

ಹಾಸನ: ವಿದ್ಯಾರ್ಥಿಗಳು ಓದಿನ ಜೊತೆಗೆ ಕ್ರೀಡೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡು ಉತ್ತಮವಾದ ಸಾಧನೆ ಮಾಡುವಂತೆ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ತಾಲೂಕು ಪಂಚಾಯಿತಿ ವ್ಯಾಪ್ತಿಯ ದುದ್ದ ಗ್ರಾಮ ಪಂಚಾಯಿತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಸರ್ಕಾರಿ ಪ್ರೌಡ ಶಾಲೆಯಲ್ಲಿ ಸುಸ್ಸಜಿತವಾಗಿ ನಿರ್ಮಾಣ ಮಾಡಿರುವ ಆಟದ ಮೈದಾನವನ್ನು ಉದ್ಘಾಟಿಸಿ ಮಾತನಾಡಿದ ಅವರು, ನರೇಗಾ ಯೋಜನೆಯಡಿ ಸರ್ಕಾರಿ ಪ್ರೌಡ ಶಾಲೆಯಲ್ಲಿ ಉತ್ತಮವಾದ ಆಟದಾ ಮೈದಾನ ನಿರ್ಮಾಣ ಮಾಡಿ ಪ್ರತ್ಯೇಕವಾಗಿ ವಾಲಿಬಾಲ್, ಬ್ಯಾಸ್ಕೆಟ್ ಬಾಲ್, ಕಬ್ಬಡಿ, ಖೋಖೋ, ರನ್ನಿಂಗ್ ಟ್ರಾಕ್ ಗಳನ್ನೂ ನಿರ್ಮಿಸಿದ್ದು ಪ್ರತಿಯೊಬ್ಬ ವಿದ್ಯಾರ್ಥಿಗಳು ಇದರ ಸದುಪಯೋಗ ಪಡಿಸಿಕೊಳ್ಳುವ ಮೂಲಕ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುವಂತೆ ಮಕ್ಕಳಿಗೆ ತಿಳಿಸಿದರು.
ಕ್ರೀಡೆಯಿಂದ ಮನಸ್ಸಿಗೆ ಉತ್ತಮವಾದ ಉಲ್ಲಾಸ, ಮನರಂಜನೆ ಲಭಿಸುವ ಜೊತೆಗೆ ಒತ್ತಡ ನಿವಾರಣೆ ಮಾಡಿಕೊಳ್ಳಲು ಸಹಕಾರಿಯಾಗುತ್ತದೆ. ನರೇಗಾ ಯೋಜನೆಯಡಿ ಇನ್ನೂ ಹೆಚ್ಚಿನ ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಅಲ್ಲಿ ಮಕ್ಕಳಿಗೆ ಅವಶ್ಯಕವಿರುವ ಆಟದಾ ಮೈದಾನವನ್ನು ನಿರ್ಮಿಸಿ ಎಂದರಲ್ಲದೆ ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವ ಬೆಳೆಸಲು ಉತ್ತೇಜಿನ ನೀಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಎಚ್.ಡಿ ಗಿರೀಶ್ ಅವರು ಮಾತನಾಡಿ, ಉದ್ಯೋಗ ಖಾತರಿ ಯೋಜನೆಯಡಿ ದುದ್ದ ಗ್ರಾಮ ಪಂಚಾಯಿತಿಯ ಸರ್ಕಾರಿ ಪ್ರೌಡ ಶಾಲೆಯಲ್ಲಿ ಸುಮಾರು 21 ಲಕ್ಷದ 21 ಸಾವಿರ ರೂಪಾಯಿ ವೆಚ್ಚದಲ್ಲಿ ಸುಸ್ಸಜಿತ ಆಟದಾ ಮೈದಾನ ನಿರ್ಮಿಸಿದ್ದು ಇದೆ ಮಾದರಿಯಲ್ಲಿ ತಾಲ್ಲೂಕಿನ ಇತರೆ ಗ್ರಾಮ ಪಂಚಾಯಿತಿಗಳಲ್ಲಿಯೂ ನಿರ್ಮಿಸಲಾಗುತ್ತಿದೆ ಎಂದು ಅವರು ಹೇಳಿದರು.
ವಿದ್ಯಾರ್ಥಿಗಳು ಒಟ್ಟಾರೆ ಪಾಠದ ಜೊತೆಗೆ ಆಟದಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡುವಂತೆ ಪ್ರೋತ್ಸಾಹಿಸಲಾಗುತ್ತಿದೆ ಎಂದು ಅವರು ಹೇಳಿದರು.
ಇದೆ ವೇಳೆ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕಸಿ.ಬಿ ದಿನೇಶ್, ಡಿ.ಸಿ.ಸಿ ಬ್ಯಾಂಕ್‌ನ ಅಧ್ಯಕ್ಷ ನಾಗರಾಜು, ಜಿಲ್ಲಾ ಪಂಚಾಯಿತ್ ಮಾಜಿ ಉಪಾಧ್ಯಕ್ಷ ಲಕ್ಷಣಗೌಡ, ದುದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನಮ್ಮ, ಉಪಾಧ್ಯಕ್ಷೆ ಭಾಗ್ಯಮ್ಮ, ದುದ್ದ ಗ್ರಾಮ ಪಂಚಾಯಿತಿ ಗಳು, ದುದ್ದ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಮಂಜುನಾಥ್, ಸದಸ್ಯರು ಪ್ರೌಡ ಶಾಲಾ ಮುಖ್ಯೋಪಾದ್ಯಾಯ ನಿಂಗಮ್ಮ ಹಾಗೂ ಮತ್ತಿತರರು ಇದ್ದರು.