ಓಬವ್ವ ಜಯಂತಿ ಅರ್ಥಪೂರ್ಣವಾಗಿ ಆಚರಿಸೋಣ

CTD Veeravanithe--------------
Published on

ಚಿತ್ರದುರ್ಗ: ಕೋಟೆನಾಡನ್ನು ರಕ್ಷಿಸಿದ ವೀರವನಿತೆ ಒನಕೆ ಓಬವ್ವ ಜಯಂತಿಯನ್ನು ಈ ಬಾರಿ ನಗರದ ವಾಲ್ಮೀಕಿ ಭವನದಲ್ಲಿ ನ. 11ರಂದು ಬೆಳಗ್ಗೆ 11.30ಕ್ಕೆ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಒನಕೆ ಓಬವ್ವ ಜಯಂತಿ ಆಚರಣೆ ಸಂಬಂಧ ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ಮಾತನಾಡಿದರು.

ಅಂದು ಬೆಳಗ್ಗೆ 9.30ಕ್ಕೆ ವೀರವನಿತೆಯ ಭಾವಚಿತ್ರದೊಂದಿಗೆ ಕೋಟೆ ಮುಂಭಾಗದಿಂದ ಅದ್ದೂರಿ ಮೆರವಣಿಗೆ ಆರಂಭವಾಗಲಿದೆ. ಗಾಂಧಿ ವೃತ್ತ, ಪ್ರವಾಸಿ ಮಂದಿರ, ಒನಕೆ ಓಬವ್ವ, ಮದಕರಿನಾಯಕ ವೃತ್ತ ಮಾರ್ಗವಾಗಿ ಸಂಚರಿಸಿ, ವಾಲ್ಮೀಕಿ ಭವನ ತಲುಪಲಿದೆ. ವಿವಿಧ ಜನಪದ ಕಲಾತಂಡಗಳು ಪಾಲ್ಗೊಳ್ಳಲಿವೆ ಎಂದರು.

ಸಮಾಜದವರ ಆಶಯದಂತೆ ನಟರಾಜ್ ಅವರನ್ನು ವಿಶೇಷ ಉಪನ್ಯಾಸ ನೀಡಲು ಆಹ್ವಾನಿಸಲಾಗುವುದು. ಜಿಲ್ಲೆಯ ಎಲ್ಲ ಶಾಲೆ, ಕಾಲೇಜುಗಳು, ಗ್ರಾಪಂ, ಸ್ಥಳೀಯ ಸಂಸ್ಥೆಗಳಲ್ಲಿ ಓಬವ್ವ ಜಯಂತಿ ಆಚರಿಸಬೇಕು. ಅಧಿಕಾರಿಗಳು ಶಿಷ್ಠಾಚಾರ ಪಾಲಿಸುವಂತೆ ಸೂಚಿಸಿದರು.

ರಾಜ್ಯಸಭೆ ಮಾಜಿ ಸದಸ್ಯ ಎಚ್. ಹನುಮಂತಪ್ಪ ಮಾತನಾಡಿ, ವೀರ ವನಿತೆಯ ಧೈರ್ಯ, ಸಾಹಸ ಇಡೀ ವಿಶ್ವಕ್ಕೆ ತಿಳಿದಿದೆ. ಸರ್ವ ಸಮುದಾಯದವರು ಸೇರಿ ಜಯಂತಿ ಆಚರಿಸಬೇಕು. ಮದಕರಿನಾಯಕರ ರಾಜ್ಯಕ್ಕೆ ಜೀವ ಕೊಟ್ಟ ಓಬವ್ವಗೆ ನಾಯಕರ ಜಯಂತಿ ವೇಳೆ ಸ್ಮರಿಸಬೇಕಾದ್ದು ಎಲ್ಲರ ಕರ್ತವ್ಯ ಎಂದು ಮನವಿ ಮಾಡಿದರು.

ಬಸವನಾಗಿದೇವ ಸ್ವಾಮೀಜಿ, ಎಸಿ ಮೆಹಬೂಬ್ ಜಿಲಾನಿ ಖುರೇಶಿ, ಡಿಡಿಪಿಐ ಮಂಜುನಾಥ್, ಛಲವಾದಿ ಮಹಾಸಭಾದ ಅಧ್ಯಕ್ಷ ಎಚ್. ಶೇಷಣ್ಣ, ಮುಖಂಡರಾದ ಎಚ್.ಸಿ. ನಿರಂಜನಮೂರ್ತಿ, ಎಸ್.ವಿ. ಗುರುಮೂರ್ತಿ, ವೆಂಕಟೇಶ್, ರವಿಕುಮಾರ್ ಪೂಜಾರ್, ದೇವರಾಜ್, ಜಯರಾಂ, ಅಣ್ಣಪ್ಪ, ದಯಾನಂದ್, ಪ್ರಹ್ಲಾದ್, ನವೀನ್, ಧರ್ಮರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net