

ಬಸವಕಲ್ಯಾಣ: ಒಳಮೀಸಲಾತಿ ವಿಚಾರದಲ್ಲಿ ಮಾದಿಗರಿಗೆ ಸರ್ಕಾರ ನ್ಯಾಯ ಒದಗಿಸಬೇಕು ಎಂದು ದಲಿತ ವಿಮೋಚನಾ ಸೇನೆ ಸಂಸ್ಥಾಪಕ ಅಧ್ಯಕ್ಷ ಮಾ.ಮುನಿರಾಜು ಹೇಳಿದರು.
ದಲಿತ ವಿಮೋಚನಾ ಸೇನೆಯಿಂದ ದಲಿತ ಚಳವಳಿ ಸಂಸ್ಥಾಪಕ ಪ್ರೊ.ಬಿ.ಕೃಷ್ಣಪ್ಪ ಅವರ ೮೭ನೇ ಜಯಂತಿ ನಿಮಿತ್ತ ಬಿಕೆಡಿಬಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಬಹುಜನ ಸ್ವಾಭಿಮಾನ ಜಿಲ್ಲಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಒಳಮೀಸಲಾತಿ ವಿಚಾರದಲ್ಲಿ ಸರ್ಕಾರದಿಂದ ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗ ರಚಿಸಿದ್ದು, ದಾರಿ ತಪ್ಪಿಸುವ ಕೆಲಸ ಆಗಬಾರದು ಎಂದರು.
ಡಾ.ಬಿ.ಆರ್. ಅಂಬೇಡ್ಕರ್ ಆಲೋಚನೆ ಮೈಗೂಡಿಸಿಕೊಂಡು ಅವರ ಸಿದ್ಧಾಂತ ಮಾರ್ಗದಲ್ಲಿ ನಡೆದ ಬಿ.ಕೃಷ್ಣಪ್ಪ ನಾಡಿಗೆ ನೀಡಿದ ಕೊಡುಗೆ, ಮಾಡಿದ ಹೋರಾಟ ಅವಿಸ್ಮರಣೀಯ. ದಲಿತ ಸಂಘರ್ಷ ಸಮಿತಿ ಸ್ಥಾಪಿಸಿದ್ದ ಅವರು ಬೀದರ್‌ನಿಂದ ಚಾಮರಾಜನಗರವರೆಗೆ ಸಂಚರಿಸಿದ್ದರು. ಅವರು ನಡೆಯದ ಜಾಗವಿಲ್ಲ. ಮಾಡದ ಹೋರಾಟವಿಲ್ಲ. ಹೋರಾಟ ಮಾಡಿದವರನ್ನು ನೆನಪಿಸಿಕೊಳ್ಳುವ ಮನೋಸ್ಥಿತಿ ಎಲ್ಲರಲ್ಲಿ ಬೆಳೆಯಬೇಕು ಎಂದು ಹೇಳಿದರು.
ಸೇನೆ ಜಿಲ್ಲಾಧ್ಯಕ್ಷ ಮಾರುತಿ ಸೂರ್ಯವಂಶಿ ಮಾತನಾಡಿ, ಜಿಲ್ಲೆಯಲ್ಲಿ ಸಂಘಟನೆ ಬಲಪಡಿಸಲಾಗುತ್ತಿದೆ. ಮುಂದಿನ ವರ್ಷ ಬಿ.ಕೃಷ್ಣಪ್ಪ ಜಯಂತಿಯನ್ನು ನಗರದಲ್ಲಿ ಅದ್ದೂರಿ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ತಿಳಿಸಿದರು.
ಸೇನೆ ರಾಜ್ಯ ಯುವ ಘಟಕದ ಅಧ್ಯಕ್ಷ ರಾಜಕುಮಾರ ಕಾಣೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ, ಶಿವಶರಣ ಮಾದಾರ ಚನ್ನಯ್ಯ ಗವಿಯನ್ನು ಅಭಿವೃದ್ಧಿಪಡಿಸಬೇಕು. ಸರ್ಕಾರ ಹೊಸ ಸಮುದಾಯ ಭವನಕ್ಕೆ ಸ್ಥಳ ಮತ್ತು ಅನುದಾನ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಮಾದಾರ ಚನ್ನಯ್ಯ ಅರಿವು ಪೀಠದ ಶ್ರೀ ಕಾಂತ ಸ್ವಾಮೀಜಿ ಮಾತನಾಡಿದರು. ನೂಲಿಯ ಚಂದಯ್ಯ ಗವಿಯ ಪೂಜ್ಯ ಶರಣೆ ಚಿತ್ರಮ್ಮಾ ತಾಯಿ ಸಮ್ಮುಖ ವಹಿಸಿದ್ದರು. ರಾಜ್ಯ ಉಪಾಧ್ಯಕ್ಷ ದಯಾನಂದರಾವ ವಕೀಲ, ಪ್ರಧಾನ ಕಾರ್ಯದರ್ಶಿ ರಾಜು, ನಗರಸಭೆ ಸದಸ್ಯೆ ಶಾಂತಮ್ಮ ಲಾಡೆ, ಸೇನೆ ಜಿಲ್ಲಾ ಯುವ ಘಟಕದ ಗೌರವಾಧ್ಯಕ್ಷ ವಿಜಯಭಾಸ್ಕರ್, ಜಿಲ್ಲಾಧ್ಯಕ್ಷ ವಿಕಾಸ ಹಿರೋಲೆ, ತಾಲೂಕು ಅಧ್ಯಕ್ಷ ಸಂತೋಷ ಮುಜನಾಯಕ, ಉಪಾಧ್ಯಕ್ಷ ಸಂಜುಕುಮಾರ ಅಟ್ಟೂರ, ತಾಲೂಕು ಯುವ ಘಟಕದ ಅಧ್ಯಕ್ಷ ಸಚಿನ್ ಮುಜನಾಯಕ, ಮುಖಂಡರಾದ ಮನೋಜ ತಂಬುರ್ಚಿ, ರಾಜಕುಮಾರ ಮುಜನಾಯಕ, ಸುನೀಲ ಹುಡಗಿಕರ್, ಚಂದ್ರಶೇಖರ ಯಾದಗಿರ, ಬಾಬುರಾವ ಯರಬಾಗ, ಗುಂಡಪ್ಪ ಕೋಟೆ, ದತ್ತಾತ್ರೇಯ ದವಲೇಕರ್, ದತ್ತು ಕರ್ಕಿ ಇತರರಿದ್ದರು. ಕೃಷ್ಣಾ ಭಾಗವತ ಹಾಗೂ ನುಮಿತ ಮುಜನಾಯಕ ನಿರೂಪಣೆ ಮಾಡಿದರು.
ದಲಿತ ಚಳವಳಿ ಕಟ್ಟಿದ್ದ ಪ್ರೊ.ಬಿ.ಕೃಷ್ಣಪ್ಪ: ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಲೇ ದಲಿತ ಚಳವಳಿಗಳನ್ನು ಕಟ್ಟಿ ಸಾಮಾಜಿಕ ಅನಿಷ್ಠಗಳ ವಿರುದ್ಧ ಹೋರಾಡಿದ ಮಹಾನುಭಾವರು ಬಿ.ಕೃಷ್ಣಪ್ಪ ಎಂದು ದಲಿತ ವಿಮೋಚನಾ ಸೇನೆ ಸಂಸ್ಥಾಪಕ ಅಧ್ಯಕ್ಷ ಮಾ.ಮುನಿರಾಜು ಹೇಳಿದರು. ಅನ್ಯಾಯದ ವಿರುದ್ಧ ಕೃಷ್ಣಪ್ಪ ನಿರಂತರ ಹೋರಾಟ ನಡೆಸಿದ್ದರು. ವಿದ್ಯಾರ್ಥಿ ಒಕ್ಕೂಟ ಸ್ಥಾಪಿಸಿ ವಿದ್ಯಾರ್ಥಿಗಳಿಗೆ ವಸತಿನಿಲಯ, ವಿದ್ಯಾರ್ಥಿ ವೇತನ ಇತರ ಸೌಲಭ್ಯಕ್ಕಾಗಿ ಧ್ವನಿ ಎತ್ತಿದ್ದರು. ಚಂದ್ರಮುಖಿಯಲ್ಲಿ ಬೆತ್ತಲೆ ಸೇವೆ ವಿರುದ್ಧ ದೊಡ್ಡ ಹೋರಾಟವನ್ನೇ ಮಾಡಿದ್ದರ ಫಲವಾಗಿ ಅನಿಷ್ಠ ಪದ್ಧತಿ ನಿಂತಿದೆ. ದಲಿತರಿಗೆ ಭೂಮಿ ಕೊಡಿಸಲು ಹೋರಾಡಿದ್ದ ಅವರ ಆಲೋಚನೆಯೊಂದಿಗೆ ಮುಂದಡಿ ಇಟ್ಟಿರುವ ದಲಿತ ವಿಮೋಚನಾ ಸೇನೆಯಿಂದ ವಿಚಾರಗಳೊಂದಿಗೆ ರಾಜಿ ಇಲ್ಲದೆ ನಿರಂತರವಾಗಿ ಹೋರಾಟ ಮಾಡಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.
ಒಳಮೀಸಲಾತಿಗಾಗಿ ೩೫ ವರ್ಷಗಳಿಂದ ಹೋರಾಟ ನಡೆದಿದೆ. ಆದರೂ ಸರ್ಕಾರಗಳು ನಮ್ಮ ಪಾಲು ನಮಗೆ ಕೊಡಲಿಲ್ಲ. ನಮ್ಮ ಪಾಲು ನಮಗೆ ಬೇಡವೇ? ಸರ್ಕಾರಗಳು ನ್ಯಾಯ ಕೊಡಿಸುವಲ್ಲಿ ಮೀನಮೇಷ ಎಣಿಸುತ್ತಿವೆ. ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಜಾರಿಗೆ ತರಲಿಲ್ಲ.
| ಮಾ.ಮುನಿರಾಜು
ದಲಿತ ವಿಮೋಚನಾ ಸೇನೆ ಸಂಸ್ಥಾಪಕ