ಒಳಮೀಸಲು ಜಾರಿಗೆ ಆಗ್ರಹಿಸಿ ಪ್ರತಿಭಟನೆ

Protest
Published on

ಚಿತ್ರದುರ್ಗ: ರಾಜ್ಯದಲ್ಲಿ ಒಳ ಮೀಸಲಾತಿ ಜಾರಿಗೊಳಿಸುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ.ಕೃಷ್ಣಪ್ಪ ಬಣ), ಮಾದಿಗ ಸಮುದಾಯಗಳ ಸ್ವಾಭಿಮಾನದ ಒಕ್ಕೂಟ ಎರಡೂ ಸಂಘಟನೆಗಳ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.

ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ವಿಳಂಬ ನೀತಿ ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಸೂಕ್ತ ದತ್ತಾಂಶ ಪರಿಗಣಿಸಿ ತ್ವರಿತ ಅನುಷ್ಠಾನಕ್ಕೆ ಮುಂದಾಗಬೇಕೆಂದು ಸಿಎಂಗೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.

ದಸಂಸ ಜಿಲ್ಲಾ ಸಂಚಾಲಕ ಕೆಂಗುಂಟೆ ಜಯಪ್ಪ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಒಳ ಮೀಸಲು ಜಾರಿಗೊಳಿಸುವ ವಿಶ್ವಾಸವಿತ್ತು. ಆದರೀಗ ದತ್ತಾಂಶಗಳ ನೆಪ ಹೇಳಿ ಕಾಲಹರಣ ಮಾಡುತ್ತಿದ್ದಾರೆ. ಕಾಂಗ್ರೆಸ್ ಮಾದಿಗರ ಪರವಾಗಿಲ್ಲ. ಆ ಪಕ್ಷದ ರಾಜಕಾರಣಿಗಳ ನಿಜ ಬಣ್ಣವೀಗ ಬಯಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನ್ಯಾ. ನಾಗಮೋಹನ್ ದಾಸ್ ವರದಿಗೆ ಕಾಯುವ ಅಗತ್ಯವಿಲ್ಲ. ಈ ಹಿಂದೆ 7 ವರ್ಷ ಅಧ್ಯಯನ ನಡೆಸಿದ ನ್ಯಾ. ಎ.ಜೆ.ಸದಾಶಿವ ಆಯೋಗದ ದತ್ತಾಂಶಗಳಿರುವ ವರದಿಯನ್ವಯ ಜಾರಿಗೊಳಿಸಬಹುದು. ಅಲ್ಲದೆ, ಇದೇ ವರದಿಯ ವರ್ಗೀಕರಣದ ಶಿಫಾರಸು ಪರಿಗಣಿಸಿ, ಹೆಚ್ಚಾಗಿರುವ ಮೀಸಲಾತಿಯ ಶೇ 17ರ ಅನುಪಾತದಲ್ಲಿ ಹೆಚ್ಚುವರಿ ಶೇ 2ರಷ್ಟನ್ನು ಜಾತಿ ಜನಸಂಖ್ಯೆಗೆ ಅನುಗುಣವಾಗಿ ಎಬಿಸಿಡಿ ಗುಂಪುಗಳಿಗೆ ಸಮಾನವಾಗಿ ಹಂಚಬೇಕು. ಅದರಲ್ಲಿ ಮಾದಿಗ ಮತ್ತು ಸಂಬಂಧಿತ ಸಮುದಾಯಗಳಿಗೆ ಶೇ 7ರಷ್ಟು ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.

ಈವರೆಗೂ ರಾಜ್ಯದಲ್ಲಿ ಆಡಳಿತ ನಡೆಸಿದ ಎಲ್ಲ ಪಕ್ಷಗಳು ಮಾದಿಗ ಸಮುದಾಯವನ್ನು ವಂಚಿಸಿಕೊಂಡು ಬಂದಿವೆ. ಒಳ ಮೀಸಲಾತಿ ಅನುಷ್ಠಾನಕ್ಕೆ ಮುಂದಾಗದಿದ್ದರೆ, ಸರ್ಕಾರ ಪತನ ಆಗುವವರೆಗೂ ಹೋರಾಡುತ್ತೇವೆ. ಸಿಎಂ ಮನೆಗೂ ಮುತ್ತಿಗೆ, ೇರಾವ್ ಹಾಕಲು ರಾಜ್ಯದೆಲ್ಲ ಮಾದಿಗ ಸಮುದಾಯದ ಸಂಘಟನೆಗಳು ಸಜ್ಜಾಗಿವೆ ಎಂದು ಎಚ್ಚರಿಸಿದರು.

