

ಕಲಬುರಗಿ: ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲು ನೀಡಲು ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಅಧಿಕಾರ ನೀಡಿದ್ದು, ಅದರಂತೆ ರಾಜ್ಯದಲ್ಲಿ ಒಳ ಮೀಸಲು ನೀಡಲು ರಾಜ್ಯ ಸರ್ಕಾರ ದತ್ತಾಂಶ ಸಂಗ್ರಹಿಸಿ ವರದಿ ಸಲ್ಲಿಸಲು ನೇಮಿಸಿರುವ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ಏಕಸದಸ್ಯ ಆಯೋಗವೂ ವಿಳಂಬ ಮಾಡದೇ ಗಡುವಿನಲ್ಲಿ ವರದಿ ಸಲ್ಲಿಸಬೇಕು ಎಂದು ದಲಿತ ಮಾದಿಗ ಸಮನ್ವಯ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಜವಳಿ ಆಗ್ರಹಿಸಿದರು.
ನ್ಯಾ.ನಾಗಮೋಹನದಾಸ ಆಯೋಗಕ್ಕೆ ಮೂರು ತಿಂಗಳ ಗಡುವು ನೀಡಿದ್ದು, ಇದೀಗ ಗಡುವು ಪೂರ್ಣಗೊಳ್ಳಲು ಬಂದಿದೆ. ಆದರೆ ಗಡುವಿನೊಳಗೆ ವರದಿ ಸಲ್ಲಿಸಲು ಆಗದಿದ್ದರೆ ಕಾಲಾವಧಿ ವಿಸ್ತರಿಸಲು ಸರ್ಕಾರಕ್ಕೆ ಸಮಯ ಕೇಳಲಾಗುವುದು ಎಂದು ನಾಗಮೋಹದಾಸ ಅವರು ಹೇಳಿದ್ದು, ಇದು ವಿಳಂಭ ನೀತಿಯಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಮೂರು ತಿಂಗಳಲ್ಲಿ ವರದಿ ಸಲ್ಲಿಸಬೇಕು. ವಿನಾಕಾರಣ ವಿಳಂಬ ಮಾಡಿ ಸಮಯ ಕೇಳುತ್ತ ಹೋದರೆ ಅಷ್ಟರಲ್ಲಿಯೇ ಜಿಪಂ, ತಾಪಂ ಚುನಾವಣೆಗಳು ಘೋಷಣೆ ಸಾಧ್ಯತೆ ಇದೆ. ನೀತಿ ಸಂಹಿತೆ ಜಾರಿಯಾದರೆ ಮಾದಿಗ ಸಮಾಜದ ೩೦ ವರ್ಷದ ಬೇಡಿಕೆ ಮತ್ತಷ್ಟು ವಿಳಂಬವಾಗಲಿದೆ. ಕೂಡಲೇ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ ಅವರು ಸರ್ಕಾರದ ಗಡುವಿನ ಒಳಗೆ ವರದಿಯನ್ನು ಸರ್ಕಾರಕ್ಕೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.
ಪ್ರಮುಖರಾದ ರವಿ ಬೆಳಮಗಿ, ಶ್ರೀಮಂತ ಭಂಡಾರಿ, ಅಮೃತ ಕೊರಳ್ಳಿ, ಶರಣಬಸಪ್ಪ ಭಜಂತ್ರಿ, ಶಾಂತಕುಮಾರ ತಾರಫೈಲ್ ಇತರರಿದ್ದರು.
ತೆಲಂಗಾಣ ಸರ್ಕಾರಕ್ಕೆ ಧನ್ಯವಾದ: ಸುಪ್ರೀಂ ಕೋರ್ಟ್ ಆದೇಶದಂತೆ ತೆಲಂಗಾಣ ಸರ್ಕಾರದ ಮುಖ್ಯಮಂತ್ರಿ ರೇವಂತರೆಡ್ಡಿ ಅವರು ಒಳ ಮೀಸಲು ನೀಡಿ, ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದ್ದು, ಸಮಾಜದ ಪರ ಧನ್ಯವಾದ ಹೇಳಿದರು. ಎಬಿಸಿಡಿ ವರ್ಗೀಕರಣ ಮಾಡಿ, ಸದನದಲ್ಲಿ ಒಪ್ಪಿಗೆ ಪಡೆದು ಪರಿಶಿಷ್ಟ ಜಾತಿಗಳಲ್ಲಿನ ೫೯ ಜಾತಿಗಳಲ್ಲಿ ಮೂರು ವಿಭಾಗ ಮಾಡಿ ಎ ಗುಂಪಿನ (ಸಂಚಾರ ಜಾತಿ) ೧೫ ಉಪ ಜಾತಿಗಳಿಗೆ ಶೇ.೧, ಬಿ.ಗುಂಪಿನ ೧೮ ಉಪ ಜಾತಿಗಳಿಗೆ (ಮಾದಿಗರು) ಶೇ.೯, ಸಿ ಗುಂಪಿನ ಉಪ ಜಾತಿಗಳಿಗೆ ಶೇ.೫ ಮೀಸಲು ಹಂಚಿಕೆ ಮಾಡಿ, ಆದೇಶಿಸಿದ್ದು ಐತಿಹಾಸಿಕ ಸ್ವಾಗತಾರ್ಹ ನಿರ್ಧಾರ. ಇದಕ್ಕೆ ಹೋರಾಡಿದ ಮಾದಿಗ ಮಂದಕೃಷ್ಣ ಅವರ ಹೋರಾಟ ಸ್ಮರಿಸಿದರು.