ಒಳಮೀಸಲು ಜಾರಿಯಾಗದಿದ್ದರೆ ಹೋರಾಟ ತೀವ್ರ

Krantikari
Published on

ಚಿತ್ರದುರ್ಗ: ರಾಜ್ಯ ಸರ್ಕಾರದ 6ನೇ ಗ್ಯಾರಂಟಿಯಾದ ಒಳ ಮೀಸಲಾತಿಯನ್ನು ಜಾರಿಗೊಳಿಸದೆ, ದುರ್ಗದಲ್ಲಿ ಈ ಹಿಂದೆ ಸಿಎಂ ಸಿದ್ದರಾಮಯ್ಯ ಕೊಟ್ಟ ಮಾತು ಉಳಿಸಿಕೊಂಡಿಲ್ಲ. ಹೀಗಾಗಿ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸುವುದಾಗಿ ರಾಜ್ಯ ಮಾದಿಗ ಸಮುದಾಯದ ಮುಖಂಡ ಬಿ.ಆರ್. ಭಾಸ್ಕರ್ ಪ್ರಸಾದ್ ತಿಳಿಸಿದರು.

ಒಳ ಮೀಸಲಾತಿ ಜಾರಿ ಸಂಬಂಧ ಕಳೆದ 80 ದಿನಗಳಿಂದ ರಾಜ್ಯದ ವಿವಿಧೆಡೆ ಸಂಚರಿಸಿದ ಕ್ರಾಂತಿಕಾರಿ ರಥಯಾತ್ರೆಯನ್ನು ಬುಧವಾರ ದುರ್ಗದಲ್ಲಿ ಮುಕ್ತಾಯಗೊಳಿಸಿದ ನಂತರ ಮಾತನಾಡಿದರು.

ಒಳ ಮೀಸಲಾತಿ ಆಯಾ ರಾಜ್ಯ ಸರ್ಕಾರಗಳೇ ಜಾರಿಗೊಳಿಸಬಹುದೆಂದು ಸುಪ್ರೀಂಕೋರ್ಟ್ ಆದೇಶಿಸಿ 10 ತಿಂಗಳಾದರೂ ಸಿದ್ದರಾಮಯ್ಯ ಜಾರಿಗೊಳಿಸದೆ, ಮೀನಾಮೇಷ ಎಣಿಸುತ್ತ ಮುಂದೂಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಒಳಮೀಸಲಾತಿ ವಿಚಾರವಾಗಿ ರಾಜ್ಯದಲ್ಲಿ ಮಾದಿಗ ಸಮುದಾಯ ಅನ್ಯಾಯಕ್ಕೊಳಗಾಗಿದೆ. ಸಮುದಾಯಕ್ಕೆ ನ್ಯಾಯ ಕೊಡಿಸುವಲ್ಲಿ ಸಚಿವರಾದ ಎಚ್.ಸಿ. ಮಹದೇವಪ್ಪ, ಪ್ರಿಯಾಂಕ ಖರ್ಗೆ, ಆರ್.ಬಿ. ತಿಮ್ಮಾಪುರ, ಕೆ.ಎಚ್. ಮುನಿಯಪ್ಪ ವಿಫಲರಾಗಿದ್ದು, ಇವರುಗಳೇ ಅಡ್ಡಗಾಲಾಗಿದ್ದಾರೆ ಎಂದು ದೂರಿದರು.

ಜಾರಿ ಮಾಡುವ ಭರವಸೆಯೊಂದಿಗೆ ದಿನಗಳನ್ನು ದೂಡುತ್ತಿರುವ ಸಿಎಂ ಸಮುದಾಯಕ್ಕೆ ನಂಬಿಕೆ ದ್ರೋಹ ಮಾಡುತ್ತಿದ್ದಾರೆ. ಬಡ್ತಿ ಹಾಗೂ ನೇಮಕಾತಿ ಮಾಡುವುದಿಲ್ಲವೆಂದು ಹೇಳಿ, ಮಾತಿಗೆ ತಪ್ಪಿದ್ದಾರೆ. ಇದಕ್ಕೆ ಬಡ್ತಿ ಪ್ರಕ್ರಿಯೆಯೇ ನಿದರ್ಶನ. ಜಾರಿ ಮಾಡಲು ಸಾಧ್ಯವಾಗದಿದ್ದರೆ, ಅಧಿಕಾರ ಬಿಟ್ಟು ಕೆಳಗಿಳಿಯಿರಿ ಎಂದು ಕಿಡಿಕಾರಿದರು.

ಮೇ ಅಂತ್ಯದೊಳಗೆ ಒಳ ಮೀಸಲಾತಿ ಜಾರಿಯಾಗದಿದ್ದಲ್ಲಿ ಜೂನ್ 9ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಈ ಮೂಲಕ ಸಮುದಾಯದ ಶಕ್ತಿ ಪ್ರದರ್ಶಿಸಲಾಗುವುದು. ಆರ್‌ಎಸ್‌ಎಸ್, ವಿಶ್ವ ಹಿಂದು ಪರಿಷತ್, ಬಜರಂಗದಳ, ದಲಿತ ಸಂಘರ್ಷ ಸಮಿತಿ, ಅಂಬೇಡ್ಕರ್ ವಾದ ಹೀಗೆ ಅನೇಕ ಸಂಘಟನೆಗಳಲ್ಲೂ ನಮ್ಮ ಸಮುದಾಯದವರಿದ್ದಾರೆ. ಅನ್ಯಾಯವಾದರೆ, ಸಮುದಾಯ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ಮುಖಂಡ ಬಾಳೆಕಾಯಿ ಶ್ರೀನಿವಾಸ್ ಮಾತನಾಡಿ, ಮಾದಿಗ ಸಮುದಾಯ ಬ್ರಾಹ್ಮಣ ಸಮುದಾಯಕ್ಕಿಂತ 100 ವರ್ಷ ಹಿಂದಿದೆ. ಮುಂದಿನ 50 ವರ್ಷದ ನಂತರ ದೇಶದಲ್ಲಿ ಯಾವ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂಬ ಲೆಕ್ಕಚಾರವನ್ನೂ ಮೇಲ್ವರ್ಗದವರು ಮಾಡಬಲ್ಲರು. ಈಗಲಾದರೂ ನಮ್ಮ ಸಮುದಾಯದವರು ಜಾಗರೂಕರಾಗದಿದ್ದರೆ, ಸೌಲಭ್ಯಗಳಿಂದ ವಂಚಿತರಾಗಲಿದ್ದೇವೆ. ಹೀಗಾಗಿ ಹೋರಾಟಕ್ಕೆ ಧುಮುಕಿ ಎಂದು ಸಲಹೆ ನೀಡಿದರು.

ಮುಖಂಡರಾದ ಪ್ರಭುರಾಜ್ ಕೊಡ್ಲಿ, ಮಲ್ಲಿಯಪ್ಪ ಸೊಂಡೂರು, ಹನುಮಂತಪ್ಪ ದುರ್ಗ, ಕೆ.ರಾಜಣ್ಣ, ರುದ್ರಮುನಿ, ಕೆ.ಮಹಲಿಂಗಪ್ಪ, ಕಾಂತರಾಜ್, ಮಲ್ಲಿಕಾರ್ಜುನ್, ಪ್ರೊ.ನಾಗರಾಜ್, ಸಹನಾ, ತಿಪ್ಪಕ್ಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net