ಒಳಾಂಗಣ ಕ್ರೀಡಾಂಗಣ ಕಾಮಗಾರಿ ಶುರು

2HLY-1
Published on

ಹಳಿಯಾಳ: ಕೇಂದ್ರ ಸರ್ಕಾರದ ‘ಖೇಲೋ ಇಂಡಿಯಾ’ ಯೋಜನೆಯಡಿ ರಾಜ್ಯಕ್ಕೆ ಮಂಜೂರಾದ ಮೊದಲನೆಯದ್ದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬಹುಪಯೋಗಿ ಒಳಾಂಗಣ ಕಟ್ಟಡ ನಿರ್ಮಾಣ ಕಾರ್ಯ ಹಳಿಯಾಳದಲ್ಲಿ ಆರಂಭಗೊಂಡಿದೆ.

ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ‘ಖೇಲೋ ಇಂಡಿಯಾ’ ಯೋಜನೆಯಡಿ ದೇಶದ ವಿವಿಧ ರಾಜ್ಯಗಳಲ್ಲಿ ಒಳಾಂಗಣ, ಹೊರಾಂಗಣ ಕ್ರೀಡಾಂಗಣ, ಈಜುಗೊಳ, ಕ್ರೀಡಾ ಹಾಸ್ಟೆಲ್ ಸೇರಿ ಕ್ರೀಡೆಗೆ ಸಂಬಂಧಿಸಿದ ಹಲವಾರು ಸೌಲಭ್ಯಗಳನ್ನು ಒದಗಿಸುವ ಕಾರ್ಯ ಆರಂಭಿಸಿತ್ತು.

ಆಗ ಸಚಿವರಾಗಿದ್ದ ಹಾಲಿ ಶಾಸಕ ಆರ್.ವಿ. ದೇಶಪಾಂಡೆ ಅವರ ವಿಶೇಷ ಪ್ರಯತ್ನದಿಂದಾಗಿ 2017-18ನೇ ಸಾಲಿನಲ್ಲಿ ಹಳಿಯಾಳ ಪಟ್ಟಣಕ್ಕೆ ಕೇಂದ್ರ ಕ್ರೀಡಾ ಮತ್ತು ಯುವಜನ ಇಲಾಖೆ ಸಚಿವಾಲಯ 7.50 ಕೋಟಿ ರೂ. ಅನುದಾನ ಬಿಡುಗಡೆ ಮಾಡಿತು.

ಬಹುಪಯೋಗಿ ಒಳಾಂಗಣ ಕಟ್ಟಡ ನಿರ್ವಣಕ್ಕೆ ಚಿಬ್ಬಲಗೇರಿ ಗ್ರಾಮದ ಮಾರ್ಗದಲ್ಲಿ ನೂತನ ಸಾರಿಗೆ ಘಟಕದ ಪಕ್ಕ 4 ಎಕರೆ ಜಮೀನನ್ನು ಶಾಸಕ ಆರ್.ವಿ. ದೇಶಪಾಂಡೆ ಮಂಜೂರು ಮಾಡಿಸಿ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಹಸ್ತಾಂತರಿಸಿದ್ದರು. ಕಟ್ಟಡ ಕಾಮಗಾರಿ ನಿರ್ವಹಣೆಯನ್ನು ಲೋಕೋಪಯೋಗಿ ಇಲಾಖೆಗೆ ವಹಿಸಿ ಕಾಮಗಾರಿಗೆ ಟೆಂಡರ್ ಕರೆಯಲಾಗಿತ್ತು. ಆದರೆ, ತಾಂತ್ರಿಕ ಕಾರಣಗಳಿಂದಾಗಿ ಟೆಂಡರ್ ಪ್ರಕ್ರಿಯೆ ನನೆಗುದಿಗೆ ಬಿದ್ದಿತ್ತು. ನಂತರ 2020ರ ಅಕ್ಟೋಬರ್​ನಲ್ಲಿ ಸಮಸ್ಯೆ ಬಗೆಹರಿದು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಕಾಮಗಾರಿ ಆರಂಭಗೊಂಡಿದೆ.

