

ಮದ್ದೂರು: ಪಟ್ಟಣದ ಪುರಸಭಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ವೈಜ್ಞಾನಿಕವಾಗಿ ನಿರ್ಮಿಸದ ಕಾರಣ ಒಳಚರಂಡಿ ನೀರು ಹೆದ್ದಾರಿಯಲ್ಲಿ ಹರಿದು ಸಾರ್ವಜನಿಕರಿಗೆ ಹಾಗೂ ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಪುರಸಭಾ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಆಗಮಿಸಿ ಸಮಸ್ಯೆಯಾಗದಂತೆ ಅಗತ್ಯ ಕ್ರಮ ಕೈಗೊಂಡರು.
ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೈಗೆತ್ತಿಕೊಂಡಿರುವ ಕಾಮಗಾರಿ ವಿಳಂಬದಿಂದಾಗಿ ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದ ಮುಂಭಾಗ ಒಳಚರಂಡಿಯ ಕಲುಷಿತ ಕೊಳಚೆ ನೀರು ರಸ್ತೆಯಲ್ಲಿ ಹರಿಯುತ್ತಿದ್ದು ಇದರಿಂದ ಬಸ್ ನಿಲ್ದಾಣಕ್ಕೆ ಬರುವ ಸಾರ್ವಜನಿಕರು ಈ ನೀರನ್ನು ತುಳಿದುಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಪುರಸಭೆಗೆ ಅನೇಕ ದೂರಗಳು ಸಾರ್ವಜನಿಕರಿಂದ ಬಂದ ಹಿನ್ನೆಲೆಯಲ್ಲಿ ಪುರಸಭೆ ಅಧ್ಯಕ್ಷ ಸುರೇಶ್‌ಕುಮಾರ್ ಹಾಗೂ ಸದಸ್ಯರು ಸ್ಥಳಕ್ಕೆ ಜೆಸಿಬಿ ಕರೆಸಿ ರಸ್ತೆಯಲ್ಲಿ ಹರಿಯುತ್ತಿದ್ದ ಕೊಳಚೆ ಕಲುಷಿತ ನೀರನ್ನು ರಸ್ತೆ ಬದಿಯಲ್ಲಿ ಹೋಗುವಂತೆ ಮಾಡಿ ಸಾರ್ವಜನಿಕರು, ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಿದರು.
ಕಲುಷಿತ ನೀರು ಹೊರಹಾಕಲು ಟ್ರಂಚ್ ತೆಗೆದ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು ನಿಲ್ದಾಣ ಒಳಗೆ ಹೋಗದೆ ರಸ್ತೆಯಲ್ಲಿ ನಿಂತು ಟ್ರಾಫಿಕ್ ಜಾಮ್ ಆಗಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ಕುಮಾರ್‌ಗೆ ಸಾರ್ವಜನಿಕರು ತೀವ್ರವಾಗಿ ತರಾಟೆ ತೆಗೆದುಕೊಂಡರು.
ದಿಲೀಪ್ ಬಿಲ್ಡ್ ಖಾನ್ ಸಂಸ್ಥೆಯ ಇಂಜಿನಿಯರ್ ಉಮಾಪತಿ ಸ್ಥಳಕ್ಕೆ ಭೇಟಿ ನೀಡಿ, ಹೆದ್ದಾರಿಯಲ್ಲಿರುವ ಅವ್ಯವಸ್ಥೆಯನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಇಂಜಿನಿಯರ್ ಉಮಾಪತಿಗೆ ಸಾರ್ವಜನಿಕರು ಘೇರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಸುಮಾರು 2 ವರ್ಷಗಳಿಂದ ಹೆದ್ದಾರಿ ಕಾಮಗಾರಿಯನ್ನು ಆಮೆ ಗತಿಯಲ್ಲಿ ಮಾಡಲಾಗುತ್ತಿದೆ. ಇದರಿಂದ ಪ್ರಯಾಣಿಕರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿ ಸಮಸ್ಯೆ ಸರಿಪಡಿಸುವರೆಗೂ ನೀವು ಸ್ಥಳದಿಂದ ಹೋಗದಂತೆ ತಾಕೀತು ಮಾಡಿದರು.
ಉಮಾಪತಿ ಅವರು ದಿಲೀಪ್ ಬಿಲ್ಡ್ ಕಾನ್‌ನ ಚರಂಡಿ ಕಾಮಗಾರಿ ವಿಭಾಗದ ಇಂಜಿನಿಯರನ್ನು ಸ್ಥಳಕ್ಕೆ ಕರೆಸಿ ಬೆಳಗ್ಗೆ ಒಳಗೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಒಳಗೆ ಮತ್ತು ಹೊರಗೆ ಬಸ್ ಹೋಗಲು ತಾತ್ಕಾಲಿಕ ಸ್ಲಾೃಬ್ ಹಾಕಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲು ಸೂಚಿಸಲಾಯಿತು. ಸ್ಥಳೀಯ ವ್ಯಾಪಾರಿಗಳಿಗೆ ತೊಂದರೆ ಆಗದಂತೆ ವ್ಯವಸ್ಥಿತವಾಗಿ ಕಾಮಗಾರಿಯನ್ನು ಎರಡು ದಿನದಲ್ಲಿ ಕೈಗೆತ್ತಿಕೊಳ್ಳುವ ಭರವಸೆಯನ್ನು ಸ್ಥಳೀಯರಿಗೆ ನೀಡಿದ ನಂತರ ಸಾರ್ವಜನಿಕರು ಸಮಾಧಾನಗೊಂಡರು.
ಪುರಸಭೆ ಅಧ್ಯಕ್ಷ ಸುರೇಶ್‌ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಸನ್ನ, ಉಪಾಧ್ಯಕ್ಷೆ ಸುಮಿತ್ರಾ ರಮೇಶ್, ಸದಸ್ಯರಾದ ಎಂ.ಐ.ಪ್ರವೀಣ್ ಸಿದ್ದರಾಜು, ಬಸವರಾಜು, ಆದಿಲ್‌ಅಲಿಖಾನ್, ಮನೋಜ್, ಪ್ರಮೀಳಾ ಇದ್ದರು.