

ಚಿತ್ರದುರ್ಗ: ಸಚಿವ ಸ್ಥಾನ ನನಗೆ ಬೇಕಿಲ್ಲ. ಮಾದಿಗರು ಸೇರಿ ಪರಿಶಿಷ್ಟ ಜಾತಿಯ ಎಲ್ಲ ಸಮುದಾಯದವರಿಗೂ ಅವರವರ ಜನಸಂಖ್ಯೆಗೆ ಅನುಗುಣವಾಗಿ ಒಳ ಮೀಸಲಾತಿ ಜಾರಿಯಾದರೆ, ಅದೇ ನನಗೆ ಬಹುದೊಡ್ಡ ಸ್ಥಾನಮಾನ ಸಿಕ್ಕಂತೆ ಎಂದು ಮಾಜಿ ಸಚಿವ ಎಚ್. ಆಂಜನೇಯ ಹೇಳಿದರು.
ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಎಂದು ಶಾಲಾ-ಕಾಲೇಜು ಸೇರಿ ಯಾವುದರಲ್ಲಾಗಲಿ ದಾಖಲಾತಿ ಇದ್ದರೂ ಒಳ ಮೀಸಲಾತಿ ಲಾಭ ಪಡೆಯಬೇಕಾದರೆ, ಸಮೀಕ್ಷೆಯಲ್ಲಿ ಸಮುದಾಯದವರು ಮೂಲ ಜಾತಿ 061 ಮಾದಿಗ ಎಂದೇ ಬರೆಸುವಂತೆ ಬುಧವಾರ ಪತ್ರಿಕಾ ಹೇಳಿಕೆಯಲ್ಲಿ ಮನವಿ ಮಾಡಿದರು.
ಸಂವಿಧಾನ ರಚಿಸುವ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ನೊಂದ ಸಮುದಾಯಗಳ ಆಶಾಕಿರಣವಾದರು. ಅದೇ ರೀತಿ ಅಸ್ಪಶ್ಯರು, ಅಶಕ್ತ ಜನರ ಬದುಕು ಉತ್ತಮ ಪಡಿಸಲು ಸಿಎಂ ಸಿದ್ದರಾಮಯ್ಯ ಕೆಲಸ ಮಾಡುತ್ತಿದ್ದಾರೆ. ದೇಶದಲ್ಲೇ ಎಸ್ಸಿಎಸ್ಪಿ, ಟಿಎಸ್ಪಿ ಕಾಯ್ದೆ ಸೇರಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಹೀಗಾಗಿ ಎರಡನೇ ಅಂಬೇಡ್ಕರ್ ಎಂದು ಹೇಳಿದೆ. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.
ಬೇಡ ಜಂಗಮರೆಂದು ವೀರಶೈವ ಲಿಂಗಾಯತರಲ್ಲಿ ಕೆಲವರು ಸಮೀಕ್ಷೆಯಲ್ಲಿ ಸುಳ್ಳು ದಾಖಲೆ ನಮೂದಿಸುತ್ತಿದ್ದಾರೆ. ಈಗಾಗಲೇ ಜಾತಿ ಪ್ರಮಾಣ ಪತ್ರ ಪಡೆದಿರುವ ಕುರಿತು ಹಲವು ಬಾರಿ ಖಂಡಿಸಿದ್ದೇನೆ. ಈಗ ನಮ್ಮ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರು ಹೊಸಪೇಟೆ ಸಮಾವೇಶದಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಇದರಿಂದ ನಮ್ಮಂತಹವರ ನಡೆಗೆ ಆನೆಬಲ ಬಂದಂತಾಗಿದೆ ಎಂದರು.
ಸರ್ಕಾರ ಮತ್ತು ಪಕ್ಷಕ್ಕೂ ಈ ಸಂಬಂಧ ಅವರು ಸೂಚಿಸಿದ್ದು, ಯಾವ ಕಾರಣಕ್ಕೂ ಎಸ್ಸಿ ಮೀಸಲಾತಿ ಕದಿಯುವ ಯತ್ನಕ್ಕೆ ಅವಕಾಶ ನೀಡಬಾರದು. ಬೇಡ ಜಂಗಮರು ನಾವೆಂದು ಸುಳ್ಳು ಬರೆಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿರುವುದು ಸ್ವಾಗತರ್ಹ ಎಂದು ಹೇಳಿದರು.
ವಿಧಾನಸಭಾ ಚುನಾವಣೆ ವೇಳೆ ವರಿಷ್ಠರ ಮಾತು ಕೇಳದೆ ಸ್ಪರ್ಧಿಸಿ ಸೋತಿದ್ದೇನೆ. ಈಗ ಎಂಎಲ್ಸಿ, ಸಚಿವ ಸ್ಥಾನ ನೀಡಿ ಎಂದು ಕೇಳಲು ಹೇಗೆ ಸಾಧ್ಯ ಎಂದು ಹೇಳಿಕೆಯಲ್ಲಿ ಪ್ರಸ್ತಾಪಿಸಿದ್ದಾರೆ.