ಒಳ್ಳೆಯ ಮಾತಿನಲ್ಲಿದೆ ಬದುಕು ಪರಿವರ್ತಿಸುವ ಶಕ್ತಿ

10-9--2022 RAMBHAPURI PEETHA (2) web
Published on

ಬಾಳೆಹೊನ್ನೂರು: ದೇಹವನ್ನು ದುಡಿಮೆಗೆ, ಮನಸ್ಸನ್ನು ಭಗವಂತನಿಗೆ ಅರ್ಪಿಸಿಕೊಂಡಾಗ ಬದುಕು ಸಾರ್ಥಕವಾಗುತ್ತದೆ. ಒಳ್ಳೆಯ ಮಾತಿಗೆ ಆದರ್ಶ ಬದುಕು ಕಟ್ಟಿಕೊಡುವ ಶಕ್ತಿಯಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ರಂಭಾಪುರಿ ಪೀಠದಲ್ಲಿ ಶನಿವಾರ ಹುಣ್ಣಿಮೆ ಅಂಗವಾಗಿ ಜರುಗಿದ ನೆಗಳೂರು ಶ್ರೀಗಳು ಕೈಗೊಂಡ ಪ್ರಕೃತಿ ಸಮತೋಲನ ಪಾದಯಾತ್ರೆ ಮಂಗಲ ಧರ್ಮ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.

ವಿಶ್ವಾಸ, ನಂಬಿಕೆಗಳಿಂದ ಬದುಕು ಸಮೃದ್ಧಗೊಳ್ಳುತ್ತದೆ. ವಿದ್ಯೆ ವಿನಯಕ್ಕೆ ಕಾರಣವಾಗಬೇಕೇ ಹೊರತು ದುರಹಂಕಾರಕ್ಕಲ್ಲ. ಕಾಡುಗಳು ನಾಶಗೊಳ್ಳುತ್ತಿರುವುದರಿಂದ ನಿಸರ್ಗದಲ್ಲಿ ಏರುಪೇರು ಉಂಟಾಗುತ್ತಿದೆ. ಕೆರೆ ಕಟ್ಟೆಗಳು ಕಣ್ಮರೆಯಾಗುತ್ತಿವೆ. ಭೂಮಿ ಸಮತೋಲನ ಕಳೆದುಕೊಳ್ಳುತ್ತಿದೆ. ಹೀಗಾಗಿ ಅಕಾಲಿಕವಾಗಿ ಮಳೆ ಬಂದು ಜೀವಸಂಕುಲಕ್ಕೆ ಸಂಕಷ್ಟ ಎದುರಾಗುತ್ತಿದೆ ಎಂದು ತಿಳಿಸಿದರು.

ಅನ್ಯಾಯ, ಅಧರ್ಮದ ಬೆನ್ನು ಹತ್ತಿ ಮನುಷ್ಯ ಧರ್ಮ ಮಾರ್ಗ ಬಿಟ್ಟಿದ್ದರಿಂದ ಅನೇಕ ಸಂಕಷ್ಟಗಳಿಗೆ ಬಲಿಯಾಗುತ್ತಿದ್ದಾನೆ. ಅಧ್ಯಾತ್ಮ ಜ್ಞಾನದ ಮೂಲಕ ಶಾಂತಿ, ಸಮತೋಲನದ ಬದುಕು ಕಟ್ಟಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ. ಪ್ರಕೃತಿ ಕೊಟ್ಟ ಅಮೂಲ್ಯ ಕೊಡುಗೆಯನ್ನು ಜೀವಸಂಕುಲ ನಿರ್ಲಕ್ಷ್ಯ ಮಾಡಬಾರದು. ಶ್ರೀ ಜಗದ್ಗುರು ರೇಣುಕಾಚಾರ್ಯರು ಪೃಥ್ವಿ ತತ್ವದ ಅಧಿನಾಯಕರಾಗಿ ಭೂಲೋಕದಲ್ಲಿ ಶಾಂತಿ-ಸಾಮರಸ್ಯ, ಆರೋಗ್ಯಪೂರ್ಣ ವಾತಾವರಣಕ್ಕೆ ಭಗವಂತನ ಕಾರುಣ್ಯ ಬಹಳ ಮುಖ್ಯ ಎಂದಿದ್ದರು. ನೆಗಳೂರು ಗುರುಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ ಕಳೆದ ಮೂರು ವರ್ಷಗಳಿಂದ ಭಕ್ತರೊಡಗೂಡಿ ಪ್ರಕೃತಿ ಸಮತೋಲನಾ ಪಾದಯಾತ್ರೆ ಹಮ್ಮಿಕೊಂಡು ರಂಭಾಪುರಿ ಪೀಠದಲ್ಲಿ ಮಹಾಮಂಗಲಗೊಳಿಸಿದ್ದು ಸಂತಸ ತಂದಿದೆ ಎಂದು ನುಡಿದರು.

ಪಾದಯಾತ್ರೆ ರೂವಾರಿಗಳಾದ ಗುರುಶಾಂತೇಶ್ವರ ಶ್ರೀ ಮಾತನಾಡಿ, ದೈವ ಶಕ್ತಿಯ ಮುಂದೆ ಇನ್ನಾವ ಶಕ್ತಿಯ ಆಟವೂ ನಡೆಯುವುದಿಲ್ಲ. ಸಂತೃಪ್ತ, ಸಾಮರಸ್ಯ ಬದುಕಿಗೆ ಧರ್ಮ ಪರಿಪಾಲನೆ ಅವಶ್ಯಕ. ಪರಿಸರ ಸಂರಕ್ಷಣೆಯಿಂದ ಜೀವ ಜಗತ್ತು ಸಮೃದ್ಧಗೊಳ್ಳಲು ಸಾಧ್ಯವಾಗುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net