

ಚಿತ್ರದುರ್ಗ: ಅನ್ಯಾಯಕ್ಕೆ ಒಳಗಾಗಿರುವ ಮಾದಿಗ ಸಮುದಾಯದ ಕಣ್ಣೀರು ಒರೆಸಲು ಎರಡ್ಮೂರು ದಿನದೊಳಗೆ ಒಳಮೀಸಲಾತಿ ಜಾರಿಗೊಳಿಸದಿದ್ದರೆ, ಉಪ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಇಡೀ ಸಮುದಾಯ ಮತ ಚಲಾಯಿಸಲಿದೆ ಎಂದು ಜಿಪಂ ಮಾಜಿ ಸದಸ್ಯ ಲಕ್ಷ್ಮಣ್ ಎಚ್ಚರಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಸಿಎಂ ಸಿದ್ದರಾಮಯ್ಯ ಸುಪ್ರೀಂ ಕೋರ್ಟ್ ತೀರ್ಪನ್ನು ನಿಜಕ್ಕೂ ಗೌರವಿಸುವುದಾದರೆ, ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿದ್ದರೆ, ತಕ್ಷಣ ಒಳ ಮೀಸಲು ಅನುಷ್ಠಾನಕ್ಕೆ ತರಲಿ. ಅದನ್ನು ಬಿಟ್ಟು ಕಣ್ಣೊರೆಸುವ ಹೊಸ ಆಯೋಗದ ಗಿಮಿಕ್ ರಾಜಕೀಯ ನಂಬಲು ಸಮುದಾಯದಲ್ಲಿ ದಡ್ಡರ‌್ಯಾರು ಇಲ್ಲ ಎಂದು ಆಕ್ರೊಶ ವ್ಯಕ್ತಪಡಿಸಿದರು.
ಎಂ.ಶಿವಮೂರ್ತಿ ಚಳ್ಳಕೆರೆ ಮಾತನಾಡಿ, ಅನುಷ್ಠಾನಕ್ಕೆ ಸಿಎಂ ಹಿಂದೇಟು ಹಾಕುತ್ತಿದ್ದಾರೆ. ಈಗಾಗಲೇ ಸಾಕಷ್ಟು ಆಯೋಗಗಳ ವರದಿ ಬಳಿಕವೂ ಅ. 28ರ ಸಚಿವ ಸಂಪುಟ ಸಭೆಯಲ್ಲಿ ಮತ್ತೊಂದು ಆಯೋಗ ರಚಿಸುವ ನಾಟಕವೇ ಉತ್ತಮ ನಿದರ್ಶನ ಎಂದು ಕಿಡಿಕಾರಿದರು.
ಸಿಎಂ ಒಂದೊಂದೆಡೆ ವಿಭಿನ್ನ ಹೇಳಿಕೆ ನೀಡುತ್ತ ಮಾದಿಗ ಸಮುದಾಯವನ್ನು ನಿರ್ಲಕ್ಷಿಸುವ ಬದಲು ನ್ಯಾ.ಸದಾಶಿವ ಆಯೋಗದ ವರದಿ ಅನ್ವಯ ಮೊದಲು ಒಳ ಮೀಸಲಾತಿ ಜಾರಿಗೆ ತರಲಿ. ಅದನ್ನು ಬಿಟ್ಟು ವಕೀಲರಾಗಿಯೂ ದತ್ತಾಂಶ, ಡಾಟಾ ಸಂಗ್ರಹಿಸಬೇಕೆಂದು ಕಿವಿಗೆ ಹೂವು ಮುಡಿಸುವುದು ಬೇಡ ಎಂದು ಬೇಸರಿಸಿದರು.
ರಾಜ್ಯದಲ್ಲಿ ಅನುಷ್ಠಾನಕ್ಕೆ ತರುತ್ತೇವೆ ಅಥವಾ ಇಲ್ಲವೆಂಬುದನ್ನು ಸ್ಪಷ್ಟಪಡಿಸಲಿ. ಇಲ್ಲವೆಂದಾದರೆ, ಕಾಂಗ್ರೆಸ್ ಸರ್ಕಾರ ಉರುಳಿಸಲು ಸಮುದಾಯದ ಮುಖಂಡ ಮಂದಕೃಷ್ಣ ಮಾದಿಗ ಮಾದರಿಯಲ್ಲಿ ಹೋರಾಟಕ್ಕೆ ಸಜ್ಜಾಗಲಿದ್ದೇವೆ ಎಂದು ಎಚ್ಚರಿಸಿದರು.
ಕೃಷ್ಣಮೂರ್ತಿ ಗೂಳಿಹಟ್ಟಿ ಮಾತನಾಡಿ, ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದ್ದರೂ ರಾಜ್ಯ ಸರ್ಕಾರ ಮೀನಮೇಷ ಎಣಿಸುತ್ತಿದೆ. ಹರಿಯಾಣ, ತೆಲಂಗಾಣ ಸರ್ಕಾರ ಕೈಗೊಂಡ ದಿಟ್ಟ ನಿರ್ಧಾರದಂತೆ ಇಲ್ಲಿಯೂ ಸಿಎಂ ತೀರ್ಮಾನಿಸಬೇಕು. ಇಲ್ಲದಿದ್ದರೆ, ಜಾರಿವರೆಗೂ ಹೋರಾಟ ನಿಲ್ಲದು ಎಂದರು.
ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಜಿ.ಎಚ್.ಮೋಹನ ಕುಮಾರ್, ಗ್ರಾಪಂ ಮಾಜಿ ಅಧ್ಯಕ್ಷ ಶಂಕರಸ್ವಾಮಿ, ಮಾಜಿ ಸದಸ್ಯ ಮರಿಪಾಲಯ್ಯ, ಮುಖಂಡರಾದ ಡಿ.ಓ.ಮುರಾರ್ಜಿ, ಸಿದ್ದಾರ್ಥ, ಡಿ.ತಿಪ್ಪೇಸ್ವಾಮಿ, ನವೀನ್‌ನಾಯಕ, ಚನ್ನಗಾನಹಳ್ಳಿ ಮಲ್ಲೇಶ್, ಕರಿಕೆರೆ ತಿಪ್ಪೇಸ್ವಾಮಿ, ರವಿಕುಮಾರ್ ಇತರರಿದ್ದರು.