ಓಬವ್ವ ಜಯಂತಿ ವಿಜೃಂಭಣೆಯಿಂದ ಆಚರಿಸೋಣ

ADC
Published on

ಚಿತ್ರದುರ್ಗ: ಐತಿಹಾಸಿಕ ಕೋಟೆನಾಡಿನ ವೀರವನಿತೆ ಒನಕೆ ಓಬವ್ವ ಜಯಂತ್ಯುತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಅಗತ್ಯ ಸಿದ್ಧತೆ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚಿಸಿದರು.

ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಜಿಲ್ಲಾಡಳಿತದಿಂದ ನ. 11ರಂದು ತರಾಸು ರಂಗಮಂದಿರದಲ್ಲಿ ಬೆಳಗ್ಗೆ 11ಕ್ಕೆ ವೇದಿಕೆ ಕಾರ್ಯಕ್ರಮ, ಅದಕ್ಕೂ ಮುನ್ನ 9ಕ್ಕೆ ಕೋಟೆ ಮುಂಭಾಗದಿಂದ ಓಬವ್ವ ಭಾವಚಿತ್ರ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ವಿವಿಧ ಜನಪದ ಕಲಾತಂಡಗಳು, ಮಹಿಳೆಯರು ಪೂರ್ಣಕುಂಭದೊಂದಿಗೆ ಭಾಗವಹಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಜಯಂತಿ ಅಂಗವಾಗಿ ಎಲ್ಲ ಪ್ರತಿಮೆ, ಪುತ್ಥಳಿ ಅಲಂಕರಿಸಬೇಕು. ಒಂದು ದಿನ ಮುಂಚಿತವಾಗಿ ಓಬವ್ವ ಪ್ರತಿಮೆಗೆ ವಿದ್ಯುತ್ ಹಾಗೂ ಪುಷ್ಪಾಲಂಕಾರ ಮಾಡಿರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಶ್ರೀ ಬಸವನಾಗಿದೇವ ಸ್ವಾಮೀಜಿ ಮಾತನಾಡಿ, ಜಿಲ್ಲಾಡಳಿತದ ಆಚರಣೆ ನಂತರ ರಾಜ್ಯಮಟ್ಟದ ಓಬವ್ವ ಜಯಂತಿ ಕಾರ್ಯಕ್ರಮ ಆಯೋಜಿಸುವ ಚಿಂತನೆ ಇದೆ. ಆ ವೇಳೆ ಜಿಲ್ಲಾ, ತಾಲೂಕು ಮಟ್ಟದ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ತೋರಿದ ಸ್ತ್ರೀಯರನ್ನು ಜಾತ್ಯತೀತವಾಗಿ ಗುರುತಿಸಿ, ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.

ದಾವಣಗೆರೆ ವಿವಿ ವಿದ್ಯಾವಿಷಯಕ ಪರಿಷತ್ ಸದಸ್ಯೆ ಎನ್.ಬಿ.ಭಾರ್ಗವಿ ದ್ರಾವಿಡ್ ಮಾತನಾಡಿ, ಪ್ರಸ್ತುತ ಯುವಸಮೂಹಕ್ಕೆ ಓಬವ್ವಳ ಇತಿಹಾಸ ತಿಳಿಸುವ ಕೆಲಸವಾಗಬೇಕಿದೆ. ಹೀಗಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ಆಹ್ವಾನಿಸಬೇಕು ಎಂದು ಸಲಹೆ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್, ಛಲವಾದಿ ಸಮಾಜದ ಮುಖಂಡರಾದ ಎಚ್.ಸಿ.ನಿರಂಜನಮೂರ್ತಿ, ಎಚ್.ಶೇಷಣ್ಣ, ಎಸ್.ವಿ.ಗುರುಮೂರ್ತಿ, ಎಚ್.ಹಾಲಪ್ಪಸ್ವಾಮಿ, ಎಸ್.ಎನ್.ರವಿಕುಮಾರ್, ತಿಪ್ಪೇಸ್ವಾಮಿ, ಕೆ.ಸಿ.ಜಗದೀಶ್, ಅಣ್ಣಪ್ಪಸ್ವಾಮಿ, ಜಯರಾಮ್, ನವೀನ್‌, ಕಣಿವೆಮಾರಮ್ಮ ಸಂಘದ ತಿಪ್ಪೇಸ್ವಾಮಿ, ನಾಯಕ ಸಮಾಜದ ಸುರೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net