ಚಾಮರಾಜನಗರ: ಒಳಮೀಸಲಾತಿ ಕಲ್ಪಿಸುವ ಉದ್ದೇಶದಿಂದ ಪರಿಶಿಷ್ಟ ಜಾತಿಯಲ್ಲಿನ ಜಾತಿಗಳ ದತ್ತಾಂಶ ಸಂಗ್ರಹಕ್ಕಾಗಿ ಮನೆ ಮನೆಗೆ ಭೇಟಿ ನೀಡುವ ಸಮೀಕ್ಷೆ ಅವಧಿಯನ್ನು ಮೇ 25ರವರೆಗೆ ವಿಸ್ತರಿಸಲಾಗಿದೆ.
ನ್ಯಾಯಮೂರ್ತಿ ಡಾ.ಎಚ್.ಎನ್.ನಾಗಮೋಹನ್‌ದಾಸ್ ಏಕ ಸದಸ್ಯ ವಿಚಾರಣಾ ಆಯೋಗವು ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷಾ-2025 ಅನ್ನು ನಡೆಸಲು ಈ ಹಿಂದೆ ನಿಗದಿಯಾಗಿದ್ದ ದಿನಾಂಕಗಳನ್ನು ವಿಸ್ತರಿಸಲಾಗಿದ್ದು, ಈ ಸಂಬಂಧ ಆಯೋಗದ ಕಾರ್ಯದರ್ಶಿಗಳು ಪತ್ರದ ಮೂಲಕ ತಿಳಿಸಿದ್ದಾರೆ. ಈ ಮೊದಲು ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸುವ ಅವಧಿಯನ್ನು ಮೇ 5ರಿಂದ ಮೇ 17ರವರೆಗೆ ನಿಗದಿಪಡಿಸಲಾಗಿತ್ತು. ಪ್ರಸ್ತುತ ಮನೆ ಮನೆಗೆ ಭೇಟಿ ನೀಡುವ ಸಮೀಕ್ಷಾ ಕಾರ್ಯವನ್ನು ಮೇ 25 ರವರೆಗೆ ವಿಸ್ತರಿಸಲಾಗಿದೆ.
ಸಮೀಕ್ಷಾ ಬ್ಲಾಕ್ ವ್ಯಾಪ್ತಿಯಲ್ಲಿ ವಿಶೇಷ ಶಿಬಿರಗಳನ್ನು ಮೂರು ದಿನಗಳ ಕಾಲ ಹಮ್ಮಿಕೊಳ್ಳಲು ಈ ಹಿಂದೆ ಮೇ 19 ರಿಂದ 21ರವರೆಗೆ ದಿನಾಂಕ ನಿಗದಿ ಮಾಡಲಾಗಿತ್ತು. ಪ್ರಸ್ತುತ ಈ ವಿಶೇಷ ಶಿಬಿರವನ್ನು ಮೇ 26ರಿಂದ 28ರವರೆಗೆ ಮರುನಿಗದಿ ಮಾಡಲಾಗಿದೆ. ಆನ್‌ಲೈನ್ ಮೂಲಕ ಸ್ವಯಂ ಘೋಷಣೆ ಮಾಡಿಕೊಳ್ಳಲು ಈ ಹಿಂದೆ ಮೇ 19 ರಿಂದ 23ರವರೆಗೆ ದಿನಾಂಕ ನಿಗದಿ ಮಾಡಲಾಗಿತ್ತು. ಪ್ರಸ್ತುತ ಸ್ವಯಂ ಘೋಷಣೆ ಮಾಡಿಕೊಳ್ಳಲು ಮೇ 19ರಿಂದ 28ರವರೆಗೆ ಮರುನಿಗದಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.