ಒಕ್ಕೂಟದ ರಾಜ್ಯ ಕಾರ್ಯದರ್ಶಿ ಭೀಮನಕೆರೆ ಶಿವಮೂರ್ತಿ ಮಾತನಾಡಿ, ಸಿಎಂ ಒಳಗೊಂಡು ಕಾಂಗ್ರೆಸ್ಸಿಗರು ಎಸ್ಸಿಯಲ್ಲಿನ 101 ಉಪ ಜಾತಿಗಳ ಜನರ ಕಿವಿಗೆ ಹೂವು ಮುಡಿಸುವ ಕೆಲಸ ಕೈಬಿಟ್ಟು ತಕ್ಷಣ ಒಳಮೀಸಲಾತಿ ಜಾರಿಗೊಳಿಸಬೇಕು. ಸಚಿವ ಸಂಪುಟ ನಿರ್ಣಯದಂತೆ ಜಾರಿಯಾಗುವವರೆಗೂ ಖಾಲಿ ಇರುವ 37 ಸಾವಿರ ಹುದ್ದೆಗಳ ನೇಮಕಾತಿ ತಡೆಹಿಡಿಯಬೇಕು ಎಂದು ಒತ್ತಾಯಿಸಿದರು.

49 ಅಲೆಮಾರಿ ಸಮುದಾಯಗಳನ್ನು ಪ್ರತ್ಯೇಕವಾಗಿ ಗುರುತಿಸಿ ಶೇ. 1ಕ್ಕಿಂತ ಹೆಚ್ಚು ಒಳ ಮೀಸಲಾತಿ ನೀಡಿ, ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಎಸ್ಸಿಇಪಿ, ಟಿಎಸ್‌ಪಿ ಅನುದಾನದಲ್ಲಿ ಮಾದಿಗ, ಸಮಗಾರ, ಡೋಹರ, ಮಚಗಾರ ಜಾತಿಗಳ ಜನಸಂಖ್ಯೆ ಆಧಾರದ ಮೇಲೆ ಪ್ರತ್ಯೇಕವಾಗಿ 1ಸಾವಿರ ಕೋಟಿ ರೂ. ಅನುದಾನ ಮೀಸಲಿಟ್ಟು ಸಮರ್ಪಕವಾಗಿ ವೆಚ್ಚ ಮಾಡಲು ಕ್ರಮವಹಿಸಬೇಕು ಎಂದು ಕೋರಿದರು.

ಸಂಘಟನೆಗಳ ಮುಖಂಡರಾದ ಸುಂದರೇಶ್, ಲಕ್ಷ್ಮಮ್ಮ, ನವೀದ್, ಕೆ.ಎನ್.ದೊಡ್ಡೊಟ್ಟೆಪ್ಪ, ಮಹಾಂತೇಶ್ ಕೂನಬೇವು, ಎನ್.ಪ್ರಕಾಶ್, ಕೆ.ಪಿ.ಶ್ರೀನಿವಾಸ್, ಮಹಾಲಿಂಗಪ್ಪ, ಹನುಮಂತರಾಜು, ಎಚ್.ಆರ್.ಶ್ರೀನಿವಾಸ್, ಹನುಮಂತರಾಯ, ಶಿವಮ್ಮ, ರಾಮಸ್ವಾಮಿ, ಕೆ.ಆರ್.ರಘುನಾಥ್, ರಂಗಸ್ವಾಮಿ, ಮಹಂತ, ಎಚ್.ಶಿವಮೂರ್ತಿ, ಆರ್.ಅಂಜನಕುಮಾರ್, ಎಚ್.ತಿಪ್ಪೇಶ್, ಎಸ್.ಎನ್.ಕದುರಪ್ಪ, ಕೆ.ಆರ್.ಸುಂದರಮೂರ್ತಿ, ಎಚ್.ಶ್ರೀನಿವಾಸ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net