

ಚಾಮರಾಜನಗರ: 12 ಶತಮಾನದಲ್ಲಿ ಸಮಾಜದಲ್ಲಿದ್ದ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಲು ಶ್ರಮಿಸಿದ ಮಹಾನ್ ಮಾನವತಾವಾದಿ ಬಸವಣ್ಣ ಎಂದು ಎಂಎಸ್‌ಐಎಲ್ ನಿಗಮದ ಅಧ್ಯಕ್ಷ ಸಿ.ಪುಟ್ಟರಂಗಶೆಟ್ಟಿ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಜಗಜ್ಯೋತಿ ಬಸವೇಶ್ವರರ ಜಯಂತಿ ಕಾರ್ಯಕ್ರಮದಲ್ಲಿ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು. ಬಸವಣ್ಣನವರ ಕಾಯಕ ತತ್ವ ಇಡಿ ಮನುಕುಲಕ್ಕೆ ಮಾದರಿಯಾಗಿದೆ. ಬಸವಣ್ಣನವರ ಆದರ್ಶ, ತತ್ವಗಳನ್ನು ಪಾಲನೆ ಮಾಡಬೇಕು. ನುಡಿದಂತೆ ನಡೆಯಬೇಕೆಂಬ ಆದರ್ಶ ಮಾತು ಸಾರ್ವಕಾಲಿಕವಾದುದು ಎಂದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ ಮಾತನಾಡಿ ಬಸವಣ್ಣ ಅವರಂತಹ ಮಹಾನ್ ಶಿವಶರಣರ ಜಯಂತಿಗಳನ್ನು ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ. ಶಿವಶರಣರು ಆಸೆ ಆಮಿಷಕ್ಕೆ ಒಳಗಾದವರಲ್ಲ. ಅವರು ಸಮಾಜದ ಒಳಿತಿಗಾಗಿ ಕೆಲಸ ಮಾಡಿದವರು ಎಂದು ಹೇಳಿದರು.
ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲತಾ ರಾಜಶೇಖರಜತ್ತಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಚುಡಾ ಅಧ್ಯಕ್ಷ ಮಹಮದ್ ಅಸ್ಗರ್, ಪ್ರಧಾನ ಕಾರ್ಯದರ್ಶಿಗಳಾದ ಆರ್.ಮಹದೇವ್, ಚಿಕ್ಕಮಹಾದೇವ, ನಗರಸಭೆ ಸದಸ್ಯರಾದ ಚಿನ್ನಮ್ಮ, ಸ್ವಾಮಿ, ಚುಡಾ ಸದಸ್ಯರಾದ ಪುಟ್ಟಸ್ವಾಮಿ, ರಾಜು ಮತ್ತು ಇತರರು ಹಾಜರಿದ್ದರು.