

ಧಾರವಾಡ: ಮಕ್ಕಳ ಕೈಯಲ್ಲೊಂದು ಪಿಚಕಾರಿ.. ಯುವಕರ ಬಾಯಲ್ಲಿ ತುತ್ತೂರಿ.. ಒಬ್ಬರಿಗೊಬ್ಬರು ಗೊತ್ತು ಸಿಗಲಾರದಷ್ಟು ಮುಖಕ್ಕೆ ಮೆತ್ತಿಕೊಂಡ ಬಣ್ಣದ ರಂಗು. ಈ ಮಧ್ಯೆ ಹಲಗೆ- ತಮಟೆ ಸದ್ದು... ಒಟ್ಟಾರೆ ವಿದ್ಯಾನಗರಿ ಧಾರವಾಡ ಸೋಮವಾರ ಕಲರ್ ಫುಲ್ ಆಗಿತ್ತು.
ಬೆಳಗ್ಗೆ ಕಾಮದಹನ ಮಾಡಿದ ಜನರು ಬೊಬ್ಬೆ ಹಾಕುತ್ತ ತಮ್ಮ ಮನೆ, ಬಡಾವಣೆಗಳಿಂದಲೇ ಬಣ್ಣದೋಕುಳಿ ಆರಂಭಿಸಿದರು. ಬಗೆ ಬಗೆ ಬಣ್ಣಗಳನ್ನು ಹಿಡಿದುಕೊಂಡ ಮಕ್ಕಳಿಂದ ಶುರುವಾದ ರಂಗಿನಾಟ ಹಿರಿಯರಾದಿಯಾಗಿ ಎಲ್ಲರನ್ನೂ ಸಂಭ್ರಮದಲ್ಲಿ ತೇಲಿಸಿತು. ಕರೊನಾ 2ನೇ ಅಲೆ ಅಬ್ಬರದ ನಡುವೆಯೂ ಯುವಕರು ಹೋಳಿ ಆಚರಣೆಯಲ್ಲಿ ತೊಡಗಿದ್ದರು. ಆದರೆ, ಮಹಿಳೆಯರು, ಮಕ್ಕಳು ಮಾತ್ರ ಮನೆ ಎದುರಿಗೆ ಬಣ್ಣದಾಟದಲ್ಲಿ ನಿರತರಾಗಿದ್ದರು.
ಕರೊನಾ ಹಾವಳಿ ಹಿನ್ನೆಲೆಯಲ್ಲಿ ಡಿಜೆ, ರೇನ್ ಡ್ಯಾನ್ಸ್, ಗಡಿಗೆ ಒಡೆಯುವ ಸ್ಪರ್ಧೆಗೆ ಅನುಮತಿ ಇಲ್ಲದ ಕಾರಣಕ್ಕೆ ಜನರಲ್ಲಿ ಕೊಂಚ ನಿರಾಸೆ ಮೂಡಿತ್ತು. ಇನ್ನು ವಿವಿಧ ಬಡಾವಣೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜನೆಗೊಂಡಿದ್ದ ಪೊಲೀಸರು, ಯುವಕರಿಗೆ ಹೋಳಿ ಮುಗಿಸುವಂತೆ ಎಚ್ಚರಿಕೆ ಸಂದೇಶ ಸಹ ನೀಡುತ್ತಿದ್ದರು. ಇದು ಕೆಲವರಿಗೆ ಕಿರಿಕಿರಿ ಎನಿಸಿದ ಕಾರಣಕ್ಕೆ ಪೊಲೀಸರೊಂದಿಗೆ ವಾಗ್ವಾದ ಸಹ ನಡೆಸಿದ್ದರು.
