ಓದುವ ಹವ್ಯಾಸ ಬೆಳೆಸಿಕೊಳ್ಳಿ

30 vikram 6
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಏನೂ ಇಲ್ಲದ ಕಾಲದಲ್ಲಿ ಅಕ್ಷರ ಕ್ರಾಂತಿ ಮಾಡಿ ಕಾದಂಬರಿ, ಪತ್ರಿಕೆಗಳ ಮೂಲಕ ಸಾಹಿತ್ಯ ರಚನೆ ಮಾಡಿ ಓದುವ ಅಭಿರುಚಿ ಬೆಳೆಸುವುದರ ಜತೆಗೆ ಸಮಾಜಕ್ಕೆ ಸಂದೇಶ ನೀಡಿದ ಶ್ರೇಷ್ಠ ಕಾದಂಬರಿಕಾರ ಗಳಗನಾಥರು ಎಂದು ವಿಮರ್ಶಕ ಪ್ರೊ. ಹರ್ಷ ಡಂಬಳ ಹೇಳಿದರು.
ನಗರದ ಜೆಎಸ್‌ಎಸ್ ಕಾಲೇಜಿನ ಶಿಕ್ಷಣ ಕಾಲೇಜಿನಲ್ಲಿ ಹಾವೇರಿಯ ಶ್ರೀ ಗಳಗನಾಥ ಮತ್ತು ನಾ. ಶ್ರೀ. ರಾಜಪುರೋಹಿತ ಪ್ರತಿಷ್ಠಾನ ವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ ಶ್ರೀ ಗಳಗನಾಥ ಕಾದಂಬರಿಗಳ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗಳಗನಾಥರು ಕಾದಂಬರಿಗಳ ರಚನೆ ಜತೆಗೆ ಸದ್ಭೋಧ ಚಂದ್ರಿಕೆ ಪತ್ರಿಕೆ ಮೂಲಕ ಓದುವ ಅಭಿರುಚಿ ಬೆಳೆಸಿದವರು. ಸಮಾಜದಲ್ಲಿ ಬದಲಾಗುತ್ತಿರುವ ಮೌಲ್ಯಗಳನ್ನು ದಾಖಲಿಸಿದವರು. ಪರಕೀಯರ ಆಕ್ರಮಣ ಸ್ಥಿತಿಯಲ್ಲಿ ಸಿಲುಕಿದ ಸಂಪ್ರದಾಯಸ್ಥ ಕುಟುಂಬದ ಮಹಿಳೆ ಹೇಗೆ ಇದ್ದಳು ಎನ್ನುವುದನ್ನು ಕಣ್ಣಿಗೆ ಕಟ್ಟುವಂತೆ ಕಮಲ ಕುಮಾರಿ ಕಾದಂಬರಿಯಲ್ಲಿ ಗಳಗನಾಥರು ವಿವರಿಸಿದ್ದಾರೆ ಎಂದರು.
ಗಳಗನಾಥರ ಕಾದಂಬರಿಗಳಲ್ಲಿ ಸ್ವಂತಿಕೆ ಮತ್ತು ಸ್ವಾತಂತ್ರೃತೆ ಎದ್ದು ಕಾಣುತ್ತದೆ. ಕೇವಲ ಗಳಗನಾಥರನ್ನು ವೈಭವೀಕರಿಸುವುದರಿಂದ ಪ್ರಯೋಜನವಿಲ್ಲ. ಅವರ ಕೃತಿಗಳು ಹೆಚ್ಚು-ಹೆಚ್ಚು ಜನರಿಗೆ ತಲುಪಬೇಕು. ಓದುವ ಅಭಿರುಚಿ ಬೆಳೆಸಬೇಕು. ಈಗದು ಒಂದು ಸವಾಲಾಗಿದೆ ಎಂದರು. ಇಂತಹ ಉಪನ್ಯಾಸಗಳು ಹೆಚ್ಚು-ಹೆಚ್ಚು ಏರ್ಪಡಬೇಕು ಎಂದರು.
ಡಿಡಿಪಿಐ ಡಾ. ಗಿರೀಶ ಪದಕಿ ಮಾತನಾಡಿ, ಇಂದು ನಾವು ಏನು ಓದಬೇಕೋ ಅದನ್ನು ಓದುತ್ತಿಲ್ಲ. ಇಲೆಕ್ಟ್ರಾನಿಕ್ ಮಾಧ್ಯಮ ಹಾಗೂ ಮೊಬೈಲ್ ಸಂಸ್ಕೃತಿ ಬಂದ ನಂತರ ಓದುವ ಹವ್ಯಾಸ ಕಡಿಮೆಯಾಗಿದೆ. ಇದು ಸಮಾಜದ ಮೇಲೆ ದುಷ್ಪರಿಣಾಮ ಬೀರಿದ್ದು, ಸಮಾಜದಲ್ಲಿ ಮೌಲ್ಯಗಳು ಕಡಿಮೆಯಾಗಿವೆ ಎಂದು ವಿಷಾದಿಸಿದರು.
ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ದುಷ್ಯಂತ ನಾಡಗೌಡ ಮಾತನಾಡಿದರು. ಸಿದ್ದಲಿಂಗೇಶ ರಂಗಣ್ಣವರ, ಪ್ರಾಂಶುಪಾಲೆ ಸುನೀತಾ ಪಾಟೀಲ, ಉಮೇಶ ಬಳಿಗಾರ, ಶ್ರೀನಿವಾಸ ವಾಡಪ್ಪಿ, ಎಂ. ಜಿ. ಸಿಂದಗಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net