒನಕೆ ಓಬವ್ವ ನಗರಿ ಸೇರಿ ಜಿಲ್ಲಾದ್ಯಂತ ಸಂಭ್ರಮದೊಂದಿಗೆ ಶ್ರದ್ಧಾ-ಭಕ್ತಿಯಿಂದ ಶುಕ್ರವಾರ ಆಚರಿಸಲಾಯಿತು.
ವೈವಿಧ್ಯಮಯ ರಂಗೋಲಿಗಳು, ತಳಿರು-ತೋರಣಗಳಿಂದ ಅಲಂಕೃತಗೊಂಡಿದ್ದ ಮನೆಗಳು ಕಂಗೊಳಿಸಿದವು. ಮಹಿಳೆಯರ ಸಡಗರಕ್ಕೆ ಹಬ್ಬ ಸಾಕ್ಷಿಯಾಯಿತು.
ಶುಚಿಗೊಳಿಸಿದ್ದ ದೇವರ ಕೋಣೆ, ಹೊರಭಾಗದಲ್ಲಿ ಮಹಾಲಕ್ಷ್ಮೀ ದೇವಿ ಮೂರ್ತಿ ಪ್ರತಿಷ್ಠಾಪಿಸಿ, ಶುಭ್ರ ವಸ್ತ್ರ ಧರಿಸಿ, ಆಭರಣ ತೊಡಿಸಿ, ಕಮಲದ ಹೂ, ಹಾರ, ವಿವಿಧ ಪುಷ್ಪಗಳಿಂದ ಕಣ್ಮನ ಸೆಳೆಯುವಂತೆ ಸಿಂಗರಿಸಿ, ಹಣ್ಣು, ನೈವೇದ್ಯ ಸಮರ್ಪಿಸುವ ಮೂಲಕ ಮಹಿಳೆಯರು ವಿಶೇಷವಾಗಿ ಪೂಜೆ ಸಲ್ಲಿಸಿದರು.
ದೇವಿ ಪುರಾಣ, ವರಮಹಾಲಕ್ಷ್ಮೀ ಅಷ್ಟೋತ್ತರ, ಸಹಸ್ರನಾಮ ಪಠಿಸಿದರು. ಭಕ್ತಿ ಗೀತೆಗಳೊಂದಿಗೆ ಮಹಾಮಂಗಳಾರತಿ ನೆರವೇರಿಸಿದರು. ಸಂಬಂಧಿಕರು, ನೆರೆ-ಹೊರೆಯವರನ್ನು ಪೂಜೆಗೆ ಕರೆದು ಅರಿಶಿಣ-ಕುಂಕುಮ, ಫಲ-ತಾಂಬೂಲದೊಂದಿಗೆ ಉಡಿ ತುಂಬುವ ಮೂಲಕ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಸಾಮಾನ್ಯವಾಗಿ ಶ್ರಾವಣ ಮಾಸದ ಎರಡನೇ ಶುಕ್ರವಾರ ಆಚರಿಸುವ ಈ ಹಬ್ಬಕ್ಕೆ ಜಿಲ್ಲೆಯ ಶಕ್ತಿದೇವತೆ ದೇಗುಲಗಳಲ್ಲೂ ಮುಂಜಾನೆಯಿಂದಲೇ ಅಭಿಷೇಕ, ಪುಷ್ಪಾಲಂಕಾರ ಸೇವೆ ಸೇರಿ ವಿಶೇಷ ಪೂಜೆಗಳು ಜರುಗಿದವು.
ನಗರದ ಹೊಳಲ್ಕೆರೆ ರಸ್ತೆಯ ಬರಗೇರಮ್ಮ ದೇವಿಗೆ ವಿವಿಧ ಬಗೆಯ ಪುಷ್ಪಗಳಿಂದ ವೈಭವೋಪೇತವಾಗಿ ಮಹಾಲಕ್ಷ್ಮೀ ರೂಪದ ಮಾದರಿಯಲ್ಲಿ ಅಲಂಕರಿಸಲಾಗಿತ್ತು. ದೇವಿಯ ಮೂರ್ತಿಯನ್ನು ಭಕ್ತರು ಕಣ್ತುಂಬಿಕೊಂಡರು.
