

ಚಿತ್ರದುರ್ಗ: ಎಸ್ಸಿ, ಎಸ್ಟಿ ಸಮುದಾಯದವರಿಗೆ ಒಳ ಮೀಸಲಾತಿ ನೀಡುವ ಅಧಿಕಾರ ಆಯಾ ರಾಜ್ಯ ಸರ್ಕಾರಕ್ಕಿದೆ ಎಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿರುವುದು ಸ್ವಾಗತಾರ್ಹ ಎಂದು ಶ್ರೀ ಹರಳಯ್ಯ ಸ್ವಾಮೀಜಿ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಳ ಮೀಸಲಾತಿಗಾಗಿ ಕಳೆದ ಮೂರ್ನಾಲ್ಕು ದಶಕಗಳಿಂದಲೂ ಕರ್ನಾಟಕ ದಲಿತ ಸಂಘರ್ಷ ಸಮಿತಿ, ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ಸೇರಿ ವಿವಿಧ ಸಂಘಟನೆಗಳು, ಅನೇಕ ಮಠಾಧೀಶರು ನಡೆಸಿದ ಹೋರಾಟಕ್ಕೆ ಸುಪ್ರೀಂ ಕೋರ್ಟ್‌ನ ಈ ತೀರ್ಪು ಶಕ್ತಿ ತುಂಬಿದೆ ಎಂದರು.
ಪಾದಯಾತ್ರೆ, ಸೈಕಲ್ ಜಾಥಾ, ಅರೆಬೆತ್ತಲೆ, ಪಂಜಿನ ಮೆರವಣಿಗೆ ಡಿ.ಸಿ.ಕಚೇರಿಗೆ ಮುತ್ತಿಗೆಗೆ ಯತ್ನ, ಶಾಸಕರ ಮನೆ ಎದುರು ಧರಣಿ ಸೇರಿ ವಿವಿಧ ರೀತಿಯಲ್ಲಿ ಪ್ರತಿಭಟನೆ ನಡೆಸಲಾಯಿತು. ಕಠಿಣ, ದೀರ್ಘಾವಧಿಯ ಹೋರಾಟಕ್ಕೆ ಸಿಕ್ಕ ಪ್ರತಿಫಲ ಇದಾಗಿದೆ. ರಾಜ್ಯದ ಸಿಎಂ ತಡ ಮಾಡದೆ, ಆದೇಶದನ್ವಯ ಒಳಮೀಸಲು ಜಾರಿಗೆ ತ್ವರಿತವಾಗಿ ಕ್ರಮವಹಿಸಬೇಕು. ಇಲ್ಲದಿದ್ದರೆ, ಬೀದಿಗಿಳಿದು ಹೋರಾಟ ನಡೆಸಲು ಸಿದ್ಧ ಎಂದು ಎಚ್ಚರಿಸಿದರು.
ಮುಖಂಡ ಹನುಮಂತಪ್ಪ ದುರ್ಗ ಮಾತನಾಡಿ, ಒಳ ಮೀಸಲಾತಿ ಸಂಬಂಧ ಇದೊಂದು ಅತ್ಯುತ್ತಮವಾದ ತೀರ್ಪು. ಎಸ್ಸಿಯೊಳಗಿನ ಅಸ್ಪಶ್ಯರನ್ನು ಗುರುತಿಸಿ ಆಯಾ ಜಾತಿಗೆ ಅನುಗುಣವಾಗಿ ಮೀಸಲಾತಿ ನೀಡುವ ಸಂಬಂಧ ಆಯಾ ರಾಜ್ಯಗಳಿಗೆ ಅಧಿಕಾರ ನೀಡಿದ್ದು, ಜಾರಿಗೆ ಸಿಎಂ ಮುಂದಾಗಬೇಕು ಎಂದು ಮನವಿ ಮಾಡಿದರು.
ನಗರಂಗೆರೆ ದೇವರಾಜ್, ವಕೀಲ ಸುರೇಶ್ ಇತರರಿದ್ದರು.