ಓಂ ಯುವ ಸೇನೆ ಗೆಳೆಯರ ಬಳಗದ ಗಣೇಶ ವಿಸರ್ಜನೆ

bir ganapa
Published on

ಬೀರೂರು: ಪಟ್ಟಣದ ಹಳೇ ಅಜ್ಜಂಪುರ ರಸ್ತೆಯಲ್ಲಿ ಓಂ ಯುವಸೇನೆಯಿಂದ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯನ್ನು ಶನಿವಾರ ಅದ್ದೂರಿ ಮೆರವಣಿಗೆಯೊಂದಿಗೆ ದೇವನಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು.

ಗಣೇಶ ಚತುರ್ಥಿಯಂದು ಸ್ಥಾಪಿಸಿದ್ದ ಗಣೇಶ ಮೂರ್ತಿಗೆ ಪ್ರತಿ ದಿನ ಅಲಂಕಾರ, ಪೂಜೆ ನಡೆಯುತ್ತಿತ್ತು. ಗಣಪತಿ ಪೆಂಡಾಲ್ ರಸ್ತೆಯನ್ನು ಸಂಪೂರ್ಣ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಮಹಿಳೆಯರಿಗೆ ಮತ್ತು ಮಕ್ಕಳಿಗೆ ರಂಗೋಲಿ ಸ್ಪರ್ಧೆ ಸೇರಿದಂತೆ ವಿವಿಧ ಕ್ರೀಡಾಕೂಟಗಳು ಮತ್ತು ಮನರಂಜನೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗುರುವಾರ ಸಾರ್ವಜನಿಕ ಅನ್ನಸಂತರ್ಪಣೆ ಮಾಡಲಾಯಿತು. ಸಾವಿರಾರು ಭಕ್ತರು ದಾಸೋಹದಲ್ಲಿ ಭಾಗಿಯಾಗಿ ಪ್ರಸಾದ ಸ್ವೀಕರಿಸಿದರು.

ಸಮಿತಿಯಿಂದ ಲಕ್ಕಿ ಡ್ರಾ ಆಯೋಜಿಸಲಾಗಿತ್ತು. ವಿಜೇತರಿಗೆ ದ್ವಿಚಕ್ರ ವಾಹನ, ಟಿವಿ, ಫ್ರಿಡ್ಜ್ ಸೇರಿದಂತೆ ಅನೇಕ ಬಹುಮಾನಗಳನ್ನು ವಿತರಿಸಲಾಯಿತು. ಶನಿವಾರ ಪೂಜೆ, ಮಂಗಳಾರತಿ ನೆರವೇರಿದ ಬಳಿಕ ವಿದ್ಯತ್ ದೀಪ ಹಾಗೂ ಪುಷ್ಪಗಳಿಂದ ಅಲಂಕರಿಸಿದ್ದ ವಾಹನಕ್ಕೆ ಗಣೇಶ ಮೂರ್ತಿಯನ್ನು ತಂದು ಪ್ರತಿಷ್ಠಾಪಿಸಲಾಯಿತು. ಡಿಜೆ ಹಾಗೂ ಪಟಾಕಿ ಸದ್ದಿನೊಂದಿಗೆ ಮೆರವಣಿಗೆ ಸಾಗಿತು. ದಾರಿಯುದ್ದಕ್ಕೂ ಮಹಿಳೆಯರು ಹಣ್ಣುಕಾಯಿ ಪೂಜೆ ಮಾಡಿಸಿದರು. ಅಜ್ಜಂಪುರ ರಸ್ತೆಯಿಂದ ಮಹಾತ್ಮ ಗಾಂಧಿ ವೃತ್ತಕ್ಕೆ ಬಂದು ತಲುಪಿದಾಗ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು. ಡಿಜೆ ಸದ್ದಿಗೆ ಯುವಜನರು ಕುಣಿದು ಸಂಭ್ರಮಿಸಿದರು. ಲಿಂಗದಹಳ್ಳಿ ರಸ್ತೆ ಮೂಲಕ ಹೊರಟ ಮೆರವಣಿಗೆಗೆ ಜನತೆ ಜೈಕಾರ ಕೂಗುತ್ತ ಹೆಜ್ಜೆ ಹಾಕುತ್ತಿದ್ದರು. ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net