

ಚಿತ್ರದುರ್ಗ: ಸುಪ್ರೀ ಕೋರ್ಟ್ ತೀರ್ಪಿನಂತೆ ಒಳ ಮೀಸಲಾತಿ ಜಾರಿಗೊಳಿಸದಿದ್ದರೆ, ಆಯಾ ಜಿಲ್ಲೆ ಪ್ರವೇಶಿಸದಂತೆ ಜನಪ್ರತಿನಿಧಿಗಳಿಗೆ ಘೇರಾವ್ ಹಾಕಬೇಕು ಎಂದು ವಿಶ್ರಾಂತ ಪ್ರಾಧ್ಯಾಪಕ ಕಲಬುರ್ಗಿಯ ಎಂ.ಟಿ. ಕಟ್ಟಿಮನಿ ಕರೆ ನೀಡಿದರು.
ತುಮಕೂರಿನ ರಾಜ್ಯ ಎಸ್ಸಿ, ಎಸ್ಟಿ ನೌಕರರ ಒಕ್ಕೂಟದಿಂದ ಕ್ರೀಡಾ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಒಳ ಮೀಸಲಾತಿ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಬುದ್ಧ, ಅಂಬೇಡ್ಕರ್, ಪ್ರೊ.ಬಿ.ಕೃಷ್ಣಪ್ಪ, ಪೆರಿಯಾರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದ ಆಶಯ ಈಡೇರಬೇಕಾದರೆ ರಾಜ್ಯ ಸರ್ಕಾರ ಒಳ ಮೀಸಲಾತಿಯನ್ನು ಶೀಘ್ರ ಅನುಷ್ಠಾನಗೊಳಿಸಬೇಕು. ಈಗ ಏಕ ಸದಸ್ಯ ಆಯೋಗ ನೇಮಕವಾಗಿದ್ದರೂ ರಾಜ್ಯದ ಸಿಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಅವರ ಕಡೆ ಕೈಮಾಡಿ ತೋರಿಸಿ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಜಾಣ ನಡೆ ಪ್ರದರ್ಶಿಸುತ್ತಿದ್ದಾರೆ. ಹೀಗಾಗಿ ಸಮುದಾಯ ಇನ್ನೂ ಮೈಮರೆತು ಕೂರುವುದರಲ್ಲಿ ಅರ್ಥವಿಲ್ಲ ಎಂದು ಎಚ್ಚರಿಸಿದರು.
ವಿವಿಧ ಇಲಾಖೆಗಳ 36 ಸಾವಿರ ಹುದ್ದೆಗಳ ನೇಮಕಾತಿಗೆ ಈಗಾಗಲೇ ನೋಟಿಫಿಕೇಷನ್ ಹೊರಡಿಸಲಾಗಿದೆ. ಒಳ ಮೀಸಲಾತಿ ಜಾರಿ ಆಗುವವರೆಗೂ ಎಲ್ಲ ನೇಮಕಾತಿಗೆ ತಡೆಹಿಡಿಯಬೇಕು. ಅನುಷ್ಠಾನ ಸಂಬಂಧ ಸಿಎಂ ಬಳಿ ಬೇಡುವುದನ್ನು ಬಿಟ್ಟರೆ ಪರಿಣಾಮಕಾರಿಯಾಗಿ ಏನು ಮಾಡಬೇಕೆಂಬ ಕುರಿತು ಯಾರೂ ಚಿಂತಿಸುತ್ತಿಲ್ಲ ಎಂದು ಬೇಸರಿಸಿದರು.
ಸಾಮಾಜಿಕ ಸಂಘರ್ಷ ಸಮಿತಿ ರಾಜ್ಯ ಗೌರವಾಧ್ಯಕ್ಷ ಡಿ.ದುರುಗೇಶಪ್ಪ ಮಾತನಾಡಿ, ಪ್ರೊ.ಬಿ.ಕೃಷ್ಣಪ್ಪ ನಾಯಕತ್ವದಲ್ಲಿ ಒಳ ಮೀಸಲಾತಿಗಾಗಿ 30 ವರ್ಷಗಳ ಹಿಂದೆ ಹೋರಾಟ ಆರಂಭಿಸಲಾಯಿತು. ಈವರೆಗೂ ಚಳವಳಿ, ಪ್ರತಿಭಟನೆ ಮುಂದುವರಿದಿದೆ. ಆದರೆ, ಪ್ರತಿಫಲ ಯಾರಿಗೂ ಸಿಕ್ಕಿಲ್ಲ. ಸಮುದಾಯವನ್ನು ಯಾಮಾರಿಸಲು ಮುಂದಾಗಿರುವ ಸಿಎಂ ನಡೆ ವಿರುದ್ಧ ಜಾಗೃತರಾಗಬೇಕಿದೆ ಎಂದು ಸಲಹೆ ನೀಡಿದರು.
ವಿಜಯನಗರದ ಗ್ಯಾನಪ್ಪ ಬಡಿಗೇರ್ ಮಾತನಾಡಿ, ಒಳ ಮೀಸಲಾತಿ ಅನುಷ್ಠಾನ ಆಗುವವರೆಗೂ ಸೂಕ್ತ ಸ್ಥಾನಮಾನ ಸಿಗಲು ಸಾಧ್ಯವಿಲ್ಲ. ಆಯಾ ಜನಸಂಖ್ಯೆಗೆ ಅನುಗುಣವಾಗಿ ಪಾಲು ಸಿಗಲಿದೆ. ಯಾರ ಹಕ್ಕನ್ನು ಯಾರು ಕಸಿದುಕೊಳ್ಳುವುದಿಲ್ಲ. ಸಂಘಟಿತರಾಗಿ ಹೋರಾಡದಿದ್ದರೆ ಆಳುವ ಸರ್ಕಾರಗಳು ಸಮುದಾಯ ಕಡೆಗಣಿಸುವುದರಲ್ಲಿ ಅನುಮಾನವಿಲ್ಲ ಎಂದರು.
ಒಕ್ಕೂಟದ ರಾಜ್ಯಾಧ್ಯಕ್ಷ ಹಿರೇಹಳ್ಳಿ ಮಲ್ಲಿಕಾರ್ಜುನ, ಉಪನ್ಯಾಸಕ ರಾಮಣ್ಣ, ಭೀಮಾಶಂಕರ್ ಇತರರಿದ್ದರು.