ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ಹೋರಾಟ ತೀವ್ರಕ್ಕೆ ನಿರ್ಧಾರ

Published on

ಮೈಸೂರು: ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕು ಎನ್ನುವ ಸದಾಶಿವ ಆಯೋಗದ ವರದಿ ಜಾರಿಗೊಳಿಸುವ ಜತೆಗೆ, ಒಳ ಮೀಸಲಾತಿ ಜಾರಿಗೆ ತರಬೇಕು ಎಂದು ಒತ್ತಾಯಿಸಿ ಹೋರಾಟ ತೀವ್ರಗೊಳಿಸಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ದಲಿತ ಚಳವಳಿ ನವನಿರ್ಮಾಣ ವೇದಿಕೆ ಮುಖಂಡ ಹರಿಹರ ಆನಂದಸ್ವಾಮಿ ತಿಳಿಸಿದರು.
ಸ್ವಾತಂತ್ರ್ಯ ನಂತರವೂ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ, ರಾಜಕೀಯ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ಸಂವಿಧಾನದ ಆಶಯ ಪೂರ್ಣ ಜಾರಿಯಾಗಿಲ್ಲ. ನ್ಯಾಯ ನೀಡುವಂತೆ ಒತ್ತಾಯಿಸಿ ನಡೆಯುತ್ತಿರುವ ಹೋರಾಟವನ್ನು ಹತ್ತಿಕ್ಕಲು ಯತ್ನಿಸಲಾಗುತ್ತಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಎ.ಜೆ.ಸದಾಶಿವ ಆಯೋಗದ ವರದಿಯಂತೆ ಒಳ ಮೀಸಲು ಜಾರಿಗೆ ಒತ್ತಾಯಿಸಿ ಹರಿಹರದಲ್ಲಿರುವ ಪ್ರೊ.ಬಿ.ಕೃಷ್ಣಪ್ಪ ಅವರ ಸಮಾಧಿ ಬಳಿಯಿಂದ ಬೆಂಗಳೂರಿಗೆ ಪಾದಯಾತ್ರೆ ಹೊರಟವರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿರುವುದು ಖಂಡನೀಯ. ಸರ್ಕಾರದ ಈ ನೀತಿಯ ವಿರುದ್ಧ ಈಗಲಾದರೂ ಎಲ್ಲ ದಲಿತ ಚಳವಳಿಗಳು ಒಗ್ಗಟ್ಟಿನಿಂದ ಹೋರಾಟ ನಡೆಸಬೇಕಿದೆ. ಇಲ್ಲವಾದರೆ ದಲಿತರಿಗೆ ಉಳಿಗಾಲವಿಲ್ಲ ಎಂದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಭೂ ಪರಭಾರೆ ನಿಷೇಧ ಕಾಯ್ದೆಗೆ ತಿದ್ದುಪಡಿ ತಂದು ದಲಿತರ ಭೂ ರಕ್ಷಣೆ ಮಾಡಬೇಕು. ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಜಾರಿಗೆ ತರಬೇಕು, ಸಫಾಯಿ ಕರ್ಮಚಾರಿಗಳನ್ನು ಮುಖ್ಯವಾಹಿನಿಗೆ ತರಲು ಐಪಿಡಿ ಸಾಲಪ್ಪ ವರದಿ ಜಾರಿ ಮಾಡಬೇಕು, ಇಡಬ್ಲುೃಎಸ್ ಮೀಸಲಾತಿ ರದ್ದುಗೊಳಿಸಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ಆಗ್ರಹಿಸಲಾಗುವುದೆಂದು ತಿಳಿಸಿದರು.
ಮುಖಂಡರಾದ ಬಂಗವಾದಿ ನಾರಾಯಣಪ್ಪ, ಹೊರಳವಾಡಿ ನಂಜುಂಡಸ್ವಾಮಿ, ಸಂಘಸೇನಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net