'ಒಳಮೀಸಲಾತಿ' ದಲಿತರ ಒಡಲು ಮಮಕಾರದಿಂದ ಕೂಡಿಲ್ಲ: ಕೋಟಿಗಾನಹಳ್ಳಿ ರಾಮಯ್ಯ

mysore
Published on

ಮೈಸೂರು: ಪರಿಶಿಷ್ಟ ಜಾತಿಯ ಒಳಮೀಸಲಾತಿಯ ಪ್ರಸಕ್ತ ವಿದ್ಯಮಾನವು ದಲಿತರ ಒಡಲು ಮಮಕಾರದಿಂದ ಕೂಡಿಲ್ಲ ಎಂಬುದನ್ನು ತೋರಿಸುತ್ತಿದೆ. ಈ ಒಡಲಿನಲ್ಲೂ ದೊಡ್ಡ ದೋಷ ಇದೆ ಎಂದು ಸಾಹಿತಿ, ಸಂಸ್ಕೃತಿ ಚಿಂತಕ ಕೋಟಿಗಾನಹಳ್ಳಿ ರಾಮಯ್ಯ ಹೇಳಿದರು.

ಜೋಳಿಗೆ ಪ್ರಕಾಶನ, ಚಾಮರಾಜನಗರದ ಅಭ್ಯಾಸಿ ಟ್ರಸ್ಟ್ ಸಹಯೋಗದಲ್ಲಿ ರಂಗಾಯಣದ ಶ್ರೀರಂಗದಲ್ಲಿ ಭಾನುವಾರ ಆಯೋಜಿಸಿದ್ದ ಮಂಜು ಕೋಡಿಉಗನೆ ಅವರ ‘ಬೋಧಿ ವೃಕ್ಷದ ಹಾಡು’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇದೀಗ ನಾಲಿಗೆ ಸತ್ತು ಹೋಗಿದೆ. ಒಳಮೀಸಲಾತಿ ಬೆಳವಣಿಗೆಗಳು ದಲಿತರ ಒಡಲು ನಾವು ಅಂದುಕೊಂಡಂತಿಲ್ಲ. ಇಷ್ಟು ದಿನ ನಾವುಗಳೆಲ್ಲ ಭ್ರಮೆಯಲ್ಲಿದ್ದೆವು ಎಂದರು.

ಒಳ ಮೀಸಲಾತಿಯಲ್ಲಿ ಮೇಲುಗೈ ಸಾಧಿಸಿರುವ ಒಂದು ಸಮುದಾಯ ವಿಜಯೋತ್ಸವ ಆಚರಿಸಿ ಸಿಎಂ ಭಾವಚಿತ್ರಕ್ಕೆ ಕ್ಷೀರ ಅಭಿಷೇಕ ಮಾಡಿದೆ. ಇನ್ನೊಂದೆಡೆ, ಕೇವಲ 8 ಜನರಿರುವ ಜಾತಿಯ ಮಹಿಳೆಯೊಬ್ಬರು ಪ್ರಭುತ್ವದ ವಿರುದ್ಧ ಧಿಕ್ಕಾರ ಕೂಗುತ್ತಿದ್ದಾರೆ. ಇವೆರಡು ಚಿತ್ರಗಳು ಕಾಡುತ್ತಿವೆ ಎಂದರು.

ಅಂಬೇಡ್ಕರ್ ಅವರು ತಮ್ಮ ಪತ್ನಿಗೆ ಬರೆದ ಪತ್ರದಲ್ಲಿ ‘ಬಲಗೈಯಲ್ಲಿ ಕಣ್ಣೀರು ಒರೆಸಿಕೊಂಡು, ಎಡಗೈಯಲ್ಲಿ ಬರೆಯುತ್ತಿರುವೆ’ ಎಂದು ಮಾರ್ಮಿಕವಾಗಿ ಹೇಳಿದ್ದರು. ಅದೇ ಸ್ಥಿತಿ ಇದೀಗ ನಿರ್ಮಾಣವಾಗಿದೆ. 50 ವರ್ಷ ದಲಿತ ಪ್ರಜ್ಞೆ, ಸಂವೇದನೆ ಈಗಿನ ಸಮಕಾಲಿನದಲ್ಲಿ ಬೇರೆ ಏನ್ನನ್ನೋ ಬೇಡುತ್ತಿದೆ ಎಂದು ಹೇಳಿದರು.

