

ಚಿಕ್ಕಮಗಳೂರು: ಹಾಡು ಮತ್ತು ಮಾತು ಜೊತೆಯಾಗಿ ಬರುವ ವಾಗ್ಗೀತೆಗಳು ವಿಭಿನ್ನ ಅನುಭವ ಕೊಡುತ್ತವೆ. ಈ ದಿಸೆಯಲ್ಲಿ ಓಂಕಾರೇಶ್ವರ ಗಣಪತಿ ಭಕ್ತಿ ವಾಗ್ಗೀತೆಯು ನಿಜಕ್ಕೂ ಅಭಿನಂದನೀಯ ಎಂದು ಚಿಕ್ಕಮಗಳೂರು ಬ್ರಾಹ್ಮಣ ಮಹಾಸಭಾದ ನಿರ್ದೇಶಕಿ ಎಸ್.ಶಾಂತಕುಮಾರಿ ತಿಳಿಸಿದರು.
ನಗರದ ಶ್ರೀ ಓಂಕಾರೇಶ್ವರ ಗಣಪತಿ ಸನ್ನಿಧಾನದಲ್ಲಿ ಇತ್ತೀಚೆಗೆ ನಡೆದ ಕಲ್ಕಟ್ಟೆ ಗಾನ ದೀವಿಗೆ ಸರಣಿಯಲ್ಲಿ ಮೂಡಿ ಬಂದ ನಾಗರಾಜರಾವ್ ಕಲ್ಕಟ್ಟೆಯವರ ಗಾಯನ, ಸುಮಾ ಪ್ರಸಾದ್ ಅವರ ಮಾತಿರುವ ಭಕ್ತಿ ವಾಗ್ಗೀತೆ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಗುಡಿ ಸಂಸ್ಕೃತಿಯನ್ನು ಗೌರವಿಸುವ ಇಂತಹ ಗೀತೆಗಳು ನಿಜಕ್ಕೂ ಶಾಂತಿಯನ್ನು ನೀಡುತ್ತವೆ. ದೀವಿಗೆ ಬಳಗ, ಸೂರಂಕಣ, ಕಲ್ಕಟ್ಟೆ ಪುಸ್ತಕದ ಮನೆ ಈ ಹಾದಿಯಲ್ಲಿ ಶ್ಲಾಘನೀಯ ಕಾರ್ಯ ಮಾಡುತ್ತಿವೆ ಎಂದರು.
ಹಿರಿಯ ಗಾಯಕ ಬಸವರಾಜ್ ಕೆಂಪನಹಳ್ಳಿ ಮಾತನಾಡಿ, ಗಾನ ಸಂಸ್ಕೃತಿಯು ದೇವ ಪೂಜೆಗೆ ಸಮನಾದುದು. ಗಾನಕೆ ತಲೆದೂಗದ ದೇವರೇ ಇಲ್ಲ ಎಂದು ಹೇಳಿದರು.
ಕ್ಯಾಲಿಫೋರ್ನಿಯ ಕನ್ನಡ ಬಳಗದ ರಘು ಹಾಲೂರು ಮಾತನಾಡಿ, ಕಲ್ಕಟ್ಟೆ ಗಾನ ದೀವಿಗೆಯ ಗೀತೆಗಳು ಹೊರ ದೇಶದಲ್ಲಿರುವ ನಮ್ಮಂತಹ ಚಿಕ್ಕಮಗಳೂರಿಗರಿಗೆ ಮತ್ತೆ ಮತ್ತೆ ಊರಿನೆಡೆ ಮುಖ ಮಾಡುವಂತೆ ಪ್ರೇರೇಪಿಸುತ್ತವೆ ಎಂದರು.
ಅರ್ಚಕರಾದ ಮಂಜುನಾಥ ಭಟ್ ಶುಭ ಹಾರೈಕೆಯ ನುಡಿಯಾಡಿದರು. ಗಾಯಕಿ, ನಿರೂಪಕಿ ಸುಮಾ ಪ್ರಸಾದ್, ಸ್ಥಳದಾನಿ ಕುಟುಂಬದ ಗಣೇಶ್, ಅರವಿಂದ ದೀಕ್ಷಿತ್, ರಮೇಶ್ ಬೊಂಗಾಳೆ, ಮಾಲಿನಿ ರಮೇಶ್, ವೀಣಾ ಅರವಿಂದ್, ನಾಟಿ ವೈದ್ಯೆ ಶಾಂತಾ ಮಲ್ಲೇಶರಾವ್, ರಾಗಿಣಿ ತುಮಕೂರು, ರಶ್ಮಿ ಪ್ರಸಾದ್, ವೈಷ್ಣವಿ ರಾವ್ ಉಪಸ್ಥಿತರಿದ್ದರು. ನಿರ್ಮಾಪಕಿ ರೇಖಾ ನಾಗರಾಜರಾವ್ ಸ್ವಾಗತಿಸಿದರು. ಗಾಯಕ ನಾಗರಾಜರಾವ್ ಕಲ್ಕಟ್ಟೆ ವಂದಿಸಿದರು.