

ಚಿತ್ರದುರ್ಗ: ಪರಿಶಿಷ್ಟ ಜಾತಿ ಒಳ ಮೀಸಲು ವರ್ಗೀಕರಣಕ್ಕೆ ಸಂಬಂಧ ವಿವಿಧ ಅಂಶಗಳ ಕುರಿತ ದತ್ತಾಂಶ ಸಂಗ್ರಹಣೆಗೆ ನಡೆದಿರುವ ಸಮೀಕ್ಷೆ ಕಾರ್ಯಾವಧಿಯನ್ನು ಮೇ 28ರವರೆಗೆ ವಿಸ್ತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ತಿಳಿಸಿದ್ದಾರೆ.
ಒಳಮೀಸಸಲಿಗೆ ಪರಿಶಿಷ್ಟ ಜಾತಿ ಕುಟುಂಬಗಳ ಸಮೀಕ್ಷೆ ಕಾರ್ಯ ಮೇ 5 ರಿಂದ ಆರಂಭಗೊಂಡಿದೆ. ಸರ್ಕಾರದ ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ಕಳೆದ 16ರಂದು ಜರುಗಿದ ವಿಡಿಯೊ ಸಂವಾದ ಸಭೆಯಲ್ಲಿ ಸೂಚಿಸಿದಂತೆ ಈಗ ಸಮೀಕ್ಷೆ ಕಾರ್ಯವನ್ನು 28ರವರೆಗೆ ವಿಸ್ತರಿಸಲಾಗಿದೆ. ಈ ಹಿಂದಿನ ವೇಳಾಪಟ್ಟಿಯಂತೆ ಒಟ್ಟಾರೆ ಸಮೀಕ್ಷಾ ಕಾರ್ಯ ಮೇ 23 ರವರೆಗೆ ನಡೆಸಬೇಕಾಗಿತ್ತು.
ಪರಿಷ್ಕೃತ ವೇಳಾಪಟ್ಟಿಯಂತೆ ಮೊದಲನೇ ಹಂತದಲ್ಲಿ ಮನೆ, ಮನೆಗಳಿಗೆ ಭೇಟಿ ನೀಡಿ ಕೈಗೊಳ್ಳುವ ಸಮೀಕ್ಷೆ ಮೇ 25 ರವರೆಗೆ ಜರುಗಲಿದೆ. 2ನೇ ಹಂತದಲ್ಲಿ ಸಮೀಕ್ಷೆ ಬ್ಲಾಕ್‌ಗಳಲ್ಲಿ ವಿಶೇಷ ಶಿಬಿರಗಳನ್ನು ಕೈಗೊಂಡು, ಮನೆ-ಮನೆ ಭೇಟಿ ಅವಧಿ ಬಿಟ್ಟುಹೋದ ಪರಿಶಿಷ್ಟ ಜಾತಿ ಕುಟುಂಬಗಳ ಮಾಹಿತಿ ಸಂಗ್ರಹಿಸುವ ಕಾರ್ಯ 28ರವರೆಗೆ ಜರುಗಲಿದೆ.
ಮೂರನೇ ಹಂತದಲ್ಲಿ ಸ್ವಯಂ ಘೋಷಣೆ ಮಾಡಿ, ಆನ್‌ಲೈನ್ ಮೂಲಕ ಸಮೀಕ್ಷೆ ಕಾರ್ಯ ಕೂಡ 28ರವರೆಗೆ ಜರುಗಲಿದೆ. ಒಳ ಮೀಸಲಾತಿ ವರ್ಗೀಕರಣ ಕುರಿತು ನ್ಯಾಯಮೂರ್ತಿ ಡಾ.ಎಚ್.ಎನ್.ನಾಗಮೋಹನದಾಸ್ ಅವರ ಏಕ ಸದಸ್ಯ ವಿಚಾರಣಾ ಆಯೋಗವನ್ನು ಸರ್ಕಾರ ರಚಿಸಿದೆ. ಪರಿಷ್ಕೃತ ವೇಳಾಪಟ್ಟಿ ಅನ್ವಯ ಸಮೀಕ್ಷೆ ಸಂದರ್ಭದಲ್ಲಿ ಗಣತಿದಾರರಿಗೆ ಮತ್ತು ಮೇಲ್ವಿಚಾರಕರಿಗೆ ಕುಟುಂಬದ ಸಂಪೂರ್ಣ ಮಾಹಿತಿ ನೀಡಿ ಸಮೀಕ್ಷೆ ಯಶಸ್ವಿಗೊಳಿಸಬೇಕೆಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಕೋರಿದ್ದಾರೆ.
----