ದುರ್ಗದ ಅಧಿದೇವತೆ ಏಕನಾಥೇಶ್ವರಿ, ನಗರದೇವತೆಗಳಾದ ಉಚ್ಚಂಗಿಯಲ್ಲಮ್ಮ, ಬರಗೇರಮ್ಮ, ಕಣಿವೆಮಾರಮ್ಮ, ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ, ಬನ್ನಿ ಮಹಾಕಾಳಿ, ಚೌಡೇಶ್ವರಿ, ಗೌರಸಂದ್ರ ಮಾರಮ್ಮ, ಕುಕ್ಕವಾಡೇಶ್ವರಿ, ಕೆಳಗೋಟೆಯ ಕೊಲ್ಲಾಪುರದ ಮಹಾಲಕ್ಷ್ಮೀ, ಅಂತರಘಟ್ಟಮ್ಮ, ಮಲೆನಾಡು ಚೌಡೇಶ್ವರಿ, ಸಿಂಗಧೂರು ಚೌಡೇಶ್ವರಿ, ಕನ್ಯಕಾ ಪರಮೇಶ್ವರಿ, ಅಂಬಾಭವಾನಿ, ದುರ್ಗಾ ಮಾತೆ, ಕಾಳಿ ಕಮಠೇಶ್ವರಿ, ಮಾಸ್ತಮ್ಮ ದೇವಿ ಸೇರಿ ಶಕ್ತಿದೇವತೆಗಳಿಗೆ ಲಕ್ಷ್ಮೀ ರೂಪದಲ್ಲಿ ಅಲಂಕಾರ ಸೇವೆ ನೆರವೇರಿದವು.
ಬೆಳಗ್ಗೆಯಿಂದ ರಾತ್ರಿ 9.30ರವರೆಗೂ ಸಾವಿರಾರು ಭಕ್ತರು ದೇಗುಲಗಳಿಗೆ ಭೇಟಿ ನೀಡಿ ಇಷ್ಟಾರ್ಥ ಈಡೇರಿಕೆಗೆ ಪ್ರಾರ್ಥಿಸಿದರು. ನೆರೆದಿದ್ದ ಭಕ್ತರಿಗೆ ಮಹಾಮಂಗಳಾರತಿ, ತೀರ್ಥ, ಪ್ರಸಾದ ವಿತರಿಸಲಾಯಿತು.
ಚಂದ್ರಯಾನ-3 ಮಾದರಿ ಅಲಂಕಾರ
ಚಿತ್ರದುರ್ಗದ ಜೆಸಿಆರ್ ಬಡಾವಣೆಯ ರಾಜೇಶ್ವರಿ ಸಿದ್ದರಾಮ್ ಮನೆಯಲ್ಲಿ ಚಂದ್ರಯಾನ-3 ಮಾದರಿಯಲ್ಲಿ ವರಮಹಾಲಕ್ಷ್ಮೀ ಮೂರ್ತಿ ಪ್ರತಿಷ್ಠಾಪಿಸಿ ಕುಟುಂಬದವರು ಪೂಜೆ ಸಲ್ಲಿಸಿದರು.
ಗಮನಸೆಳೆದ ಕಮಲದ ಸಿಂಗಾರ
ಚಿತ್ರದುರ್ಗದ ಜೆಸಿಆರ್ ಬಡಾವಣೆಯ ಶ್ರೀಹೇಮಾ ರಂಗನಾಥ್ ಮನೆಯಲ್ಲಿ ಅಲಂಕೃತ ಮಹಾಲಕ್ಷ್ಮೀ ಮೂರ್ತಿ ಹಿಂಬದಿಯ ಸುತ್ತಲೂ ಒಂಬತ್ತು ಕಮಲದ ಹೂಗಳಿಂದ ಸಿಂಗರಿಸಲಾಗಿತ್ತು. ಕೆಲವರ ಮನೆಗಳಲ್ಲಿನ ವಿಶಿಷ್ಟ ಅಲಂಕಾರ ಅತಿಥಿಗಳ ಗಮನ ಸೆಳೆದವು.