ಕಟ್ಟಡದಲ್ಲಿ ಏನೇನಿದೆ?: ಬಹುಪಯೋಗಿ ಒಳಾಂಗಣ ಕ್ರೀಡಾಂಗಣ ಒಂದು ಅಂತಸ್ತಿನ ಕಟ್ಟಡವಾಗಿದೆ. ನೆಲ ಅಂತಸ್ತಿನಲ್ಲಿ ಕ್ರೀಡಾಪಟುಗಳಿಗಾಗಿ ಕಿಚನ್, ಡೈನಿಂಗ್ ಹಾಲ್, ರಿಫ್ರೆಶ್ ರೂಮ್ ವಾಹನ ರ್ಪಾಂಗ್ ಹಾಗೂ ಸುಸಜ್ಜಿತ ಏರೋಬಿಕ್ ಜಿಮ್ ಇದೆ. ಮೊದಲ ಅಂತಸ್ತಿನಲ್ಲಿ 60/40 ಮೀಟರ್ ವಿಸ್ತ್ರೀರ್ಣವುಳ್ಳ ಹಾಗೂ 12.5 ಮೀಟರ್ ಎತ್ತರದ ಬಹುಪಯೋಗಿ ಹಾಲ್ ನಿರ್ವಿುಸಲಾಗುತ್ತಿದೆ. ಇಲ್ಲಿ ಒಳಾಂಗಣ ಕ್ರೀಡೆ ಆಯೋಜಿಸಲು ಅವಕಾಶ ಕಲ್ಪಿಸಲಾಗುವುದು. ನಿಗದಿಪಡಿಸಿದಂತೆ 2022ರ ಸೆಪ್ಟೆಂಬರ್ ಒಳಗೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಲೋಕೋಪಯೋಗಿ ಇಲಾಖೆ ಭರವಸೆ ನೀಡಿದೆ.

ಹಳಿಯಾಳಕ್ಕೆ ಖೇಲೋ ಇಂಡಿಯಾ ಯೋಜನೆಯಡಿ ಬಹುಪಯೋಗಿ ಒಳಾಂಗಣ ಕ್ರೀಡಾ ಕಟ್ಟಡ ಮಂಜೂರಾಗಿರುವುದು ನಮಗೆಲ್ಲ ಹೆಮ್ಮೆಯ ವಿಷಯ. ಕ್ರೀಡಾ ಕಟ್ಟಡದ ಪ್ರಯೋಜನ ತಾಲೂಕಿನ ಕ್ರೀಡಾಪಟುಗಳಿಗೆ ಬೇಗ ಲಭಿಸುವಂತಾಗಲಿ.| ಉದಯ ಜಾಧವ, ಹಳಿಯಾಳ ಕ್ರೀಡಾಭವನ ಕೋಚ್

ಶಾಸಕ ಆರ್.ವಿ. ದೇಶಪಾಂಡೆ ಅವರ ವಿಶೇಷ ಪ್ರಯತ್ನದ ಫಲವಾಗಿ ನಮಗೆ ಈ ಯೋಜನೆ ಮಂಜೂರಾಗಿದೆ. ಶಾಸಕರು ಸೂಚಿಸಿದಂತೆ ಕಾಮಗಾರಿ ಗುಣಮಟ್ಟದಿಂದ ಕೂಡಿರುವಂತೆ ನೋಡಿಕೊಳ್ಳಲು ಪುರಸಭೆಯಿಂದ ಮೇಲ್ವಿಚಾರಣೆ ಮಾಡುತ್ತಿದ್ದೇವೆ.| ಅಜರ್ ಬಸರಿಕಟ್ಟಿ, ಪುರಸಭೆ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net