ಓಣಿ ಜನರಿಗೆ ಹೋಳಿ ಸೀಮಿತ
ಹುಬ್ಬಳ್ಳಿ: ನಗರದ ವಿವಿಧೆಡೆ ಸೋಮವಾರ ಹೋಳಿ ಹಬ್ಬವನ್ನು ಆಚರಿಸಲಾಯಿತು. ಮಹಾನಗರ ಪಾಲಿಕೆ ವ್ಯಾಪ್ತಿಯ ಬಹುತೇಕ ಗ್ರಾಮಗಳಲ್ಲಿ ಹಾಗೂ ನಗರದ ಕೆಲ ಭಾಗಗಳಲ್ಲಿ ಭಾನುವಾರ ಬೆಳಗ್ಗೆ ಕಾಮಣ್ಣನ ಮೂರ್ತಿ ಪ್ರತಿಷ್ಠಾಪನೆಯಿಂದ ಆರಂಭವಾದ ಹಬ್ಬದಾಚರಣೆಯು ಸೋಮವಾರ ಓಕುಳಿ ಆಟದೊಂದಿಗೆ ಮುಕ್ತಾಯವಾಯಿತು. ಆದರೆ, ಈ ಬಾರಿ ಕರೊನಾ ಮಹಾಮಾರಿ ರಂಗಿನಾಟದ ಸಂಭ್ರಮ, ಸಡಗರವನ್ನು ಕಸಿದುಕೊಂಡಿತು.
ನಗರದ ಹಲವೆಡೆ ಕಾಮ- ರತಿ ಮೂರ್ತಿ ಪ್ರತಿಷ್ಠಾಪಿಸಿ ಭಕ್ತಿಯಿಂದ ಪೂಜೆ ಸಲ್ಲಿಸಲಾಯಿತು. ಗ್ರಾಮೀಣ ಪ್ರದೇಶಗಳಲ್ಲಿ ಕಾಮಣ್ಣನ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸಿದರು. ಹುಗ್ಗಿ, ಹೋಳಿಗೆ, ಭಜಿ, ಸಂಡಿಗೆ ಮುಂತಾದ ಭಕ್ಷ್ಯಗಳನ್ನು ಮಾಡಿ ಕಾಮ- ರತಿಯರಿಗೆ ನೈವೇದ್ಯ ಸಮರ್ಪಿಸಿದ ಜನರು ಇಷ್ಟಾರ್ಥ ಪೂರೈಕೆಗೆ ಕಾಮದೇವನಿಗೆ ನಮಿಸಿದರು.
ಭಾನುವಾರ ಬೆಳಗ್ಗೆ ಪ್ರತಿಷ್ಠಾಪಿಸಿದ್ದ ಕಾಮಣ್ಣನ ಮೂರ್ತಿಗಳನ್ನು ಸೋಮವಾರ ಬೆಳಗ್ಗೆ ದಹನ ಮಾಡಲಾಯಿತು. ನಂತರ ಗ್ರಾಮಗಳಲ್ಲಿ ಓಕುಳಿಯಾಟ ಶುರುವಾಯಿತು.
ಗ್ರಾಮೀಣ ಭಾಗದಲ್ಲಿ ಮಕ್ಕಳು ಹೆಚ್ಚು ಸಂಭ್ರಮದಿಂದ ಓಕುಳಿಯಾಟದಲ್ಲಿ ತೊಡಗಿದರು. ಕರೊನಾ ಭೀತಿ ಹಿನ್ನೆಲೆಯಲ್ಲಿ ಓಕುಳಿಯಾಟದಲ್ಲಿ ದೊಡ್ಡವರು ಹೆಚ್ಚಾಗಿ ಕಂಡು ಬರಲಿಲ್ಲ. ಇನ್ನು ನಗರದ ಹಳೇಹುಬ್ಬಳ್ಳಿ ವಿದ್ಯಾನಗರ, ಉಣಕಲ್ಲ, ಸಾಯಿನಗರ ಗಾಮನಗಟ್ಟಿ ಇತರೆಡೆ ಸೋಮವಾರ ಹೋಳಿ ಆಡಲಾಯಿತು. ಕೆಲ ಗ್ರಾಮಗಳಲ್ಲಿ ಹಿರಿಯರು ಹೋಳಿ ಪದಗಳನ್ನು ಹಾಡುವ ಮೂಲಕ ಪರಂಪರೆ ಬಿಂಬಿಸಿದರು.
ಅಮರಗೋಳದ ಕಾಮನಬೂದಿ ಸರ್ಕಲ್ನಲ್ಲಿ ಪ್ರತಿಷ್ಠಾಪಿಸಿದ್ದ ಕಾಮಣ್ಣನ ಮೂರ್ತಿಗೆ ಗದಗಯ್ಯ ಹಿರೇಮಠ ಪೂಜೆ ಸಲ್ಲಿಸಿದರು.
