

ಮೈಸೂರು: ಕೀರ್ತಿ ಮತ್ತು ಹಣ ವ್ಯಕ್ತಿಯನ್ನು ಶ್ರೇಷ್ಠನನ್ನಾಗಿ ಮಾಡುವುದಿಲ್ಲ. ಒಳ್ಳೆಯ ಕೆಲಸ ಮಾತ್ರ ಉನ್ನತ ಮಟ್ಟಕ್ಕೆ ಕರೆದೊಯ್ಯುತ್ತದೆ ಎಂದು ಹಿರಿಯ ನಟ ಡಾ.ಶ್ರೀನಾಥ್ ಹೇಳಿದರು.
ಮುಕ್ತಗಂಗೋತ್ರಿಯ ಘಟಿಕೋತ್ಸವ ಭವನದಲ್ಲಿ ಆಯೋಜಿಸಿದ್ದ ಕೌಟಿಲ್ಯ ವಿದ್ಯಾಲಯದ ಶಾಲಾ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.
ಶಾಸಕ ಜಿ.ಟಿ. ದೇವೇಗೌಡ ಮಾತನಾಡಿ, ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಜೀವನ ಮೌಲ್ಯ ಕಲಿಸಬೇಕು. ಅದುವೇ ಪಾಲಕರ ಆದ್ಯ ಕರ್ತವ್ಯ. ಶಾಲೆಗಳೂ ಮಕ್ಕಳನ್ನು ಸುಸಂಸ್ಕೃತರನ್ನಾಗಿ ಮಾಡುವ ಶಿಕ್ಷಣ ಒದಗಿಸಬೇಕು ಎಂದು ಹೇಳಿದರು.
ಬೆಂಗಳೂರಿನ ಆರ್.ವಿ.ವಿಶ್ವವಿದ್ಯಾಲಯದ ಕುಲಪತಿ ಡಾ.ವೈ.ಎಸ್.ಆರ್. ಮೂರ್ತಿ ಮಾತನಾಡಿ, ಮಕ್ಕಳು ಯಶಸ್ಸು, ಸಂತೋಷ ಮತ್ತು ಜೀವನ ಕೌಶಲ ಹೇಗೆ ಸಾಧಿಸುವುದು ಎಂಬುದರ ಕುರಿತು ಸಲಹೆ ನೀಡಿದರು.
ಮೇಯರ್ ಶಿವಕುಮಾರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಉತ್ತಮ ಮಾನಸಿಕ ಮತ್ತು ದೈಹಿಕ ಬೆಳವಣಿಗೆಯಲ್ಲಿ ಸಹಪಠ್ಯ ಚಟುವಟಿಕೆಗಳ ಪಾತ್ರ ಮುಖ್ಯ ಎಂದರು.
ಆದಾಯ ತೆರಿಗೆ ಇಲಾಖೆ ಜಂಟಿ ಆಯುಕ್ತೆ ಡಿ.ಡಿ.ಶ್ಯಾಮಲಾ ಮಾತನಾಡಿ, ಕರೊನಾ ಬಳಿಕ ವಿದ್ಯುನ್ಮಾನ ಯಂತ್ರಗಳ ಮೇಲಿನ ಅವಲಂಬನೆ ಹೆಚ್ಚುತ್ತಿದೆ. ಇದು ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಪಾಲಕರು ಇದರ ಕಡೆಗೆ ಹೆಚ್ಚು ಗಮನ ಹರಿಸಬೇಕು ಎಂದರು.
ಶಾಲೆಯಲ್ಲಿ 5 ವರ್ಷಗಳ ಸೇವೆಯನ್ನು ಪೂರೈಸಿದ ಶಿಕ್ಷಕರಾದ ಮಹಮ್ಮದ್ ಗೌಸ್, ಆಶಾ ಚತುರ್ವೇದಿ, ಉಮೇಶ್ ಕುಮಾರ್, ಕೆ.ಆರ್.ಗೀತಾ, ದೃತಿಮಾ ಹಜೋವಾರಿ ಅವರಿಗೆ ಕೌಟಿಲ್ಯ ವಿದ್ಯಾರತ್ನ ಪ್ರಶಸ್ತಿ ನೀಡಲಾಯಿತು.
ಪ್ರತಿಭಾವಂತ ವಿದ್ಯಾರ್ಥಿ ರಾಜ್ ಆಸ್ರಿತ್‌ಗೆ 25 ಸಾವಿರ ರೂ. ನಗದನ್ನು ನೀಡಲಾಯಿತು. ವಿದ್ಯಾರ್ಥಿಗಳ ಅಜ್ಜ ಅಜ್ಜಿಯರು ರ‌್ಯಾಂಪ್ ವಾಕ್ ಮಾಡಿ ಗಮನ ಸೆಳೆದರು. ಮಕ್ಕಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.
ಸಂಸ್ಥೆಯ ಅಧ್ಯಕ್ಷ ಟಿ.ಬಾಬು, ಪ್ರಾಂಶುಪಾಲೆ ಶಶಿಕಲಾ, ಉಪ ಪ್ರಾಂಶುಪಾಲೆ ಬಿ.ಬಿ. ರಾಧಿಕಾ ಇನ್ನಿತರರು ಇದ್ದರು.