

ಚಿತ್ರದುರ್ಗ: ಸುಪ್ರೀಂ ಕೋರ್ಟ್‌ನ 7 ನ್ಯಾಯಾಧೀಶರ ಪೀಠವು ಇ.ವಿ.ಚಿನ್ನಯ್ಯ ತೀರ್ಪನ್ನು ರದ್ದುಗೊಳಿಸಿ, ದೇವೇಂದ್ರ ಸಿಂಗ್ ಪ್ರಕರಣದ ತೀರ್ಪನ್ನು ಎತ್ತಿಹಿಡಿದಿರುವುದನ್ನು ಮಾದಿಗ ಸಮುದಾಯದ ಮಠಾಧೀಶರು, ಹಾಲಿ-ಮಾಜಿ ಜನಪ್ರತಿನಿಧಿಗಳು ಸ್ವಾಗತಿಸಿದರೆ, ಸಂಘಟನೆಗಳ ಪದಾಧಿಕಾರಿಗಳು ಸಂಭ್ರಮ ಆಚರಿಸಿದ್ದಾರೆ.
ಒಳ ಮೀಸಲು ವರ್ಗೀಕರಣ ಪರ ಸುಪ್ರೀಂ ಕೋರ್ಟ್ ಗುರುವಾರ ತೀರ್ಪು ಪ್ರಕಟಿಸುತ್ತಿದ್ದಂತೆ ಜಿಲ್ಲಾದ್ಯಂತ ದಲಿತ ಸಂಘಟನೆಗಳ ಪದಾಧಿಕಾರಿಗಳು ಬೀದಿಗಿಳಿದು ಸಂಭ್ರಮಿಸಿದರು. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಕೆಲವೆಡೆ ಮೆರವಣಿಗೆ ನಡೆಸಿ, ಪಟಾಕಿ ಸಿಡಿಸಿ ಕುಣಿದು ಕುಪ್ಪಳಿಸಿದರು.
ವಿವಿಧ ದಲಿತ ಸಂಘಟನೆಗಳಿಂದ ಚಿತ್ರದುರ್ಗದ ಅಂಬೇಡ್ಕರ್ ವೃತ್ತ ದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.
ದಲಿತ ಸಂಘ ರ್ಷ ಸಮಿತಿ ಮೀಸಲಾತಿ ಅಧ್ಯಕ್ಷ ವೈ.ರಾಜಣ್ಣ ಮಾತನಾಡಿ, ತೀರ್ಪು ಸ್ವಾಗತಾರ್ಹ, ಒಳ ಮೀಸಲು ಹೋರಾಟದಲ್ಲಿ 7 ಮಂದಿ ಹುತಾತ್ಮರಾಗಿದ್ದು, ಅವರ ಸ್ಮರಣೆ ಅಗತ್ಯ ಎಂದರು.
ಇ.ವಿ.ಚೆನ್ನಯ್ಯ ವರ್ಸಸ್ ತಮಿಳುನಾಡು ಸರ್ಕಾರ ಪ್ರಕರಣದ, ಐವರ ಸಾಂವಿಧಾನಿಕ ಪೀಠದ ತೀರ್ಪನ್ನು ರದ್ದುಗೊಳಿಸಿರುವ ಸುಪ್ರೀಂ ಕೋರ್ಟ್‌ನ ಏಳು ಮಂದಿ ಸದಸ್ಯರ ಪೀಠ, ಅಂಬೇಡ್ಕರ್ ಅವರ ಸಂವಿಧಾನದಂತೆ ಆಶಯ ಸಮಾನತೆ, ಹಂಚಿ ಉಣ್ಣುವ ಪ್ರಕ್ರಿಯೆಯಾಗಿ ನ್ಯಾಯ ನೀಡಿದೆ. ತೀರ್ಪು ಜಾರಿಯ ಪರಮಾಧಿಕಾರವನ್ನು ರಾಜ್ಯಗಳಿಗೆ ಕೊಟ್ಟಿರುವುದು ಉತ್ತಮ ನಡೆ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ ನ್ಯಾ. ಸದಾಶಿವ ಆಯೋಗದ ವರದಿಯನ್ನು ರಾಜ್ಯ ಸರ್ಕಾರ ಯಥಾವತ್ತಾಗಿ ಜಾರಿಗೊಳಿಸಬೇಕು. ನಿರ್ಲಕ್ಷಿೃಸಿದರೆ ಹೋರಾಟ ಖಚಿತ ಎಂದು ಎಂದು ಎಚ್ಚರಿಸಿದರು.
ನಗರಸಭೆ ಮಾಜಿ ಅಧ್ಯಕ್ಷ ಕೆ.ಮಲ್ಲೇಶಪ್ಪ, ವಿಶ್ವ ಛಲವಾದಿ ಮಹಾಸಭಾ ಅಧ್ಯಕ್ಷ ಎನ್. ಛಲವಾದಿ ತಿಪ್ಪೇಸ್ವಾಮಿ, ರಾಜ್ಯ ಮಾದಿಗ ದಂಡೋರ ಸಮಿತಿ ಅಧ್ಯಕ್ಷ ಎಚ್.ಏಕಾಂತಪ್ಪ, ರಾಜ್ಯ ಮಹಾನಾಯಕ ದಲಿತ ಸೇನೆ ಅಧ್ಯಕ್ಷ ಮಂಜುನಾಥ್ ಏ.ತಾಳಿಕೆರೆ, ಕೆ.ಟಿ.ಶಿವಕುಮಾರ್, ಪಿ.ಜಗದೀಶ್ ಕವಾಡಿಗರಹಟ್ಟಿ, ಕೆ.ಎಂ.ಪರಶುರಾಮ್, ಗೂಳಿಹಟ್ಟಿ ಕೃಷ್ಣಮೂರ್ತಿ, ಸಿ.ಕೊಲ್ಲಯ್ಯ, ಪಿ.ಮಂಜುನಾಥ್, ಬಿ.ಅಣ್ಣಪ್ಪ, ಎಂ.ಅಂಜಿನಪ್ಪ, ಮಂಜು ತಿಮ್ಮಪ್ಪನಹಳ್ಳಿ, ರುದ್ರಮುನಿ ತೋಪರಮಾಳಿಗೆ, ಟಿ.ರವಿ ಇತರರಿದ್ದರು.