

ವಿಜಯವಾಣಿ ಸುದ್ದಿಜಾಲ ಧಾರವಾಡ
ಶಿಕ್ಷಕರು ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ ಭವಿಷ್ಯ ನಿರ್ಮಿಸುತ್ತಾರೆ. ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಗೌರವದಿಂದ ನಡೆದುಕೊಳ್ಳಬೇಕು ಎಂದು ಸ್ವರ್ಣ ಸಮೂಹ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಡಾ. ಸಿಎಚ್ ವಿ.ಎಸ್.ವಿ ಪ್ರಸಾದ ಅಭಿಪ್ರಾಯಪಟ್ಟರು.
ನಗರದ ವನಿತಾ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ, ವಿದ್ಯಾರ್ಥಿ ಒಕ್ಕೂಟ, ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆ, ಕಂಪ್ಯೂಟರ್ ತರಗತಿ, ಉಪನ್ಯಾಸ ಕೊಠಡಿ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಸದಾ ಸಕಾರಾತ್ಮಕವಾಗಿ ಯೋಚಿಸಬೇಕು. ಪ್ರತಿಭೆ ಗುರುತಿಸಿ ಪ್ರೋತ್ಸಾಹ ನೀಡುವುದರ ಜತೆಗೆ ವಿದ್ಯಾರ್ಥಿಗಳ ಭವಿಷ್ಯ ನಿರ್ಮಿಸುವಲ್ಲಿ ಶಿಕ್ಷಕರ ಪಾತ್ರ ಮುಖ್ಯ. ಹೀಗಾಗಿ ವಿದ್ಯಾರ್ಥಿಗಳು ಶಿಕ್ಷಕರಿಗೆ ಗೌರವ ನೀಡಿ ಉತ್ತಮ ನಡತೆ, ಸಂಸ್ಕಾರ ಬೆಳೆಸಿಕೊಳ್ಳಬೇಕು ಎಂದರು.
ಇಂಜಿನಿಯರ್ ವಸಂತ ಭಟ್ ಮಾತನಾಡಿ, ವೃತ್ತಿ ಜತೆ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಶಾಲೆಯಲ್ಲಿ ನೀಡುವ ಸಂಸ್ಕಾರ ಭವಿಷ್ಯಕ್ಕೆ ಪೂರಕವಾಗಿರುತ್ತದೆ. ಭಾಗೀರಥಿಬಾಯಿ ಸಾರ್ಥಕ ಜೀವನವೇ ಎಲ್ಲರಿಗೂ ಸ್ಫೂರ್ತಿ ಎಂದರು.
ಎಂ.ಎಸ್. ಗಾಣಿಗೇರ, ರ‌್ಯಾಪಿಡ್ ಸಂಸ್ಥೆಯ ಮಾಳವಿಕಾ ಕಡಕೋಳ ಮಾತನಾಡಿದರು. ವನಿತಾ ಸೇವಾ ಸಮಾಜದ ಅಧ್ಯಕ್ಷ ಟಿ.ಎಲ್. ಪಾಟೀಲ ಮಾತನಾಡಿ, ಮಾತೋಶ್ರೀ ಭಾಗೀರಥಿಬಾಯಿ ಕನಸನ್ನು ನನಸಾಗಿಸುವ ಕಾರ್ಯದಲ್ಲಿ ಸಂಸ್ಥೆ ಶಿಕ್ಷಕರು, ಆಡಳಿತ ಮಂಡಳಿ ಕಾರ್ಯ ಪ್ರವೃತ್ತರಾಗಿದ್ದು, ಸಂಸ್ಥೆಯ ಶಾಲಾ, ಕಾಲೇಜಿನಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂದರು.
ಉಪಾಧ್ಯಕ್ಷೆ ರಾಧಿಕಾ ಕುಲಕರ್ಣಿ, ಕಾರ್ಯದರ್ಶಿ ಮಧುರಾ ಹೆಗಡೆ, ಕಾಲೇಜಿನ ಪ್ರಾಚಾರ್ಯ ಆರ್.ಬಿ. ದೊಡಮನಿ, ಉದ್ಯಮಿ ಪ್ರವೀಣ ಗುಡಿಹಾಳ, ಶಿಕ್ಷಕರು, ವಿದ್ಯಾರ್ಥಿಗಳು, ಇತರರು ಇದ್ದರು. 2022-23ನೇ ಸಾಲಿನಲ್ಲಿ ದ್ವಿತೀಯ ಪಿಯು ವರ್ಷದಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಉಪನ್ಯಾಸಕರಾದ ಸಂತೋಷ ಕಲಕೇರಿ ವಿದ್ಯಾರ್ಥಿ ಒಕ್ಕೂಟದ ಪ್ರತಿನಿಧಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಹೇಮಾ ಕಮ್ಮಾರ ಸ್ವಾಗತಿಸಿದರು. ಪವಿತ್ರಾ ಬಾಚಗುಂಡಿ, ನೇತ್ರಾ ಹಿರತೇಮಠ ನಿರೂಪಿಸಿದರು. ವಿಜಯಕುಮಾರ ವಂದಿಸಿದರು.