

ಗದಗ: ಮಕ್ಕಳ ಕಲಿಕಾ ಮಟ್ಟ ಹೆಚ್ಚಿಸಿ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ಆರಂಭಿಸಿರುವ ‘ಓದಿನ ಮನೆ‘ ವಿನೂತನ ಪ್ರಯೋಗಕ್ಕೆ ಜಿಲ್ಲೆಯಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಪ್ರಸಕ್ತ ಸಾಲಿನ ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದೆ.
ಮಾ. 27ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಲಿದೆ. ಇನ್ನೊಂದೆಡೆ ಕರೊನಾ ಮಹಾಮಾರಿ ವಕ್ಕರಿಸಿದ್ದರಿಂದ ವಿದ್ಯಾರ್ಥಿಗಳು, ಪಾಲಕರು ಹಾಗೂ ಶಿಕ್ಷಣ ಇಲಾಖೆ ಚಿಂತೆಗೀಡಾಗುವಂತೆ ಮಾಡಿದೆ.
‘ಓದಿನ ಮನೆ’ ಪ್ರಯೋಗ ಜಿಪಂ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ ಅವರ ಕನಸಿನ ಕೂಸು. ಮೂಲಸೌಕರ್ಯ ವಂಚಿತ ಮಕ್ಕಳಲ್ಲಿ (ಬಾಲಕರು) ಕಲಿಕೆಯ ಆಸಕ್ತಿ ಮತ್ತು ಕಲಿಕಾ ಮಟ್ಟವನ್ನು ಹೆಚ್ಚಿಸುವುದೇ ಓದಿನ ಮನೆಯ ಉದ್ದೇಶ. ಕಳೆದ ಡಿಸೆಂಬರ್ನಿಂದ ಮಾರ್ಚ್ ಮೊದಲ ವಾರದವರೆಗೂ ವ್ಯವಸ್ಥಿತವಾಗಿ ನಡೆಯಿತು. ಕರೊನಾ ಕಾಲಿಡುತ್ತಿದ್ದಂತೆ ಓದಿನ ಮನೆಗೆ ಬ್ರೇಕ್ ಬಿದ್ದಿದೆ. ಮಹತ್ವದ ಸಮಯದಲ್ಲಿ ಬಂದಿರುವ ಮಹಾಮಾರಿಯಿಂದಾಗಿ ಫಲಿತಾಂಶದ ಮೇಲೆ ಕೊಂಚ ಪರಿಣಾಮ ಬೀರಬಹುದು ಎನ್ನುತ್ತಿದ್ದಾರೆ ಶಿಕ್ಷಣ ಇಲಾಖೆ ಅಧಿಕಾರಿಗಳು.
172 ಶಾಲೆಯಲ್ಲಿ: ಜಿಲ್ಲೆಯಲ್ಲಿ ಸರ್ಕಾರಿ ಮತ್ತು ಖಾಸಗಿ ಸೇರಿ 286 ಪ್ರೌಢಶಾಲೆಗಳಿದ್ದು, 172 ಶಾಲೆಗಳಲ್ಲಿ ಓದಿನ ಮನೆ ನಡೆಸಲಾಯಿತು. ಓದಿನ ಮನೆಯಲ್ಲಿ (ಸರ್ಕಾರಿ ಶಾಲೆಯಲ್ಲಿ) ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಸಂಜೆ 6ರಿಂದ ರಾತ್ರಿ 9ರವರೆಗೆ ತರಗತಿ ನಡೆಸಲಾಯಿತು. ಮನೆಯಲ್ಲಿ ಓದಲು ಆಗದವರು ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಮಕ್ಕಳನ್ನು ಗುರುತಿಸಿ ಅವರಿಗೆ ಹೆಚ್ಚುವರಿ ಪಾಠ ಬೋಧನೆ ಮಾಡಲಾಯಿತು. ಇದರಿಂದ ಅನೇಕ ಮಕ್ಕಳು ಕಲಿಕೆಗೆ ಆಸಕ್ತಿ ತೋರಿಸಿದರು. ಅನೇಕ ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟ ವೃದ್ಧಿಸಿದ್ದು, ಈ ಸಲದ ಫಲಿತಾಂಶದಲ್ಲಿ ಗಮನಾರ್ಹ ಸುಧಾರಣೆ ಕಾಣಬಹುದು ಎಂಬ ನಂಬಿಕೆ ಮೂಡಿದೆ. ಜತೆಗೆ ಕರೊನಾ ಹೆಮ್ಮಾರಿಯ ನೆರಳು ಮಕ್ಕಳ ಮೇಲೆ ಬೀಳದಿರಲಿ ಎಂದು ಪಾಲಕರು ಬೇಡಿಕೊಳ್ಳುತ್ತಿದ್ದಾರೆ.
ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಕಡ್ಡಾಯವಿಲ್ಲ
ಪ್ರತಿ ಓದಿನ ಮನೆಯಲ್ಲಿ ಕನಿಷ್ಠ 15ರಿಂದ 25 ಮಕ್ಕಳು ಅಭ್ಯಾಸ ಮಾಡಿದ್ದು, ಜಿಲ್ಲಾದ್ಯಂತ 5ರಿಂದ 6 ಸಾವಿರ ಮಕ್ಕಳು ಪ್ರಯೋಜನ ಪಡೆದುಕೊಂಡಿದ್ದಾರೆ. ಓದಿನ ಮನೆಗೆ ಆಗಮಿಸಿ ಶಿಕ್ಷಕರು ಪಾಠ ಮಾಡಲೇಬೇಕು. ಮಕ್ಕಳು ಹಾಜರಾಗಲೇಬೇಕು ಎಂಬ ಕಡ್ಡಾಯವಿಲ್ಲ. ಮಕ್ಕಳಿಗೆ ಪಾಠ ಮಾಡಬೇಕೆಂಬ ತುಡಿತವುಳ್ಳ ಶಿಕ್ಷಕರಿಗೆ ಅವಕಾಶ ಕಲ್ಪಿಸಲಾಗಿತ್ತು. ಆಯಾ ಗ್ರಾಮದಲ್ಲಿರುವ ಶಿಕ್ಷಕರು ಯಾವುದೇ ಫಲಾಪೇಕ್ಷೆ ಇಲ್ಲದೆ ಮಕ್ಕಳಿಗೆ ಉಚಿತವಾಗಿ ಪಾಠ ಮಾಡಿದ್ದು ಗಮನಾರ್ಹ ಸಂಗತಿ. ಮಕ್ಕಳು ಬೆಳಗ್ಗೆ 10ರಿಂದ ಮಧ್ಯಾಹ್ನ 4.30ರ ವರೆಗೆ ಶಾಲೆಯಲ್ಲಿ ಕಲಿತು 4.30ಯಿಂದ 6 ಗಂಟೆವರೆಗೆ ವಿಶ್ರಾಂತಿ ನಂತರ ಓದಿನ ಮನೆಗೆ ಬರುತ್ತಿದ್ದರು.