ಹಿರಿಯರಾದ ಶಿವಪ್ಪ ಇದ್ಲಿ, ಪಾಲಿಕೆ ಮಾಜಿ ಸದಸ್ಯ ಮಲ್ಲಿಕಾರ್ಜುನ ಹೊರಕೇರಿ, ಮಲ್ಲೇಶ ಇದ್ಲಿ, ಕರಬಸು ಬೆಟಗೇರಿ, ಪ್ರಭುಗೌಡ ಪಾಟೀಲ, ಭೂಪಾಲ
ದೇವಕ್ಕಿ, ಮಂಜುನಾಥ ಡೊಂಕನವರ, ಬಸಯ್ಯ ಕರ್ಲವಾಡ, ಸಂತೋಷ ಮನಗುಂಡಿ ಇತರರು ಪಾಲ್ಗೊಂಡಿದ್ದರು.
ದೇವನೂರ ಗ್ರಾಮದಲ್ಲಿ ಆಚರಣೆ
ಕುಂದಗೋಳ: ತಾಲೂಕಿನ ದೇವನೂರ ಗ್ರಾಮದಲ್ಲಿ ಗುರು ಹಿರಿಯರು, ಯುವಕರು, ಮಾಜಿ ಸೈನಿಕರು ಸೇರಿ ಕರೊನಾ ನಿಯಮಾವಳಿಗಳ ಪರಿಮಿತಿಯಲ್ಲಿ ಸೋಮವಾರ ಹೋಳಿ ಹಬ್ಬ ಆಚರಿಸಿದರು.
ಜಗ್ಗಲಗಿ ಬಾರಿಸಿ ಸಂಭ್ರಮಿಸಿದರು!
ನವಲಗುಂದ: ಐತಿಹಾಸಿಕ ಪ್ರಸಿದ್ಧ ರಾಮಲಿಂಗ ಕಾಮಣ್ಣನನ್ನು ಕರೊನಾ ಹಿನ್ನೆಲೆಯಲ್ಲಿ ಪ್ರತಿಷ್ಠಾಪಿಸದೆ ಇದ್ದರೂ, ಉಳಿದ ಓಣಿಗಳಲ್ಲಿ ಸಮಿತಿಯ ಪದಾಧಿಕಾರಿಗಳು ರತಿ-ಕಾಮರನ್ನು ಪ್ರತಿಷ್ಠಾಪಿಸಿದ್ದರು. ಸೋಮವಾರ ಬಣ್ಣದೋಕುಳಿಯಂದು ಗಲ್ಲಿ, ಗಲ್ಲಿಗಳಲ್ಲಿ ಯುವಕ ಸಂಘದವರು, ನಾಗರಿಕರು, ಜಗ್ಗಲಗಿ ಬಾರಿಸುತ್ತ ಅದ್ದೂರಿಯಾಗಿ ಹೋಳಿ ಆಚರಿಸಿದರು.
ಪಟ್ಟಣದ ಗಲ್ಲಿಗಲ್ಲಿಗಳಲ್ಲಿ ಯುವಕರು ಬೈಕ್ ಮೇಲೆ ಓಡಾಡುತ್ತಾ ಕೇಕೇ ಹಾಕಿ ಸಿಳ್ಳೆ ಹೊಡೆದು ಪರಸ್ಪರ ಮುಖಕ್ಕೆ ಬಣ್ಣ ಎರಚಿ ಹೋಳಿ ಹಬ್ಬ ಆಚರಿಸಿದರು. ರಾಮಲಿಂಗ ಕಾಮಣ್ಣ ಪ್ರತಿಷ್ಠಾಪಿಸಲು ಈ ವರ್ಷ ಕರೊನಾ ಹಿನ್ನಡೆಯಾಗಿದ್ದು, ಸ್ಥಳೀಯ ನಾಗರಿಕರಲ್ಲಿ ಅಸಮಾಧಾನ ಉಂಟು ಮಾಡಿತ್ತು. ಅದರೂ, ಸಹ ರಾಮಲಿಂಗ ಕಾಮಣ್ಣನ ದೇವಸ್ಥಾನದ ಎದುರು ಟ್ರಸ್ಟ್ ಕಮಿಟಿಯವರು ರಾಮಲಿಂಗ ಕಾಮಣ್ಣನ ಭಾವಚಿತ್ರದ ಬ್ಯಾನರ್ ಹಾಕಿದ್ದರು.
