

ಹುಬ್ಬಳ್ಳಿ: ದೇಶಪಾಂಡೆನಗರ ಬ್ಯಾಹಟ್ಟಿ ಪ್ಲಾಟ್ ಬಡಾವಣೆಯಲ್ಲಿ ನಿತ್ಯವೂ ರಸ್ತೆಯ ಮೇಲೆ ಒಳಚರಂಡಿ ನೀರು ಹರಿಯುವುದನ್ನು ನಿಲ್ಲಿಸಲು ಹು-ಧಾ ಮಹಾನಗರ ಪಾಲಿಕೆ ಮುಂದಾಗಿದೆ.
25-30 ಮೀಟರ್ ಉದ್ದಕ್ಕೆ ಹೊಸದಾಗಿ ಕೊಳವೆ ಮಾರ್ಗ ಅಳವಡಿಸುವ ಕಾಮಗಾರಿಯನ್ನು ಆರಂಭಿಸಲಾಗಿದೆ. ಒಂದು ಚೇಂಬರ್ನಿಂದ ಇನ್ನೊಂದು ಚೇಂಬರ್ ನಡುವೆ ಹೊಸದಾಗಿ ಕೊಳವೆ ಮಾರ್ಗ ಅಳವಡಿಸಲಾಗುತ್ತಿದೆ. ಒಂದೆರಡು ದಿನಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಪಾಲಿಕೆ ತಿಳಿಸಿದೆ.
ದೇಶಪಾಂಡೆನಗರದ ಟಿ.ಬಿ. ರಸ್ತೆಯಿಂದ ಬಿಜೆಪಿ ಕಚೇರಿಗೆ ತೆರಳುವ ಮಾರ್ಗದಲ್ಲಿನ ಬ್ಯಾಹಟ್ಟಿ ಪ್ಲಾಟ್ ರಾಧಿಕಾ-ಬಿ ಅಪಾರ್ಟ್ವೆುಂಟ್ ಬಳಿ ರಸ್ತೆ ತಿರುವಿನಲ್ಲಿ ಒಳಚರಂಡಿ ಬ್ಲಾಕ್ ಆಗಿ ಮಲೀನ ನೀರು ರಸ್ತೆಯ ಮೇಲೆ ನಿರಂತರ ಹರಿಯುತ್ತಿತ್ತು. ಈ ಕುರಿತು ಸೆ. 4ರಂದು ವಿಜಯವಾಣಿ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿತ್ತು. ಕಳೆದ 2-3 ವರ್ಷಗಳಿಂದ ಪದೇ ಪದೆ ಈ ಸಮಸ್ಯೆ ಎದುರಾಗಿತ್ತು. ಈ ಬಡಾವಣೆಯಲ್ಲಿ ಜನವಸತಿ, ವಾಣಿಜ್ಯ ಮಳಿಗೆಗಳ ಸಂಖ್ಯೆ ಹೆಚ್ಚಿರುವುದರಿಂದ ಒಳಚರಂಡಿ ನೀರು ತುಳಿದುಕೊಂಡೇ ಜನರು ಮುಂದೆ ಸಾಗಬೇಕಿತ್ತು. ಹಿಂದೆಲ್ಲ ದೂರು ನೀಡಿದಾಗ ಪಾಲಿಕೆಯವರು ತಾತ್ಕಾಲಿಕ ಕೆಲಸ ಮಾಡಿ ಹಾಗೇ ಹೋಗುತ್ತಿದ್ದರು. ಇದೀಗ ಶಾಶ್ವತ ಕಾಮಗಾರಿ ಕೈಗೊಂಡಿದ್ದಾರೆ.