ಒಳಮೀಸಲಾತಿ ಜಾರಿಗೆ ಸದನದಲ್ಲಿ ಪ್ರಸ್ತಾಪಿಸಿ

KDR manavi
ಕಡೂರಿನಲ್ಲಿ ಶಾಸಕ ಕೆ.ಎಸ್.ಆನಂದ್‌ಗೆ ಮಾದಿಗ ಸಮಾಜದ ಮುಖಂಡರು ಮನವಿ ಸಲ್ಲಿಸಿದರು. ಶೂದ್ರ ಶ್ರೀನಿವಾಸ್, ಬಿ.ಟಿ.ಚಂದ್ರಶೇಖರ್, ಕೃಷ್ಣಪ್ಪ, ಎನ್.ಗಿರೀಶ್, ಹುಲ್ಲೇಹಳ್ಳಿ ಲಕ್ಷ್ಮಣ್, ಸುರೇಶ್, ರಾಘವೇಂದ್ರ ಇತರರಿದ್ದರು.
Published on

ಕಡೂರು: ಸದಾಶಿವ ಆಯೋಗದ ಒಳಮೀಸಲಾತಿ ಸರ್ವರಿಗೂ ಸಮಪಾಲ ಸಮಬಾಳು ಎಂಬ ಸಂವಿಧಾನದ ಮೂಲ ಆಶಯವಾಗಿದ್ದು, ಪರಿಶಿಷ್ಟ ಜಾತಿ ಸಮುದಾಯಗಳಿಗೆ ಒಳ ಮೀಸಲಾತಿಯ ಫಲ ದೊರಕಲು ಬೆಳಗಾವಿ ಅಧಿವೇಶನದಲ್ಲಿ ಶಾಸಕರು ಗಮನಸೆಳೆಯುವಂತೆ ಒತ್ತಾಯಿಸಿ ತಾಲೂಕು ಮಾದಿಗ ಸಮಾಜ ಶಾಸಕ ಕೆ.ಎಸ್.ಆನಂದ್ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.

ಮಾದಿಗ ಸಮಾಜದ ಹಿರಿಯ ಮುಖಂಡ ಶೂದ್ರ ಶ್ರೀನಿವಾಸ್ ಮಾತನಾಡಿ, ಸುಪ್ರೀಂಕೋರ್ಟ್ ತೀರ್ಪು ಬಂದು 4 ತಿಂಗಳು ಕಳೆದರೂ ಒಳಮೀಸಲಾತಿ ಜಾರಿ ಮಾಡದೆ ಕಾಲಹರಣ ಮಾಡಲಾಗುತ್ತಿದೆ. ಈ ಬಗ್ಗೆ ಹಕ್ಕೊತ್ತಾಯ ಮಂಡಿಸಲು ಡಿ.16ರಂದು ಬೆಳಗಾವಿಯಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ರಾಜ್ಯದ ನಾನಾ ಭಾಗಗಳಿಂದ ಸಮುದಾಯದವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಮತ್ತೋರ್ವ ಮುಖಂಡ ಬಿ.ಟಿ.ಚಂದ್ರಶೇಖರ್ ಮಾತನಾಡಿ, ಒಳಮೀಸಲಾತಿ ಜಾರಿಯಾಗುವವರೆಗೂ ಸರ್ಕಾರ ಯಾವುದೇ ನೇಮಕಾತಿ ಮಾಡುವುದಿಲ್ಲವೆಂದು ಭರವಸೆ ನೀಡಿತ್ತು. ಆದರೆ ಅನೇಕ ಇಲಾಖೆಗಳಲ್ಲಿ ನೇಮಕಾತಿ ಪ್ರವೇಶ ಪರೀಕ್ಷೆ ದಿನಾಂಕ ಪ್ರಕಟಿಸಿವೆ. ಈ ಎಲ್ಲ ಅಂಶಗಳನ್ನು ಒಳಗೊಂಡು ರಾಜ್ಯ ಸರ್ಕಾರದ ಗಮನಸೆಳೆಯಲು ಬೆಳಗಾವಿ ಚಲೋ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.

ಮನವಿ ಸ್ವೀಕರಿಸಿದ ಶಾಸಕ ಕೆ.ಎಸ್.ಆನಂದ್ ಮಾತನಾಡಿ, ಶೋಷಿತ ಸಮುದಾಯಗಳು ನ್ಯಾಯಯುತ ಹಕ್ಕು ಕೇಳುತ್ತಿರುವುದು ಸ್ವಾಗತಾರ್ಹ. ರಾಜ್ಯದಲ್ಲಿ ಮೀಸಲಾತಿ ಜಾರಿಗೆ ಅವರದೇ ಸಮಾಜದ ಹಿರಿಯ ಸಚಿವ ಕೆ.ಎಚ್.ಮುನಿಯಪ್ಪ ಸರ್ಕಾರದ ಮಟ್ಟದಲ್ಲಿ ಹೆಚ್ಚು ಒತ್ತಡ ಹಾಕುತ್ತಿದ್ದಾರೆ. ಬೇಡಿಕೆಯನ್ನು ಸದನದ ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡಿದರೆ ಮುಖ್ಯಮಂತ್ರಿ ಅವರನ್ನು ಒತ್ತಾಯಿಸಲಾಗುತ್ತದೆ ಎಂದು ಹೇಳಿದರು.

ಪಟ್ಟಣದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಿ.ಎಚ್.ರಸ್ತೆಯಲ್ಲಿ ತಮಟೆ ಚಳವಳಿ ನಡೆಸಿದರು. ಮಾದಿಗ ಸಮಾಜದ ಮುಖಂಡರಾದ ಕೃಷ್ಣಪ್ಪ, ನಾರಾಯಣಮೂರ್ತಿ, ಬೀರೂರು ಎನ್.ಗಿರೀಶ್, ಬಸವರಾಜ್, ಹುಲ್ಲೇಹಳ್ಳಿ ಲಕ್ಷ್ಮಣ್, ತಿಮ್ಮಯ್ಯ, ರಾಘವೇಂದ್ರ, ಗಂಗರಾಜ್, ಗಣೇಶ್, ವೈ.ಟಿ.ಗೋವಿಂದಪ್ಪ, ಜಗದೀಶ್, ಪ್ರಶಾಂತ್, ಸಗನಪ್ಪ, ಸುರೇಶ್, ವಾಸು, ಬಿದರೆ ಕೃಷ್ಣಮೂರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net