

ಕೊಳ್ಳೇಗಾಲ: ಮಹಿಳೆಯರಿಗೆ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಲು ವಿಜಯವಾಣಿ ಪತ್ರಿಕೆ ನಡೆಸುತ್ತಿರುವ ನಾರಿ ನಿನಗೊಂದು ಸ್ಯಾರಿ ಕಾರ್ಯಕ್ರಮ ಅಭಿನಂದನಾರ್ಹ ಎಂದು ಶ್ರೀ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕಿ ಡಾ.ಎಚ್.ಎಸ್ ಪ್ರೇಮಲತಾ ಮೆಚ್ಚುಗೆ ವ್ಯಕ್ತಪಡಿಸಿದರು.
ಪಟ್ಟಣದ ಶ್ರೀ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಾರಿ ನಿನಗೊಂದು ಸ್ಯಾರಿ ಸ್ಪರ್ಧೆಯ ಅದೃಷ್ಟಶಾಲಿ ಓದುಗ ವಿಜೇತರರನ್ನು ಲಕ್ಕಿ ಡಿಪ್ ಮೂಲಕ ಆಯ್ಕೆ ಮಾಡಿ ಮಾತನಾಡಿದರು.
ಪತ್ರಿಕೆಗಳು ಓದುಗರಿಗೆ ಸರಿ, ತಪ್ಪನ್ನು ತಿಳಿಸುತ್ತದೆ. ಇದರಿಂದ ಓದುಗರಲ್ಲಿ ವಿವೇಕ ಬೆಳೆಯುತ್ತದೆ. ಪತ್ರಿಕೆ ಓದಿದ ಬಳಿಕವವೇ ದಿನವನ್ನು ಪ್ರಾರಂಭಿಸುವ ಅನೇಕರಿದ್ದಾರೆ. ನಿವೃತ್ತ ಜೀವನದಲ್ಲಿರುವವರು ದಿನವಿಡೀ ಪತ್ರಿಕೆ ಜತೆ ಕಾಲ ಕಳೆಯುತ್ತಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ಹಾಗೂ ನಂತರದಲ್ಲಿ ನಡೆದ ಕ್ರಾಂತಿಗಳಲ್ಲಿ ಪತ್ರಿಕೆಗಳ ಮಹತ್ವ ಪ್ರಮುಖವಾಗಿರುತ್ತದೆ. ವಿದ್ಯಾರ್ಥಿಗಳು ಪಠ್ಯ ಪುಸ್ತಕದ ಜತೆಗೆ ಪತ್ರಿಕೆಗಳನ್ನು ಓದಬೇಕು ಎಂದು ಕಿವಿಮಾತು ಹೇಳಿದರು.
ರಾಜ್ಯಶಾಸ್ತ್ರ ಸಹ ಪ್ರಾಧ್ಯಾಪಕಿ ಡಾ.ಸುಧಾ ಮಾತನಾಡಿ, ಪತ್ರಿಕೆಗಳು ನಮ್ಮ ಬದುಕಿನ ಅವಿಭಾಜ್ಯ ಅಂಗ ಎಂದರೆ ತಪ್ಪಾಗಲಾರದು. ನನಗೆ ಚಿಕ್ಕಂದಿನಿಂದಲೇ ಪತ್ರಿಕೆ ಓದುವ ಹವ್ಯಾಸವಿದೆ. ಇಂದಿನ ನನ್ನ ಬೆಳವಣಿಗೆಗೆ ಪತ್ರಿಕೆಗಳು ಸಹ ಕಾರಣವಾಗಿದೆ. ರೈತರು, ಯುವಕರು, ಮಹಿಳೆಯರು, ವಿದ್ಯಾರ್ಥಿಗಳಿಗೆ ಅನುಕೂಲವಾಗುವ ವಿಚಾರವನ್ನು ಪತ್ರಿಕೆ ನೀಡುತ್ತಿದೆ ಎಂದರು.
ಶ್ರೀ ಮಹದೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಮಹದೇವಯ್ಯ ಮಾತನಾಡಿದರು. ಕಾಲೇಜಿನ ಅರ್ಥಶಾಸ್ತ್ರ ಸಹ ಪ್ರಾಧ್ಯಾಪಕಿ ಡಾ.ಪ್ರೇಮಕುಮಾರಿ, ಭೂಗೋಳಶಾಸ್ತ್ರ ಸಹ ಪ್ರಾಧ್ಯಾಪಕ ಸುಂದರ್‌ಮೂರ್ತಿ, ಸಹ ಪ್ರಾಧ್ಯಾಪಕರಾದ ಡಾ.ಶಶಿಕಲಾ, ಸಫೀನಾ ಬಾನು, ಶಶಿಕಲಾ, ಡಾ.ವೇಣುಗೋಪಾಲ್, ಡಾ.ಗಂಗಾಧರ್, ಮಧುಸೂದನ್, ಪ್ರಕಾಶ್, ಕಾಲೇಜಿನ ನೌಕರ ಸರ್ವೇಶ್ ಹಾಗೂ ವಿದ್ಯಾರ್ಥಿಗಳಿದ್ದರು.
ವಿಜೇತರು:
ಪುಟ್ಟತಾಯಮ್ಮ ಕೊಳ್ಳೇಗಾಲ ಪಟ್ಟಣ, ಎಂ.ಪಿ ದೀಪಶ್ರೀ ಬಸವೇಶ್ವರನಗರ, ಮಮತಾ ಶಿವಲಿಂಗಸ್ವಾಮಿ ರಾಮಸ್ವಾಮಿ ಲೇಔಟ್, ಅಸ್ಸಿಯ ಸುಲ್ತಾನಾ ಸಾಮಂದಗೇರಿ ಬೀದಿ, ಎಂ.ಸಿ ಗೀತಾ ಕೆಂಪನಪಾಳ್ಯ.