

ಬಸವಕಲ್ಯಾಣ: ಕೆಟ್ಟದ್ದನ್ನು ಮರೆತು ಉತ್ತಮ ವಿಚಾರಗಳನ್ನು ಕೇಳಿಸಿಕೊಳ್ಳುವ ಕಾಲವೇ ಶ್ರಾವಣ ಮಾಸ ಎಂದು ಬಸವಕಲ್ಯಾಣ ಅಭಿವೃದ್ಧಿ ಮಂಡಳಿ ಆಯುಕ್ತ ರಮೇಶ ಕೋಲಾರ ಹೇಳಿದರು.
ನಗರದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ದೇವಸ್ಥಾನ ಪಂಚ ಕಮಿಟಿ ಮತ್ತು ವಿಶ್ವಸ್ಥ ಸಮಿತಿಯಿಂದ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶ್ರಾವಣ ಮಾಸದ ಆಧ್ಯಾತ್ಮಿಕ ಪ್ರವಚನಕ್ಕೆ ಚಾಲನೆ ನೀಡಿದ ಅವರು, ಅನುಭವ ಮಂಟಪ ನಿತ್ಯ ಹೊಸ ಚಿಂತನೆ ರೂಪಿಸಿದ ಸ್ಥಳವಾಗಿತ್ತು. ಅಲ್ಲಿ ಹೊಸ ಚಿಂತೆಗಳ ಶ್ರಾವಣವಾಗುತಿತ್ತು. ಶರಣರನ್ನು ಒಂದೆಡೆ ಸೇರಿಸಿ ತಮ್ಮ ವಿಚಾರಗಳನ್ನು ಅಭಿವ್ಯಕ್ತಪಡಿಸಿದ ಸ್ಥಳ ಅನುಭವ ಮಂಟಪ ಎಂದು ವಿಶ್ಲೇಷಿಸಿದರು.
ನಿವೃತ್ತ ಜಿಲ್ಲಾ ನ್ಯಾಯಾಧೀಶ ಸುಭಾಶ್ಚಂದ್ರ ನಾಗರಾಳೆ ಮಾತನಾಡಿ, ಸಣ್ಣ ಸಣ್ಣ ಕಾಯಕ ಜೀವಿಗಳನ್ನು ಒಂದೆಡೆ ಸೇರಿಸಿದ ಬಸವಣ್ಣನವರದು
ಸಮಾಜವಾದದ ಪರಿಕಲ್ಪನೆ. ಮಹಿಳೆಯರು, ತಳಸಮುದಾಯವರಿಗೆ ಸಮಾಜದಲ್ಲಿ ಮಹತ್ವದ ಸ್ಥಾನ ಕಲ್ಪಿಸಿದ ಶರಣ ಸಂಸ್ಕೃತಿ ಜಗತ್ತಿನಲ್ಲೆ ಶ್ರೇಷ್ಠ ಎಂದರು.
ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಂಗಮೇಶ್ವರ ಸ್ವಾಮೀಜಿ ಮಾತನಾಡಿದರು. ಮುಚಳಂಬದ ಶ್ರೀ ಪ್ರಣವಾನಂದ ಸ್ವಾಮೀಜಿ ಮಾತನಾಡಿ, ಜೀವನದಲ್ಲಿ ಅರಿತು ನಡೆದವರೇ ಶರಣರು. ಅರಿತು ಬದುಕುವುದೇ ಶರಣ ಜೀವನ. ಬಸವಾದಿ ಶರಣರು ತೋರಿದ ಬೆಳಕಿನ ದಾರಿ ಸರಳ, ಸುಂದರವಾಗಿದೆ. ಹಾಗೆ ನಡೆಯುವುದೇ ಶರಣ ಸಂಸ್ಕೃತಿಯ ಭಾಗ ಎಂದರು.
ಶ್ರೀ ಗುರುಬಸವ ಪಟ್ಟದ್ದೇವರು ನೇತೃತ್ವ, ಬಿಡಿಪಿಸಿ ಅಧ್ಯಕ್ಷ ಬಸವರಾಜ ಕೊರಕೆ ಅಧ್ಯಕ್ಷತೆ ವಹಿಸಿದ್ದರು. ಅಕ್ಕನ ಬಳಗದ ಸುಲೋಚನಾ ಮಾಮಾ, ಬಿಡಿಪಿಸಿ ಪದಾಧಿಕಾರಿಗಳಾದ ಮಲ್ಲಿಕಾರ್ಜುನ ಚಿರಡೆ, ಡಾ.ಜಿ.ಎಸ್. ಭುರಳೆ, ಶ್ರೀಕಾಂತ ಬಡದಾಳೆ, ವಿವೇಕಾನಂದ ಹೊದಲೂರೆ, ರಾಜಕುಮಾರ ಹೊಳಕುಂದೆ, ಕಾಶಪ್ಪ ಸಕ್ಕರಬಾವಿ, ಅಶೋಕ ನಾಗರಾಳೆ, ರೇವಣಪ್ಪ ರಾಯವಾಡೆ, ಜಗನ್ನಾಥ ಖೂಬಾ, ಮಲ್ಲಿಯ್ಯ ಸ್ವಾಮಿ, ಸುಭಾಷ ಹೊಳಕುಂದೆ, ಗದಗೆಪ್ಪ ಹಲಶೆಟ್ಟೆ, ಸೋಮಶೇಖರಯ್ಯ ವಸ್ತçದ, ನಾಗಯ್ಯ ಸ್ವಾಮಿ, ಮಲ್ಲಿನಾಥ ಮಂಠಾಳೆ ಇತರರಿದ್ದರು. ಬಿಡಿಪಿಸಿ ನಿರ್ದೇಶಕ ವೀರಣ್ಣ ಹಲಶೆಟ್ಟೆ ಸ್ವಾಗತಿಸಿದರು. ಜ್ಯೋತಿ ತುಗಾವೆ ನಿರೂಪಣೆ ಮಾಡಿದರು.