

ವಿಜಯವಾಣಿ ಸುದ್ದಿಜಾಲ ಧಾರವಾಡ
ಹಿರಿಯರು, ಕಿರಿಯರು ಎನ್ನದೆ ನೂರಾರು ಜನರು ಸುರಿಯುವ ಮಳೆಯನ್ನೂ ಲೆಕ್ಕಿಸದೆ ಕಿಲೋಮೀಟರ್ ಗಟ್ಟಲೆ ಓಟ ನಡೆಸಿ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದು ವಿಶೇಷವಾಗಿತ್ತು.
ಇದು ಕಾರ್ಗಿಲ್ ವಿಜಯ ದಿವಸ ಪ್ರಯುಕ್ತ ನಗರದ ಮೈ ದೇಶ್ ಪ್ರತಿಷ್ಠಾನ ವತಿಯಿಂದ ಭಾನುವಾರ ನಗರದಲ್ಲಿ ಆಯೋಜಿಸಿದ್ದ ಸೈನಿಕರಿಗಾಗಿ 2ಕೆ ರನ್‌ನಲ್ಲಿ ಕಂಡು ಬಂದ ದೃಶ್ಯವಿದು. ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ಮಾಧ್ಯಮ ಸಹಯೋಗದಲ್ಲಿ ಏರ್ಪಡಿಸಿದ್ದ 2ಕೆ ರನ್‌ನಲ್ಲಿ ನಿರೀಕ್ಷೆಗೂ ಮೀರಿ ಪಾಲ್ಗೊಂಡಿದ್ದ ಜನರು ದೇಶಾಭಿಮಾನ ಮೆರೆದು ಕಾರ್ಯಕ್ರಮ ಯಶಸ್ವಿಗೊಳಿಸಿದರು.
ನಗರದ ಕೆಸಿಡಿ ಕಾಲೇಜು ವೃತ್ತದಿಂದ ಆರಂಭವಾದ ರನ್‌ಗೆ ಕೆಯುಐಡಿಎಫ್‌ಸಿ ಕಾರ್ಯನಿರ್ವಾಹಕ ನಿರ್ದೇಶಕ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಹಾಗೂ ರಣಜಿ ಕ್ರಿಕೆಟ್ ಮಾಜಿ ಆಟಗಾರ ಸೋಮಶೇಖರ ಶಿರಗುಪ್ಪಿ ಬಲೂನ್ ಹಾರಿಬಿಡುವ ಮೂಲಕ ಚಾಲನೆ ನೀಡಿದರು.
ಬಳಿಕ ಭಾರತೀಯ ಸೈನ್ಯ ಹಾಗೂ ದೇಶಾಭಿಮಾನದ ಪರ ಘೋಷಣೆಗಳನ್ನು ಹಾಕುತ್ತಲೇ ಜ್ಯುಬಿಲಿ ವೃತ್ತ, ಕೋರ್ಟ್ ವೃತ್ತ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಯಿಂದ ಕಾರ್ಗಿಲ್ ಸ್ತೂಪ ತಲುಪಿದರು. ರನ್ ಆರಂಭವಾದ ಕೆಲ ಹೊತ್ತಿನಲ್ಲೇ ರಭಸವಾಗಿ ಸುರಿದ ಮಳೆಯನ್ನೂ ಲೆಕ್ಕಿಸದ ಜನರು ಕಾರ್ಗಿಲ್ ಸ್ತೂಪವರೆಗೂ ಓಡಿದರು.
ಇದಕ್ಕೂ ಪೂರ್ವ ನಡೆದ ವೇದಿಕೆ ಸಮಾರಂಭದಲ್ಲಿ ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡಿದ್ದ ಯೋಧರಾದ ಭೀಮಪ್ಪ ಜಾಧವ, ವೀರೇಶ ಹಸಬಿ, ಸುರೆಸಹ ತೇಗೂರ, ನಿಂಗಪ್ಪ ಹೂಗಾರ ಹಾಗೂ ಪರಶುರಾಮ ಕ್ಯಾತಪ್ಪನವರ ಅವರಿಗೆ ಸನ್ಮಾನಿಸಲಾಯಿತು.
