

ಹುತಾತ್ಮರನ್ನು ಸ್ಮರಿಸಿದ ನಿವೃತ್ತ ಡಿವೈಎಸ್ಪಿ ರಂಗಸ್ವಾಮಿ
ಹನೂರು: ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಸಾವಿಗೆ ಕಾರಣನಾದ ಗುಪ್ತ ಮಾಹಿತಿದಾರನಾಗಿದ್ದ ಕಮಲನಾಯಕ್ ನಿಜವಾದ ದೇಶದ್ರೋಹಿ ಎಂದು ನಿವೃತ್ತ ಡಿವೈಎಸ್ಪಿ ರಂಗಸ್ವಾಮಿ ಕಿಡಿಕಾರಿದರು.
ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಭಾನುವಾರ ಕಚೇರಿಯಲ್ಲಿ ಆಯೋಜಿಸಿದ್ಧ ಗೌರವ ನಮನ ಕಾರ್ಯಕ್ರಮದಲ್ಲಿ ಹುತಾತ್ಮ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಕಾಡುಗಳ್ಳ ವೀರಪ್ಪನ್ ಪೊಲೀಸ್ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದ್ದ. ವೀರಪ್ಪನ್ ಸೆರೆ ಹಿಡಿಯಲು ಪೊಲೀಸ್ ಇಲಾಖೆ ಮುಂದಾಗಿತ್ತು. 1992ರ ಆಗಸ್ಟ್ 14ರಂದು ಅಂದಿನ ಮೈಸೂರು ಎಸ್ಪಿ ಟಿ.ಹರಿಕೃಷ್ಣ, ಪಿಎಸೈ ಶಕೀಲ್ ಆಹಮದ್ ತಂಡ ಮಿಣ್ಯಂ ಸಮೀಪದ ಅರಣ್ಯ ಪ್ರದೇಶದಲ್ಲಿ ವೀರಪ್ಪನ್ ಇರುವುದನ್ನು ಖಚಿತಪಡಿಸಿಕೊಂಡು ಬಂಧನಕ್ಕಾಗಿ ಬಲೆ ಬೀಸಿದ್ದರು. ಅಂದಿನ ಕೊಳ್ಳೇಗಾಲ ಸರ್ಕಲ್ ಇನ್ಸ್‌ಪೆಕ್ಟರ್ ಮಂದಪ್ಪ ಮತ್ತು ಸಿಬ್ಬಂದಿಯನ್ನು ರಾಮಾಪುರದಿಂದ ಲಾರಿಯಲ್ಲಿ ಕಳುಹಿಸಲಾಗಿತ್ತು. ಎಸ್ಪಿ ಟಿ. ಹರಿಕೃಷ್ಣ ಅವರು ತಾವೇ ಸ್ವತಃ ಕಾರನ್ನು ಚಾಲನೆ ಮಾಡಿಕೊಂಡು ಹೋಗಿದ್ದರು. ಆದರೆ ರಾಮಾಪುರ ಬಿಟ್ಟು ಕಾರು ಹಾಗೂ ಲಾರಿ ಸುಮಾರು 25 ಕಿ.ಮೀ ದೂರ ಹೋದ ನಂತರ ಗಾಜನೂರು ಸಮೀಪದ ಬೂದಿಕೆರೆ ರಸ್ತೆ ತಿರುವಿನ ಬಳಿ ಕುಖ್ಯಾತ ವೀರಪ್ಪನ್ ಹಾಗೂ ಆತನ ಸಹಚರರು ವಾಹನ ಚಲಿಸದಂತೆ ರಸ್ತೆಯಲ್ಲಿ ಕಲ್ಲುಗಳನ್ನಿಟ್ಟು ಮರೆಯಾಗಿದ್ದರು. ಪೊಲೀಸರ ಮೇಲೆ ಕೈಬಾಂಬು ಹಾಗೂ ಬಂದೂಕಿನಿಂದ ಗುಂಡಿನ ದಾಳಿ ನಡೆಸಿದ್ದರು. ಗುಂಡೇಟಿನಿಂದ ಟಿ. ಹರಿಕೃಷ್ಣ,ಶಕೀಲ್ ಆಹಮದ್, ಬೆನೆಗೊಂಡ, ಸುಂದರ, ಅಪ್ಪಚ್ಚು, ಕಾಳಪ್ಪ ವೀರ ಮರಣ ಹೊಂದಿದ್ದರು. ಮಾಹಿತಿದಾರ ಕಮಲನಾಯಕ್ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದ. ಈತನ ಒಳಸಂಚಿಗೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಳೆದುಕೊಳ್ಳಬೇಕಾಯಿತು ಎಂದು ಬೇಸರ ವ್ಯಕ್ತಪಡಿಸಿದರು.
ಡಿವೈಎಸ್ಪಿ ನಾಗರಾಜು, ಇನ್ಸ್‌ಪೆಕ್ಟರ್ ಸಂತೋಷ್ ಕಶ್ಯಪ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಮಹಾದೇಶ್ ಇತರರು ಇದ್ದರು.