ಜಾತಿ ವ್ಯವಸ್ಥೆಯನ್ನು ದೋಣಿಗೆ ಹೋಲಿಕೆ ಮಾಡಿದ್ದ ಅಂಬೇಡ್ಕರ್ ಅವರು, ಜಾತಿ ಹಿತಾಸಕ್ತಿಗಳು ದೋಣಿಗೆ ತೂತು ಕೊರೆಯುತ್ತಿವೆ. ಹೀಗಾದರೆ, ದೋಣಿ ಬಹಳ ದೂರಕ್ಕೆ ಹೋಗುವುದಿಲ್ಲ. ಮುಳುಗಿಹೋಗುತ್ತದೆ ಎಂದು 1919ರಲ್ಲೇ ಎಚ್ಚರಿಕೆ ನೀಡಿದ್ದರು. ಅದೀಗ ನಡೆಯುತ್ತಿದೆ. ಜಾತಿಗ್ರಸ್ತ ದೋಣಿ ದೂರ ಸಾಗುತ್ತಿಲ್ಲ ಎಂದು ಹೇಳಿದರು.

ದಲಿತರು ಕಳೆದ 50 ವರ್ಷ ಒಂದೇ ಛತ್ರಿಯಡಿ ಹೋರಾಡಿದರು. ಆದರೀಗ ಅದು ಬೇರೆ ದಿಕ್ಕಿನ ಕಡೆ ಚಲಿಸುತ್ತಿದೆ. ನಾವು ಇಷ್ಟು ದಿನ ಅಂದುಕೊಂಡಿರುವುದೆಲ್ಲವೂ ಭ್ರಮೆ ಎಂದು ಈಗ ಅನಿಸುತ್ತಿದೆ.

ದಲಿತರದ್ದು ಕಲ್ಮಷವಿಲ್ಲದ ಒಡಲು ಅಲ್ಲ. ತಾಯಿ ರೀತಿಯ ಮಡಿಲೂ ಅಲ್ಲ. ಈ ಹಿಂದೆ ತುತ್ತು ಅನ್ನಕ್ಕೂ ಗತಿ ಇರಲಿಲ್ಲ. ಈಗ ಸಿಕ್ಕಿರುವ ತುತ್ತು ಅನ್ನವನ್ನು ಹಂಚಿಕೊಳ್ಳಲಾರದಂತಹ ಸ್ಥಿತಿ ತಲುಪಿದ್ದೇವೆ. ಇದು ದುರಂತವೇ ಸರಿ ಎಂದು ಕಳವಳ ವ್ಯಕ್ತಪಡಿಸಿದರು.

ಸೃಜನಶೀಲ ಕೃತಿಯ ಪ್ರಾಣವೇ ಸಮಕಾಲಿನತೆ. ಅದುವೇ ಅಳತೆಗೋಲು. ಈ ಕೃತಿ ಸಮಕಾಲಿನವಾಗಿದೆ. ಜತೆಗೆ ಅನೇಕ ಪ್ರಶ್ನೆಗಳನ್ನು ಹಾಕುತ್ತದೆ. ವಿವಿಧ ವಿಷಯಗಳ ಕುರಿತು ಒಳನೋಟವನ್ನೂ ಹೊಂದಿದೆ ಎಂದು ಅಭಿಪ್ರಾಯಪಟ್ಟರು.

ಸಂಸ್ಕೃತಿ ಚಿಂತಕ ಬಿ.ಮಹೇಶ್ ಹರವೆ, ವಿಮರ್ಶಕ ವಿ.ಎಲ್.ನರಸಿಂಹಮೂರ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ರವಿಕುಮಾರ್ ಬಾಗಿ, ಕೃತಿ ಲೇಖಕ ಮಂಜು ಕೋಡಿಉಗನೆ, ಅಭ್ಯಾಸಿ ಟ್ರಸ್‌ನ ಅಧ್ಯಕ್ಷ ಕಿರಣ್ ಗಿರ್ಗಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net