2ಕೆ ರನ್‌ಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಗ್ರಾಮ ವಿಕಾಸ ಸಂಸ್ಥೆ, ಸಾಯಿರಾಮ ಡೆವಲಪರ್ಸ್ ಆ್ಯಂಡ್ ಬಿಲ್ಡರ್ಸ್, ಎಚ್‌ಸಿಜಿ ಎನ್‌ಎಂಆರ್ ಕ್ಯಾನ್ಸರ್ ಸೆಂಟರ್ ಹುಬ್ಬಳ್ಳಿ, ಟ್ರು ಮಿಶ್ರಾ, ಆಶಾಕಿರಣ ಫೌಂಡೇಷನ್, ಭಾರತ ಬುಕ್ ಡಿಪೋ ಹಾಗೂ ಫ್ಯಾಟ್ ಬಾಯ್ ಕಮಿಟಿ ಸೇರಿ ಇತರ ಸಂಸ್ಥೆಗಳ ಸಹಕಾರ ನೀಡಿದವು.
ವಿಜಯವಾಣಿ ದಿನಪತ್ರಿಕೆ ಸ್ಥಾನಿಕ ಸಂಪಾದಕ ಪ್ರಕಾಶ ಶೇಟ್, ಎಚ್‌ಸಿಜಿ ಎನ್‌ಎಂಆರ್ ಕ್ಯಾನ್ಸರ್ ಸೆಂಟರ್‌ನ ಡಾ. ಅಬ್ದುಲ್, ಗ್ರಾಮ ವಿಕಾಸ ಸಂಸ್ಥೆಯ ಜಗದೀಶ ನಾಯ್ಕ, ಆಶಾಕಿರಣ ಫೌಂಡೇಷನ್‌ನ ಅಜಯ ಜೋಶಿ, ಸಾಯಿರಾಮ ಡೆವಲಪರ್ಸ್ ಆ್ಯಂಡ್ ಬಿಲ್ಡರ್ಸ್‌ನ ಮಂಜುನಾಥ ಮಕ್ಕಲಗೇರಿ, ವಸಂತ ಮುರ್ಡೇಶ್ವರ, ಕರ್ನಾಟಕ ಸೈನಿಕರ ಕಲ್ಯಾಣ ಸಮಿತಿ ಅಧ್ಯಕ್ಷ ಚಂದ್ರಶೇಖರ ಅಮಿನಗಡ, ಮೈ ದೇಶ್ ಪ್ರತಿಷ್ಠಾನದ ಗುರುದತ್ತ ದೇಶಪಾಂಡೆ, ವಿಷ್ಣು ಹುಕ್ಕೇರಿ, ಶ್ರೀನಿಧಿ ಹುಯಿಲಗೋಳ, ಲೋಕೇಶ ಪಾಟೀಲ, ಪದಾಧಿಕಾರಿಗಳು, ಮಾಜಿ ಹಾಗೂ ಹಾಲಿ ಯೋಧರು, ಇತರರು ಇದ್ದರು.
ಕಾರ್ಗಿಲ್ ಯುದ್ಧದಿಂದಲೇ ಸ್ಫೂರ್ತಿ ಪಡೆದು ಸೈನ್ಯ ಸೇರಿದೆ. ಕಾರ್ಗಿಲ್ ಯುದ್ಧ ನಡೆದ ಜಾಗದಲ್ಲೇ ಪ್ರಥಮ ನಿಯೋಜನೆ ಮಾಡಲಾಗಿತ್ತು. ಕಾರ್ಗಿಲ್ ಯುದ್ಧದಲ್ಲಿ ಭಾರತದ 527 ಸೈನಿಕರು ವೀರ ಮರಣವನ್ನಪ್ಪಿದರು. ಸೈನಿಕರ ತ್ಯಾಗ, ಬಲಿದಾನ ಸ್ಮರಿಸಬೇಕು. ಯುವಕರು ಸೈನ್ಯ ಸೇರುವ ಮೂಲಕ ದೇಶ ಸೇವೆ ಮಾಡಬೇಕು. ದೇಶ ಸೇವೆ ಮಾಡಲು ಎಲ್ಲರೂ ಸೈನಿಕರಾಗಬೇಕಿಲ್ಲ. ಎಲ್ಲೇ ಇದ್ದರೂ ಪ್ರಾಮಾಣಿಕತೆ, ನೈತಿಕತೆಯಿಂದ ನಮ್ಮ ಕೆಲಸ ಮಾಡಿ ಒಳ್ಳೆ ಪ್ರಜೆಯಾಗಿ ಜೀವನ ಸಾಗಿಸಬೇಕು.* ಮೇಜರ್ ಸಿದ್ದಲಿಂಗಯ್ಯ ಹಿರೇಮಠ