ವಿದ್ಯಾರ್ಥಿಗಳಿಗೆ ಪ್ರೋತ್ಸಾಹ
ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಪ್ರತಿವರ್ಷ ಜಿಲ್ಲೆಯು 25ರ ನಂತರದ ಸ್ಥಾನ ಪಡೆದಿದ್ದೇ ಹೆಚ್ಚು. ಈ ಹಿನ್ನೆಲೆಯಲ್ಲಿ ಶೈಕ್ಷಣಿಕ ವಾತಾವರಣಕ್ಕೆ ಪ್ರೋತ್ಸಾಹ ನೀಡಬೇಕು, ಮುಖ್ಯವಾಗಿ ಬಾಲಕರಿಗೆ ಹೆಚ್ಚುವರಿ ಶಿಕ್ಷಣ ನೀಡಿದರೆ ಫಲ ಸಿಗಬಹುದು ಎಂಬ ನಿರೀಕ್ಷೆ ಇದೆ. ಎಲ್ಲರೂ ಉತ್ತಮ ಅಂಕ ಗಳಿಸಿ ಪಾಸಾಗುತ್ತಾರೆ ಎಂಬ ಭ್ರಮೆ ಇಲ್ಲ. ಫೇಲಾಗುವವರು ಪಾಸ್ಗೆ ಅಗತ್ಯವಿರುವ ಅಂಕ, ಜಸ್ಟ್ ಪಾಸ್ ಆಗುವವರು ಪ್ರಥಮ, ದ್ವಿತೀಯ ದರ್ಜೆಯಲ್ಲಿ ಪಾಸಾದರೂ ನೂತನ ಪ್ರಯೋಗ ಯಶ ಕಂಡಂತೆ ಎಂದು ಅಧಿಕಾರಿಗಳು ವಿವರಿಸುತ್ತಾರೆ.
ಕರೊನಾ ವೈರಸ್ ಹಾವಳಿ ಇರುವುದರಿಂದ ವಿದ್ಯಾರ್ಥಿಗಳು ಆರೋಗ್ಯದ ಕಡೆಗೆ ಗಮನ ಹರಿಸಬೇಕು. ಯಾವುದೇ ಕಾರಣಕ್ಕೂ ಗಾಳಿ ಸುದ್ದಿಗೆ ತಲೆಕೆಡಿಸಿಕೊಳ್ಳಬೇಡಿ. ಕಾರಣವಿಲ್ಲದೆ ಮನೆಯಿಂದ ಹೊರಗೆ ಸಂಚರಿಸುವುದು ಬೇಡ. ಪಾಲಕರು ಸಹ ಮಕ್ಕಳ ಆರೋಗ್ಯದ ಕಡೆಗೆ ಗಮನ ಹರಿಸಬೇಕು. ಕರೊನಾ ಬಗ್ಗೆ ಭಯಪಡುವುದು ಬೇಡ. ಓದಿನ ಮನೆ ಪ್ರಯೋಗದ ಮೂಲಕ ಸಾಕಷ್ಟು ಶ್ರಮವಹಿಸಿ ಮಕ್ಕಳನ್ನು ಪರೀಕ್ಷೆಗೆ ಅಣಿಗೊಳಿಸಲಾಗಿದ್ದು, ಉತ್ತಮ ಫಲಿತಾಂಶ ನಿರೀಕ್ಷೆಯಲ್ಲಿದ್ದೇವೆ. ಎನ್.ಎಚ್.ನಾಗೂರ, ಡಿಡಿಪಿಐ, ಗದಗ
ದೇಶದಲ್ಲಿಯೇ ಪ್ರಥಮವಾಗಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ‘ಓದಿನಮನೆ‘ ಎಂಬ ವಿನೂತನ ಯೋಜನೆಯನ್ನು ಗದಗ ಜಿಲ್ಲಾ ಪಂಚಾಯಿತಿಯಿಂದ ಕಳೆದ ಡಿಸೆಂಬರ್ನಿಂದಲೇ ಆರಂಭಿಸಲಾಗಿದೆ. ಮನೆಯಲ್ಲಿ ಅನಾನುಕೂಲ ಇರುವಂತಹ ಮಕ್ಕಳಿಗೆ ಈ ಯೋಜನೆ ತುಂಬಾ ಪ್ರಯೋಜನವಾಗಿದೆ. ಫಲಿತಾಂಶ ಸುಧಾರಣೆಗೂ ಯೋಜನೆ ಪೂರಕವಾಗಲಿದೆ. ಸಿದ್ಧಲಿಂಗೇಶ್ವರ ಪಾಟೀಲ, ಜಿಪಂ ಅಧ್ಯಕ್ಷ
EndFragment