ಬೇರೆ, ಬೇರೆ ಜಿಲ್ಲೆಗಳಿಂದ ಆಗಮಿಸಿದ ಭಕ್ತರು ರಾಮಲಿಂಗ ಕಾಮಣ್ಣ ದರ್ಶನ ಪಡೆಯಲು ಬಂದಿದ್ದು, ನಿರಾಸೆಯಿಂದ ಮರಳುತ್ತಿದ್ದ ದೃಶ್ಯ ಕಂಡು ಬಂತು. ಕೆಲವು ವೇಳೆ ಪೊಲೀಸರು ಭಕ್ತರನ್ನು ಚದುರಿಸಿ ವಾಪಸ್ ಕಳುಹಿಸಲು ಹರಸಾಹಸಪಟ್ಟರು. ಲಾಠಿ ಚಾರ್ಚ್ ಮಾಡಿ ಗಂಭೀರವಾಗಿ ಜಿಲ್ಲಾಧಿಕಾರಿಗಳ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಿದರು. ಕರೊನಾ ಮುಂಜಾಗ್ರತೆಗಾಗಿ ಪೊಲೀಸ್ ಅಧಿಕಾರಿಗಳೂ ಪಟ್ಟಣದ ತುಂಬೆಲ್ಲ ಗಸ್ತು ತಿರುಗಿ ಯುವಕರನ್ನು ಚದುರಿಸಿದರು. ಮನೆ ಮುಂದೆ ಮಹಿಳೆಯರು, ಮಕ್ಕಳು ಬಣ್ಣದೋಕುಳಿ ಆಡಿ ಹಬ್ಬಕ್ಕೆ ಮೆರಗು ನೀಡಿದರು.
ಗುಂಪು ಘರ್ಷಣೆ ತಪ್ಪಿಸಿದ ಪೊಲೀಸರು
ಹುಬ್ಬಳ್ಳಿ: ತಾಲೂಕಿನ ಬ್ಯಾಹಟ್ಟಿ ಗ್ರಾಮದಲ್ಲಿ ಹೋಳಿ ಆಚರಣೆ ವೇಳೆ ಉಂಟಾಗಿದ್ದ ಗಲಾಟೆ ವೇಳೆ ಮಧ್ಯ ಪ್ರವೇಶಿಸಿದ ಗ್ರಾಮೀಣ ಠಾಣೆ ಪೊಲೀಸರು ಗುಂಪು ಘರ್ಷಣೆ ತಪ್ಪಿಸಿದ್ದಾರೆ. ಹೋಳಿ ಬಣ್ಣದಾಟದ ನೃತ್ಯದ ವೇಳೆ ಎರಡು ಗುಂಪುಗಳ ನಡುವೆ ಜಗಳ ಏರ್ಪಟ್ಟಿತ್ತು. ಹಳೇ ದ್ವೇಷದ ಹಿನ್ನೆಲೆಯಲ್ಲಿ ಜಗಳ ವಿಕೋಪಕ್ಕೆ ತಿರುಗಿದ್ದರಿಂದ ಗ್ರಾಮದಲ್ಲಿ ಕೆಲಕಾಲ ಉದ್ವಿಘ್ನ ವಾತಾವರಣ ಉಂಟಾಗಿತ್ತು. ಈ ವೇಳೆ ಮಧ್ಯ ಪ್ರವೇಶಿಸಿದ ಪೊಲೀಸರು ಕೆಲವರಿಗೆ ಲಾಠಿ ರುಚಿ ತೋರಿಸಿದ್ದಾರೆ. ನಂತರ ಇನ್ಸ್ಪೆಕ್ಟರ್ ರಮೇಶ ಗೋಕಾಕ ಸ್ಥಳಕ್ಕೆ ತೆರಳಿ ಕಾನೂನು ಮೀರದಂತೆ ಎಚ್ಚರಿಕೆ ನೀಡಿದ ಬಳಿಕ ಪರಿಸ್ಥಿತಿ ತಿಳಿಗೊಂಡಿದೆ. ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
EndFragment