ಓದಿಗೆ ಕ್ರೀಡೆಯಲ್ಲೂ ಪಾಲ್ಗೊಳ್ಳಿ:ತಾ.ಪಂ.ಇಒ ಗಿರೀಶ್ ಸಲಹೆ

ಓದಿಗೆ ಕ್ರೀಡೆಯಲ್ಲೂ ಪಾಲ್ಗೊಳ್ಳಿ:ತಾ.ಪಂ.ಇಒ ಗಿರೀಶ್ ಸಲಹೆ
Published on

ಹಾಸನ: ಮಕ್ಕಳು ಶಾಲೆಯಲ್ಲಿ ಓದುವುದರ ಜತೆಗೆ ಸ್ವತಂತ್ರವಾಗಿ ಇಂತಹ ಕ್ರೀಡೆಯಲ್ಲಿ ಭಾಗವಹಿಸಿದರೆ ಶೈಕ್ಷಣಿಕವಾಗಿಯೂ ಸಹಕಾರಿ ಆಗಲಿದೆ ಎಂದು ತಾಲೂಕು ಪಂಚಾಯಿತಿ ಇಒ ಗಿರೀಶ್ ತಿಳಿಸಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ಮಕ್ಕಳು ಅಂಕ ಗಳಿಗಾಗಿ ಪಸೇರ್ಂಟೆಜ್‌ಗೆ ಮಾತ್ರ ಸೀಮಿತವಾಗುತ್ತಿದ್ದಾರೆ. ನಾವು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾಗ ಬೆಳಿಗ್ಗೆ ಮತ್ತು ಮಧ್ಯಾಹ್ನ ಒಂದು ತರಗತಿ ಆಟೋಟಕ್ಕಾಗಿಯೇ ಮೀಸಲಿಡಲಾಗಿತ್ತು. ಓದುವುದರ ಜತೆಗೆ ಕ್ರೀಡೆಗಳಲ್ಲೂ ಭಾಗವಹಿಸುತ್ತಿದ್ದೇವು. ನಾವು ಓದಿಗೆ ಕ್ರೀಡೆಯೂ ಕೂಡ ಒಂದು ರೀತಿ ಸಹಕಾರಿಯಾಗುತ್ತಿತ್ತು. ಆರೋಗ್ಯಕರವಾಗಿ ಸ್ಪರ್ಧೆಯಲ್ಲಿ ಪಾಲ್ಗೊಂಡು ಯಶಸ್ವಿಯಾಗಿ ಎಂದು ಶುಭ ಹಾರೈಸಿದರು.
ಹಾಸನ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ಮಾತನಾಡಿ, ನಾಳೆಯಿಂದ ಪ್ರೌಢಶಾಲೆಯ ಪರೀಕ್ಷೆ ಆರಂಭವಾಗುತ್ತಿವೆ. ಆದರೂ ಕೂಡ ಉತ್ಸಾಹದಿಂದ ಮಕ್ಕಳು ಕ್ರೀಡೆಯಲ್ಲಿ ಭಾಗವಹಿಸಿರುವುದು ಸಂತೋಷವಾಗಿದೆ. ಕ್ರೀಡೆ ಎಂದರೆ ಮಕ್ಕಳಿಗೆ ಹೆಚ್ಚು ಆಸಕ್ತಿ ಇರುತ್ತದೆ. ಆದರೆ ಒಂದೊಂದು ಬಾರಿ ಯಾವ ತೀರ್ಮಾನ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಗೊಂದಲ ಇರುತ್ತದೆ. ಈಗಿನ ಮಕ್ಕಳು ಓದುವುದು, ಅದನ್ನ ಬಿಟ್ಟರೆ ಮೊಬೈಲ್ ರೀಲ್ಸ್‌ನಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಾರೆ ಎಂದು ಬೇಸರವ್ಯಕ್ತಪಡಿಸಿದರು.
ಮೊಬೈಲ್ ಮತ್ತು ರೀಲ್ಸ್ ಬಿಟ್ಟು ಅದೆ ಸಮಯದಲ್ಲಿ ಆಟವಾಡಿದರೇ ನಿಮ್ಮ ಮೈ-ಮನ ಉಲ್ಲಾಸಗೊಳ್ಳುತ್ತದೆ. ಮೊಬೈಲ್ ಗೀಳನ್ನು ಕಡಿಮೆ ಮಾಡಿ ಯಾವುದದಾದರೂ ಆರೋಗ್ಯಕರವಾಗಿರುವ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಉತ್ತಮ. ಈ ತಾಲೂಕು ಮಟ್ಟದ ಕ್ರೀಡೆಯಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟದಲ್ಲಿ ಪಾಲ್ಗೊಂಡು ಅಲ್ಲಿಂದ ಮೈಸೂರಿನಲ್ಲಿ ನಡೆಯುವ ದಸರಾ ಕ್ರೀಡೆಯಲ್ಲಿ ಭಾಗವಹಿಸಿ ನಮ್ಮ ಜಿಲ್ಲೆಗೆ ಒಳ್ಳೆಯ ಹೆಸರು ತನ್ನಿ ಎಂದು ಶುಭ ಹಾರೈಸಿದರು.
ಇದೆ ವೇಳೆ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ವೇದಣ್ಣ, ಜಿಲ್ಲಾ ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷ ಚಕ್ರಪಾಣಿ, ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ದಿನೇಶ್, ಸಿ.ಕೆ. ರಘು, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಬಿ.ಟಿ. ಮಾನವ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net